ಕರಾವಳಿ

ಗುರುವಿಲ್ಲದೆ ‘ಯೋಗ’ದ ಗುರಿ ಸಾಧಿಸಿದ ‘ಇಂಡಿಯನ್ ಬಟರ್ ಫ್ಲೈ’ ಧನ್ವಿಗೆ ವೈದ್ಯೆಯಾಗುವ ಬಯಕೆ! (Video)

Pinterest LinkedIn Tumblr

ಕುಂದಾಪುರ: ಮಲೇಷ್ಯಾದ ಕೌಲಾಲಂಪುರದಲ್ಲಿರುವ ಎಸ್‌ಜಿ‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಯೋಗ ಫೌಂಡೇಶನ್ ಕಾಲೇಜ್ ಎಂಡ್ ರಿಸರ್ಚ್ ಸೆಂಟರ್‌ನಲ್ಲಿ ಅ. 12, 13ರಂದು ನಡೆದ ಟ್ರ್ಯಾಕ್ಸ್ ಇಂಟರ್‌ನ್ಯಾಶನಲ್ ಯೋಗ ಕಾರ್ನಿವಲ್‌ನಲ್ಲಿ ನಡೆದ ಅಥ್ಲೆಟಿಕ್ ಯೋಗ ಚಾಂಪಿಯನ್‌ಶಿಪ್ ವಿಭಾಗದಲ್ಲಿ ಮೊದಲ ಸ್ಥಾನ ಹಾಗೂ ಚಿನ್ನದ ಪದಕ ಮತ್ತು ಆರ್ಟಿಸ್ಟಿಕ್ ಯೋಗ ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಗೆದ್ದ ಮರವಂತೆಯ 11ರ ಹರೆಯದ ಧನ್ವಿ ಪೂಜಾರಿಯವರಿಗೆ ಕುಂದಾಪುರದಲ್ಲಿ ಗುರುವಾರ ಬೆಳಿಗ್ಗೆ ಅದ್ಧೂರಿ ಸ್ವಾಗತ ಕೋರಲಾಯಿತು.

ಕುಂದಾಪುರ ತಾಲೂಕು ಬಿಲ್ಲವ ಸಂಘ, ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಧನ್ವಿಯವರಿಗೆ ಅಭಿನಂದಿಸಿ ತೆರದ ವಾಹನದಲ್ಲಿ ಕುಂದಾಪುರದಿಂದ ಮರವಂತೆಯವರೆಗೆ ಮೆರವಣಿಗೆ ಮೂಲಕ ಕರೆದೊಯ್ದರು.

   

ತುಂಬಾ ಖುಶಿಯಾಗಿದೆ: ಧನ್ವಿ
ಈ ಸಂದರ್ಭ ಮಾಧ್ಯಮಗಳ ಜೊತೆ ‘ಕುಂದಾಪುರ ಕನ್ನಡ’ದಲ್ಲಿ ಮಾತನಾಡಿದ ಸಾಧಕಿ ಧನ್ವಿ, ಈ ಸ್ಪರ್ಧೆಯಲ್ಲಿ 7 ದೇಶಗಳು ಭಾಗವಹಿಸಿದ್ದು ಕೊಂಚ ಭಯವಾಗಿತ್ತು. ಗುರುವಿಲ್ಲದೆ ಈ ಸಾಧನೆ ಮಾಡಿದ್ದು ಬಳಿಕ ಸುಬ್ಬಯ್ಯ ದೇವಾಡಿಗರು ಮಾರ್ಗದರ್ಶನ ನೀಡಿದ್ದಾರೆ. ಎಲ್ಲರೂ ನನ್ನ ಬಳಿ ಸೆಲ್ಫಿ ಕೇಳಿದ್ದರು. ನಾನಲ್ಲಿ ಡ್ಯಾನ್ಸ್ ಮಾಡುತ್ತಿದ್ದಂತೆಯೇ ನನಗೆ ಇಂಡಿಯನ್ ಬಟರ್ ಫ್ಲೈ ಎಂದು ಹೆಸರಿಟ್ಟಿದ್ದು ತುಂಬಾ ಖುಷಿಕೊಟ್ಟಿದೆ.

ವೈದ್ಯೆಯಾಗುವೆ..ಬಡವರ ಸೇವೆ ಮಾಡುವೆ
ನಿತ್ಯ ಬೆಳಿಗ್ಗೆ ಆರು ಗಂಟೆಯಿಂದ ಎಂಟು ಗಂಟೆಯವರೆಗೆ ಹಾಗೂ ರಾತ್ರಿ ಸಮಯ ಸಿಕ್ಕಲ್ಲಿ ಅಭ್ಯಾಸ ಮಾಡುತ್ತಿದ್ದೆ. ಯೋಗ ಹಾಗೂ ಡ್ಯಾನ್ಸ್ ಮುಂದುವರೆಸುವೆ ಅಲ್ಲದೇ ಮುಂದೆ ನಾನು ವೈದ್ಯೆಯಾಗಿ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವೆ. ನಾನು ಈ ಸಾಧನೆ ಮಾಡಲು ಸಂಗಮ್ ಸುಭಾಷ್ ಸೇರಿದಂತೆ ಹಲವು ಸಂಘಸಂಸ್ಥೆಗಳು, ಹಾಗೂ ದಾನಿಗಳು, ನ್ರತ್ಯ ತರಬೇತಿ ಕೇಂದ್ರದವರು, ಮನೆಯವರು ಸಹಕರಿಸಿದ್ದರು. ಅವಧೂತ ವಿನಯ್ ಗುರೂಜಿಯವರು ನನ್ನನ್ನು ಹರಸಿ ಗೆದ್ದು ಬರುವುದಾಗಿ ಆಶಿರ್ವಾದ ನೀಡಿದ್ದರು. ಎಂದು ಹೇಳಿದ್ದಾಳೆ.

ಧನ್ವಿ ಯಾರು?
ತ್ರಾಸಿಯ ಡಾನ್ ಬೋಸ್ಕೊ ಶಾಲೆಯಲ್ಲಿ 6 ನೆ ತರಗತಿಯಲ್ಲಿ ಕಲಿಯುತ್ತಿರುವ ಧನ್ವಿ ಬಹುಮುಖ ಪ್ರತಿಭಾನ್ವಿತೆಯಾಗಿದ್ದು ಸುಮಾರು 20 ಯೋಗಾಸನಗಳಲ್ಲಿ ಉತ್ಕೃಷ್ಟತೆ ಸಾಧಿಸಿದ್ದಾಳೆ. ಕಲಿಕೆಯಲ್ಲೂ ಮುಂದಿರುವುದರ ಜತೆಗೆ ನೃತ್ಯ ವೈವಿಧ್ಯಗಳಲ್ಲಿ ಕುಂದಾಪುರದ ಪ್ರವೀಣ್ ನೇತೃತ್ವದ ಮಿರಕಲ್ ಡಾನ್ಸ್ ಗ್ರೂಪ್‌ನಿಂದ ಪರಿಣತಿ ಪಡೆದು, ಪ್ರದರ್ಶನ ನೀಡಿ ಪಾರಿತೋಷಕ ಗಳಿಸಿದ್ದಾಳೆ. ತುಂಬ ಚೂಟಿಯಾಗಿರುವ ಈ ಹುಡುಗಿಗೆ ನಟನಾ ಚಾತುರ್ಯ, ಯಕ್ಷಗಾನ, ಭರತನಾಟ್ಯ, ಸ್ಕೇಟಿಂಗ್, ಏಕಪಾತ್ರ ಅಭಿನಯ, ಕಾಮೆಡಿ ಶೋ, ರಿಯಾಲಿಟಿ ಶೋ, ಮೊದಲಾದ ಪ್ರಾವಿಣ್ಯತೆ ಈಕೆಗಿದೆ. ಧನ್ವಿ ಮರವಂತೆಯ ಶಿವಮ್ಮಾಸ್ತಿಮನೆ ಚಂದ್ರಶೇಖರ ಪೂಜಾರಿ-ಜ್ಯೋತಿ ದಂಪತಿಯ ಪುತ್ರಿ. ಅಣ್ಣ ವೇದಾಂತ್ 9ನೆ ತರಗತಿ ವಿದ್ಯಾರ್ಥಿ. ಜ್ಯೋತಿಯ ಇಬ್ಬರು ಅಕ್ಕಂದಿರಲ್ಲಿ ಒಬ್ಬಳು ವಿಕಲ ಚೇತನಳು. ಕೂಲಿಮಾಡಿ ಬದುಕುವ ಬಡ ಅವಿಭಕ್ತ ಕುಟುಂಬ ಅವರದು.

ಅದ್ಧೂರಿ ಸ್ವಾಗತಕ್ಕೆ ಜೊತೆಯಾದವರು..
ಈ ಸಂದರ್ಭ ಮಹಿಳಾ ಸಾಂತ್ವಾನ ಕೇಂದ್ರದ ಅಧ್ಯಕ್ಷೆ ರಾಧಾದಾಸ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜುಪೂಜಾರಿ, ಬಿಲ್ಲವ ಮುಖಂಡರಾದ ಮಂಜು ಬಿಲ್ಲವ, ಭಾಸ್ಕರ ಬಿಲ್ಲವ, ನಾರಾಯಣಗುರು ಯುವಕಮಂಡಲ, ಮೈಲಾರೇಶ್ವರ ಯುವಕ ಮಂಡಲ, ರಾಯಲ್ ಕ್ಲಬ್, ಕುಂದಾಪುರ ಜೆಸಿಐ, ಸಂಗಮ್ ಫ್ರೆಂಡ್ಸ್ ಕುಂದಾಪುರ, ಕುಂದಾಪುರ ಪುರಸಭೆಯ ಸದಸ್ಯರುಗಳು, ಮಿರಾಕಲ್ ಡಾನ್ಸ್ ಅಕಾಡೆಮಿ ಮುಖ್ಯಸ್ಥ ಪ್ರವೀಣ್ ಬಾಳಿಕೆರೆ, ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜನಾರ್ಧನ ಮರವಂತೆ, ಕಾರ್ಯದರ್ಶಿ ಅರುಣ್ ಕುಮಾರ್ ಶಿರೂರು, ಕುಂದಾಪುರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಭಾಸ್ಕರ ಶೆಟ್ಟಿ, ಹಾಗೂ ಪದಾಧಿಕಾರಿಗಳು, ವಿವಿಧ ಪಕ್ಷ ಹಾಗೂ ಸಂಘಟನೆಗಳ ಮುಖಂಡರಾದ ಮನ್ಸೂರ್ ಮರವಂತೆ, ಹುಸೇನ್ ಹೈಕಾಡಿ, ಸುರೇಂದ್ರ ಸಂಗಮ್, ದಿವಾಕರ ಕಡ್ಗಿ ಮೊದಲಾದವರಿದ್ದರು.

(ವರದಿ- ಯೋಗೀಶ್ ಕುಂಭಾಸಿ)

ಇದನ್ನೂ ಓದಿರಿ: ಮಲೇಷ್ಯಾದಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ಸ್ಪರ್ಧೆ: ಚಿನ್ನ, ಬೆಳ್ಳಿ ಗೆದ್ದ ಧನ್ವಿ ಮರವಂತೆ

Comments are closed.