ಕರಾವಳಿ

ಮಲೇಷ್ಯಾದಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ಸ್ಪರ್ಧೆ: ಚಿನ್ನ, ಬೆಳ್ಳಿ ಗೆದ್ದ ಧನ್ವಿ ಮರವಂತೆ

Pinterest LinkedIn Tumblr

ಕುಂದಾಪುರ: ಮಲೇಷ್ಯಾದ ಕೌಲಾಲಂಪುರದಲ್ಲಿರುವ ಎಸ್‌ಜಿ‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಯೋಗ ಫೌಂಡೇಶನ್ ಕಾಲೇಜ್ ಎಂಡ್ ರಿಸರ್ಚ್ ಸೆಂಟರ್‌ನಲ್ಲಿ ಅ. 12, 13ರಂದು ನಡೆದ ಟ್ರ್ಯಾಕ್ಸ್ ಇಂಟರ್‌ನ್ಯಾಶನಲ್ ಯೋಗ ಕಾರ್ನಿವಲ್‌ನಲ್ಲಿ ಮರವಂತೆಯ 11ರ ಹರೆಯದ ಚುರುಕಿನ ಬಾಲೆ ಧನ್ವಿ ಪೂಜಾರಿ ಒಂದು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಪಡೆದು ವಿಕ್ರಮ ಮೆರೆದಿದ್ದಾಳೆ.  ಅಥ್ಲೆಟಿಕ್ ಯೋಗ ಚಾಂಪಿಯನ್‌ಶಿಪ್ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿ ಚಿನ್ನದ ಪದಕ ಮತ್ತು ಆರ್ಟಿಸ್ಟಿಕ್ ಯೋಗ ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಗೆದ್ದುಕೊಂಡಿದ್ದಾಳೆ.

ಹತ್ತಾರು ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ, ಪ್ರಶಸ್ತಿ ಗಳಿಸಿರುವ ಧನ್ವಿ ಕಳೆದ ತಿಂಗಳ 18ರಂದು ಬೆಂಗಳೂರಿನ ಫ್ರೀಡಮ್ ಪಾರ್ಕ್‌ನಲ್ಲಿ ನಡೆದ ಐದನೆಯ ರಾಷ್ಟ್ರೀಯ ಅಥ್ಲೆಟಿಕ್ಸ್ ಯೋಗಾಸನ ಸ್ಫರ್ಧೆಯ 10-12 ವಯೋವಿಭಾಗದಲ್ಲಿ ಅರ್ಹತಾ ಪತ್ರ ಗಳಿಸಿದ್ದಳು. 24,25ರಂದು ಚೆನ್ನೈನಲ್ಲಿ ನಡೆದ ಜಾಗತಿಕ ಯೋಗೋತ್ಸವದಲ್ಲಿ ನಾಲ್ಕನೆಯ ಸ್ಥಾನ ಗಳಿಸುವುದರ ಜತೆಗೆ ಜಾಗತಿಕ ದಾಖಲೆ ಪ್ರಯತ್ನದಲ್ಲಿ ಒಂದೂವರೆ ನಿಮಿಷ ಕಾಲ ವೀರಭದ್ರಾಸನ ಪ್ರದರ್ಶಿಸಿ ಪ್ರಶಂಸಾಪತ್ರ ಗಿಟ್ಟಿಸಿದ್ದಳು. ಆ ಸಾಧನೆಗಳ ಆಧಾರದಲ್ಲಿ ಕೌಲಾಲಂಪುರ್ ಯೋಗೋತ್ಸವಕ್ಕೆ ಆಹ್ವಾನ ಪಡೆದಿದ್ದಳು. ಹಲವು ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿ, ಅವರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚಲು ಕಾರಣರಾದ ನಾವುಂದದ ಯೋಗ ಶಿಕ್ಷಕ ಸುಬ್ಬಯ್ಯ ದೇವಾಡಿಗರಿಂದ ಯೋಗಾಭ್ಯಾಸ ಪಡೆಯುತ್ತಿರುವ ಧನ್ವಿ ಸುಮಾರು 20 ಯೋಗಾಸನಗಳಲ್ಲಿ ಉತ್ಕೃಷ್ಟತೆ ಸಾಧಿಸಿಕೊಂಡಿದ್ದಾಳೆ.

ತ್ರಾಸಿಯ ಡಾನ್ ಬೋಸ್ಕೊ ಶಾಲೆಯಲ್ಲಿ 6 ನೆ ತರಗತಿಯಲ್ಲಿ ಕಲಿಯುತ್ತಿರುವ ಧನ್ವಿ ಬಹುಮುಖ ಪ್ರತಿಭಾನ್ವಿತೆ. ಕಲಿಕೆಯಲ್ಲೂ ಮುಂದಿರುವುದರ ಜತೆಗೆ ನೃತ್ಯ ವೈವಿಧ್ಯಗಳಲ್ಲಿ ಕುಂದಾಪುರದ ಪ್ರವೀಣ್ ನೇತೃತ್ವದ ಮಿರಕಲ್ ಡಾನ್ಸ್ ಗ್ರೂಪ್‌ನಿಂದ ಪರಿಣತಿ ಪಡೆದು, ಪ್ರದರ್ಶನ ನೀಡಿ ಪಾರಿತೋಷಕ ಗಳಿಸಿದ್ದಾಳೆ. ತುಂಬ ಚೂಟಿಯಾಗಿರುವ ಈ ಹುಡುಗಿಗೆ ನಟನಾ ಚಾತುರ್ಯವೂ ಇದೆ. ಈಗ ಬಿಡುಗಡೆಗೊಂಡಿರುವ ರವಿ ಬಸ್ರೂರು ಅವರ ’ಗಿರ್ಮಿಟ್’ ಪಿ. ಶೇಷಾದ್ರಿ ಅವರ ’ಮೂಕಜ್ಜಿಯ ಕನಸುಗಳು’ ಚಿತ್ರಗಳಲ್ಲಿ ಕಿರುಪಾತ್ರಗಳನ್ನು, ಶಶಿಧರ ಗುಜ್ಜಾಡಿ ಅವರ ’ ನಿಧಾನ ಇಲ್ಲವೆ ನಿಧನ’ ಕಿರುಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದಾಳೆ.

ಧನ್ವಿ ಮರವಂತೆಯ ಶಿವಮ್ಮಾಸ್ತಿಮನೆ ಚಂದ್ರಶೇಖರ ಪೂಜಾರಿ-ಜ್ಯೋತಿ ದಂಪತಿಯ ಪುತ್ರಿ. ಅಣ್ಣ ವೇದಾಂತ್ 9ನೆ ತರಗತಿ ವಿದ್ಯಾರ್ಥಿ. ಜ್ಯೋತಿಯ ಇಬ್ಬರು ಅಕ್ಕಂದಿರಲ್ಲಿ ಒಬ್ಬಳು ವಿಕಲ ಚೇತನಳು. ಕೂಲಿಮಾಡಿ ಬದುಕುವ ಬಡ ಅವಿಭಕ್ತ ಕುಟುಂಬ ಅವರದು. ಮಲೇಷ್ಯಾ ಸ್ಪರ್ಧೆಯಲ್ಲಿ ಭಾಗವಹಿಸಲು ಸಂಘಸಂಸ್ಥೆಗಳು, ದಾನಿಗಳು ನೆರವು ನೀಡಿದ್ದರು.

ಧನ್ವಿಯ ಸಾಧನೆಯ ಸುದ್ದಿ ತಿಳಿಯುತ್ತಿದ್ದಂತೆ ಮರವಂತೆಯಲ್ಲಿ ಸಂಭ್ರಮ ಮನೆಮಾಡಿದೆ. ಸಾರ್ವಜನಿಕ ನೆಲೆಯಲ್ಲಿ ಅವಳನ್ನು ಅದ್ದೂರಿಯಾಗಿ ಸ್ವಾಗತಿಸಿ, ಅಭಿನಂದಿಸಲು ಸಿದ್ಧತೆಗಳು ನಡೆದಿವೆ.

ಇದನ್ನೂ ಓದಿರಿ: ಗುರುವಿಲ್ಲದೆ ‘ಯೋಗ’ದ ಗುರಿ ಸಾಧಿಸಿದ ‘ಇಂಡಿಯನ್ ಬಟರ್ ಫ್ಲೈ’ ಧನ್ವಿಗೆ ವೈದ್ಯೆಯಾಗುವ ಬಯಕೆ! (Video)

Comments are closed.