
ಬೆಂಗಳೂರು: ಐಪಿಎಲ್ 12ನೇ ಆವೃತ್ತಿಯ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಸೇಲ್ಆಗಿ ಅಚ್ಚರಿ ಮೂಡಿಸಿರುವ ಆಟಗಾರ ವರುಣ್ ಚಕ್ರವರ್ತಿ. ತಮಿಳುನಾಡು ಮೂಲದ ಈ ಸ್ಪಿನ್ನರ್ ಇಷ್ಟು ಮೊತ್ತಕ್ಕೆ ಹರಾಜಾಗಿದ್ದು ಹೇಗೆ, ಮತ್ತು ಏಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಅದಕ್ಕೆ ಉತ್ತರ ಇಲ್ಲಿದೆ..
ತಮಿಳುನಾಡು ಮೂಲದ ಯುವ ಸ್ಪಿನ್ನರ್ ವರುಣ್ ಚಕ್ರವರ್ತಿ, ರಾತ್ರೋ ರಾತ್ರಿ ಕೋಟ್ಯಾಧಿಪತಿ ಆಗಿದ್ದಾರೆ. ಐಪಿಎಲ್ ಹರಾಜಿನಲ್ಲಿ ಇವರ ಮೂಲ ಬೆಲೆ 20 ಲಕ್ಷ ರೂಪಾಯಿ. ಆದರೆ ಸೇಲ್ ಆಗಿದ್ದು ಮಾತ್ರ ಬರೋಬ್ಬರಿ 8.4 ಕೋಟಿ ರೂ. ಮೊತ್ತಕ್ಕೆ. ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿ, ಇವರಿಗೆ 8.4 ಕೋಟಿ ರೂಪಾಯಿ ಕೊಟ್ಟು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ವರುಣ್ ಹೆಸರು ಕೂಗುತ್ತಿದ್ದಂತೆ ಫ್ರಾಂಚೈಸಿಗಳು ಖರೀದಿಗೆ ಮುಗಿ ಬಿದ್ದವು. ಹೀಗಾಗೆ 8.4 ಕೋಟಿಗೆ ವರುಣ್ ಹರಾಜಾಗಲು ಎಡೆಮಾಡಿಕೊಟ್ಟಿತು. ಆದರೆ ಓರ್ವ ದೇಶಿ ಆಟಗಾರ ಇಷ್ಟರ ಮಟ್ಟಿಗೆ ಹರಾಜಾಗಲು ಕಾರಣವೂ ಇದೆ.
ತನ್ನ 13ನೇ ವಯಸ್ಸಿನಲ್ಲೇ ಕ್ರಿಕೆಟ್ ಆಡಲು ಶುರುಮಾಡಿದ ವರುಣ್ 17ನೇ ವಯಸ್ಸಿನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಿದರು .ಆದರೆ, ಅವಕಾಶ ಸಿಗದ ಕಾರಣ ವಿಧ್ಯಾಭ್ಯಾಸ ಮುಂದುವರಿಸಿ ಡಿಗ್ರಿ ಸಂಪಾದಿಸಿದರು. ಇದಾದ ಬಳಿಕ ಮತ್ತೆ ಕ್ರಿಕೆಟ್ಗೆ ಮರಳಿ ವೇಗದ ಬೌಲರ್ ಆಗಿ ಗುರುತಿಸಿಕೊಂಡ ವರುಣ್, ಗಂಭೀರವಾಗಿ ಗಾಯಗೊಂಡು ಮತ್ತೆ ಕ್ರಿಕೆಟ್ನಿಂದ ಹೊರಗುಳಿಯಬೇಕಾದ ಪರಿಸ್ಥಿತಿ ಎದುರಾಯಿತು. ಆದರೆ, ಇವರ ಕನಸು ಹಾಗೂ ಕಠಿಣ ಪರಿಶ್ರಮ ಮತ್ತೆ ಕ್ರಿಕೆಟ್ಗೆ ವಾಪಸ್ ತಂದಿತು.
ಕಠಿಣ ಅಭ್ಯಾಸದ ಬಳಿಕ ಮತ್ತೆ ಕ್ರಿಕೆಟ್ಗೆ ಮರಳಿದ ವರುಣ್ ಅವರಿಗೆ ತಮಿಳುನಾಡು ಟಿ-20 ಲೀಗ್, TNPL ನಲ್ಲಿ ಆಡುವ ಅವಕಾಶ ಸಿಕ್ಕಿತು. ಮಧುರೈ ಪ್ಯಾಂಥರ್ಸ್ ಪರ ಆಡಿದ ಇವರು ಮಿಸ್ಟರಿ ಸ್ಪಿನ್ನರ್ ಆಗಿ ಕಂಗೊಳಿಸಿದರು. ಆಫ್ಬ್ರೇಕ್, ಲೆಗ್ಬ್ರೇಕ್, ಗೂಗ್ಲಿ, ಕೇರಂಬಾಲ್, ಫ್ಲಿಪ್ಪರ್ ಹಾಗೂ ಟಾಪ್ ಸ್ಪಿನ್ ಮೂಲಕ ಎದುರಾಳಿಯನ್ನು ಕಂಗೆಡೆಸಿದರು. ಅಷ್ಟೇ ಅಲ್ಲದೆ 7 ಪಂದ್ಯಗಳಲ್ಲಿ 31 ವಿಕೆಟ್ ಪಡೆದು ತಂಡದ ಪರ ಟಾಪ್ ಬೌಲರ್ ಆಗಿ ಗುರುತಿಸಿಕೊಂಡರು.
ಇದರ ಜೊತೆಗೆ ವಿಜಯ್ ಹಜಾರೆ ಟೂರ್ನಿಯಲ್ಲೂ ತಮಿಳುನಾಡು ಪರ 22 ವಿಕೆಟ್ ಕಬಳಿಸಿ ಎಲ್ಲರ ಗಮನ ಸೆಳೆದಿದ್ದರು ವರುಣ್ ಚಕ್ರವರ್ತಿ. ಹೀಗಾಗೆ ಹರಾಜಿಗೂ ಮುನ್ನವೇ ಎಲ್ಲಾ ಫ್ರಾಂಚೈಸಿಗಳ ಚಿತ್ತ ಕದ್ದಿದ್ದ ಈ ಮಿಸ್ಟರಿ ಸ್ಪಿನ್ನರ್ ಇದೀಗ ರಾತ್ರೋರಾತ್ರಿ ಕೋಟ್ಯಾಧಿಪತಿ ಆಗಿದ್ದಾರೆ.
Comments are closed.