ಮನೋರಂಜನೆ

ಅಂಬಿ ಒಬ್ಬರಿಗೆ ಮಾತ್ರ ಕ್ಷಮೆ ಕೇಳಿದ್ದು…!

Pinterest LinkedIn Tumblr

ಖಡಕ್​ ಮಾತು , ದೃಢ ನಿರ್ಧಾರ, ಮೃದು ಸ್ವಭಾವದ ಅಂಬರೀಷ ಜೀವನದಲ್ಲಿ ಯಾರ ಮುಂದೆಯೂ ತಲೆ ಬಾಗಿದವರಲ್ಲ. ಅವರ ಇದೇ ಗುಣವೇ ಅನೇಕರಿಗೆ ಇಷ್ಟವಾಗಿದ್ದು ಕೂಡ. ಅವರ ಜೀವನದಲ್ಲಿ ಅವರು ಪರಿ ಪರಿಯಾಗಿ ಕ್ಷಮೆಯಾಚಿಸಿದ ಏಕೈಕ ವ್ಯಕ್ತಿ ಸುಮಲತಾ.

ಸುಮಲತಾ- ಅಂಬರೀಷ ಜೋಡಿ ನಿಜಕ್ಕೂ ಆದರ್ಶ ಜೋಡಿಯಾಗಿತ್ತು. ಅಂಬರೀಷಗಾಗಿ ಸುಮಲತಾ ವರ್ಷನೂ ವರ್ಷ ಕಾದು ಅವರೇ ತನ್ನ ಬಾಳ ಸಂಗಾತಿಯಾಗಿ ಬರಬೇಕು ಎಂದು ನಿಶ್ಚಯಿಸಿದ್ದರು. ಮದುವೆಯೆ ಬೇಡ ಎನ್ನುತ್ತಿದ್ದ ಅಂಬರೀಷ ಕೊನೆಗೆ ಸುಮಲತಾ ಪ್ರೀತಿಗೆ ಕರಗದೆ ಇರಲು ಸಾಧ್ಯವಾಗಲಿಲ್ಲ. ವಿರುದ್ಧ ದಿಕ್ಕುಗಳು ಆಕರ್ಷಿಸುವಂತೆ ವಿರುದ್ಧ ಗುಣ ಸ್ವಭಾವವನ್ನು ಹೊಂದಿದ್ದ ಈ ಜೋಡಿ ಪ್ರೀತಿಯಲ್ಲಿ ಬಿದ್ದಿದ್ದು ಅವರ ಅವರಿಗೆ ಬರಲಿಲ್ಲ.

ಇಬ್ಬರು ಪ್ರೀತಿಯಲ್ಲಿರುವಾಗ ಒಮ್ಮೆ ಸುಮಲತಾ ಹುಟ್ಟುಹಬ್ಬ ಬಂದಿತು. ಯಾರು ಮರೆತರೂ ತನ್ನ ಈ ಜನ್ಮದಿನವನ್ನು ತನ್ನ ಪ್ರೇಮಿ ಅಂಬರೀಷ ಮರೆಯುವುದಿಲ್ಲ ಎಂಬ ನಂಬಿಕೆಯಲ್ಲಿದ್ದರು. ಆದರೆ, ಅಂಬರೀಷ ವ್ಯಕ್ತಿತ್ವ ಆದಾಗಿರಲಿಲ್ಲ. ದಿಲ್​ದಾರ್​​ ಸ್ವಭಾವದ ಅಂಬಿಗೆ ರಾತ್ರಿ ಸುಮಲತಾ ಹುಟ್ಟುಹಬ್ಬ ನೆನಪಾಗಿದೆ. ತನ್ನ ಪ್ರೀತಿಯ ಹುಡುಗಿಯ ಕೋಪಕ್ಕೆ ತುತ್ತಾಗಿದ್ದ ಅವರಿಗೆ ಆಕೆಯನ್ನು ಹೇಗೆ ಸಂತೈಸುವುದು ಎಂಬುದು ಕೂಡ ತಿಳಿಯದಾಗಿತ್ತು.

ಅದಕ್ಕೆ ಸುಮ ಮನಸ್ಸುವೊಲಿಸಲು ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಸುಮಲತಾರ ಕಾರಿ​ನಲ್ಲಿ ಒಂದು ಕಾರ್ಡ್​ನಲ್ಲಿ ಅನೇಕ ಭಾಷೆಗಳಲ್ಲಿ ಕ್ಷಮೆ ಕೋರಿ, ಒಂದು ಗುಲಾಬಿ ಹೂ ಇಟ್ಟು, ‘ರೆಬೆಲ್​ ಇನ್​ ಟ್ರಬಲ್’​ ಎಂದು ಬರೆದಿದ್ದರಂತೆ. ಸುಮಲತಾ ಕಾರಿನೊಳಗೆ ಕುಳಿತುಕೊಳ್ಳುತ್ತಿದ್ದಂತೆ ಈ ಒಲವಿನ ಉಡುಗೊರೆ ನೋಡಿ ಅವರ ಕೋಪವೆಲ್ಲ ಕರಗಿ ಹೋಯಿತಂತೆ ಎಂದು ಈ ಹಿಂದೆ ಸುಮಲತಾ ಇದನ್ನು ಸಂದರ್ಶವೊಂದರಲ್ಲಿ ತಿಳಿಸಿದ್ದರು.

ಆದರೆ, ಅಂಬರೀಷ ತಾವು ಸುಮಲತಾಗೆ ಕ್ಷಮೆ ಕೋರಿದ್ದಾರಾ ಎಂದು ಖಾಸಗಿ ಸುದ್ದಿವಾಹಿನಿಯಲ್ಲಿ ನಿರೂಪಕರು ಕೇಳಿದಾಗ ಅವರು ನಿರಾಕರಿಸಿದ್ದರು. ಕಾರಣ ಇಷ್ಟು ದೊಡ್ಡ ಗಂಡಸಾಗಿ ನಾನು ಕ್ಷಮೆ ಕೇಳುವುದು ಎಂದರೆ ಏನ್ರಿ ಎಂದು ನಿರೂಪಕಿಯನ್ನೇ ದಬಾಯಿಸಿದ್ದರು. ನಂತರ ನಿರೂಪಕಿ ಅದಕ್ಕೆ ಪ್ರೀತಿಯಲ್ಲಿ ಇದೆಲ್ಲಾ ಮಾಮೂಲಿ ಅಲ್ವಾ ಸರ್​ ಎಂದಾಗ ಇದನ್ನು ನೀವು ಮೊದಲು ಹೇಳಿದರೆ ಹೌದು ಎನ್ನುತ್ತಿದೆ ಎಂದು ಎಂದಿನಂತೆ ಒರಟು ಮಾತಿನಲ್ಲೂ ಹಾಸ್ಯವನ್ನು ವ್ಯಕ್ತಪಡಿಸಿದ್ದರು.

ಇನ್ನು ತಮ್ಮ ಪ್ರೀತಿಗೆ ಅಧಿಕೃತವಾಗಿ ಮದುವೆಯ ಮುದ್ರೆ ಹಾಕುವ ವಿಷಯ ತಿಳಿಸಲು ಸುಮಲತಾ ತೆರಳಿದ್ದು, ಅಂಬಿಯ ಕುಚುಕು ಗೆಳೆಯ ವಿಷ್ಣುವರ್ಧನ್​ ಬಳಿ. ಸುಮಲತಾ ತನ್ನ ಪ್ರೀತಿಯ ವಿಷಯ ಹೇಳುತ್ತಿದ್ದಂತೆ “ನಿನ್ನ ಹಣೆಬರಹ . ಈ ವಿಷಯದಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ. ಈ ಬಗ್ಗೆ ಏನು ನಿರ್ಧಾರ ತೆಗೆದುಕೊಳ್ಳಬೇಕು ನೀನೇ ತೀರ್ಮಾನಿಸು. ನೋಡು ನಿನ್ನ ನಿರ್ಧಾರಕ್ಕೆ ಬಿಟ್ಟದ್ದು ಈ ವಿಷಯ ಎಂದು ಅಂಬಿಯನ್ನು ಚೆನ್ನಾಗಿ ಬಲ್ಲ ವಿಷ್ಣುವರ್ದನ್​ ನಗುನಗುತ್ತಾ ಅವರ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದರು ಎಂದು ನ್ಯೂಸ್​ 18 ಜೊತೆ ಮಾತನಾಡಿದ ಹಿರಿಯ ಸಿನಿಮಾ ಸ್ಟಿಲ್​ ಫೋಟೋಗ್ರಾಫರ್ ಅಶ್ವಥ್​ ನಾರಾಯಣ ಅವರ ಪ್ರೀತಿಯ ವಿಷಯವನ್ನು ನಮ್ಮೊಂದಿಗೆ ಹಂಚಿಕೊಂಡರು.

ತನ್ನ ಪ್ರೀತಿಯ ಜೊತೆಗಾರನೊಂದಿಗೆ 27 ವರ್ಷಗಳ ಕಾಲ ಬದುಕಿದ ಸುಮಲತಾ ತನ್ನ ಪ್ರಾಣಕ್ಕಿಂತ ಹೆಚ್ಚಾಗಿದ್ದ ಪ್ರೇಮಿಯನ್ನು ಕಳೆದುಕೊಂಡಿದ್ದಾರೆ. ಆದರೆ, ಅವರ ಪ್ರೀತಿಯ ಕುರುಹು, ಒಲವಿನ ಅನುರಾಗದ ನೆನಪುಗಳು ಸದಾ ಅವರಲ್ಲಿ ಶಾಶ್ವತವಾಗಲಿದೆ.

Comments are closed.