ಕರ್ನಾಟಕ

ಕೊಲೆ ಪ್ರಕರಣದಲ್ಲಿ ನಟ ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ಸಹಿತ 10 ಮಂದಿ ಬಂಧನ

Pinterest LinkedIn Tumblr

ಬೆಂಗಳೂರು: ಕೊಲೆ‌ ಕೇಸೊಂದರ ಸಂಬಂಧ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್‌ ಅವರನ್ನು ಬಂಧಿಸಲಾಗಿದೆ. ಮೈಸೂರಿನಲ್ಲಿ ಪೊಲೀಸರು ದರ್ಶನ್‌ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಕೊಲೆ ಪ್ರಕರಣದಲ್ಲಿ ಮೈಸೂರಿನ​ಲ್ಲಿ ದರ್ಶನ್‌ ಅವರನ್ನು ಬಂಧಿಸಲಾಗಿದೆ. ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎನ್ನುವವರ ಕೊಲೆ ಪ್ರಕರಣದಲ್ಲಿ ಆರೋಪಿಯನ್ನಾಗಿ ನಟ ದರ್ಶನ್‌ ಅವರನ್ನು ಬಂಧಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ದರ್ಶನ್‌ ಸೇರಿದಂತೆ 10 ಮಂದಿಯನ್ನು ಪ್ರಕರಣ ಸಂಬಂಧ ಬಂಧಿಸಲಾಗಿದೆ.

ಯಾಕಾಗಿ ಕೊಲೆ?: ನಟ ದರ್ಶನ್‌ ಅವರಿಗೆ ಆತ್ಮೀಯವಾಗಿರುವ ನಟಿ ಪವಿತ್ರ ಗೌಡ ಅವರ ಫೋಟೋಗಳಿಗೆ ರೇಣುಕಾ ಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಆಶ್ಲೀಲವಾಗಿ ಕಮೆಂಟ್‌ ಮಾಡುತ್ತಿದ್ದ. ಇದಲ್ಲದೆ ಕೆಟ್ಟದಾಗಿ ಮೆಸೇಜ್‌ ಮಾಡುತ್ತಿದ್ದ ಎನ್ನಲಾಗಿದೆ.

ರೇಣುಕಾ ಸ್ವಾಮಿಯನ್ನು ಜೂ. 8ರಂದು ರಾತ್ರಿ ಶೆಡ್‌ವೊಂದರ ಬಳಿ ಕರೆತಂದು ಬಲವಾಧ ಆಯುಧದಿಂದ ಅವರಿಗೆ ಹೊಡೆದು ಕೊಲೆಗೈದು, ಮೃತದೇಹನ್ನು ಮೋರಿಗೆ ಎಸೆಯಲಾಗಿತ್ತು. ಜೂ. 9ರಂದು ಮೋರಿಯಲ್ಲಿ ಬೀದಿ ನಾಯಿಗಳು ಮೃತದೇಹವನ್ನು ಎಳೆಯುತ್ತಿದ್ದನ್ನು ನೋಡಿ, ಪಕ್ಕದಲ್ಲಿದ್ದ ಅಪಾರ್ಟ್‌ ಮೆಂಟ್‌ ಭದ್ರತಾ ಸಿಬ್ಬಂದಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ದೇಹದ ಮೇಲಿನ ಗಾಯಗಳನ್ನು ಗುರುತಿಸಿ ತನಿಖೆಯನ್ನು ಆರಂಭಿಸಲಾಗಿದೆ. ಇದು ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎನ್ನುವುದು ಗೊತ್ತಾಗಿದೆ.

ವಶಕ್ಕೆ ಪಡೆದ ನಾಲ್ವರು ಆರೋಪಿಗಳು ದರ್ಶನ್‌ ಅವರ ಸೂಚನೆ ಮೇರೆಗೆ ಕೊಲೆ ಮಾಡಿರುವುದಾಗಿ ಆರೋಪಿಗಳು ವಿಚಾರಣೆಯಲ್ಲಿ ಹೇಳಿರುವುದಾಗಿ ತಿಳಿದು ಬಂದಿದೆ. ದರ್ಶನ್‌ ಸೇರಿದಂತೆ ನಾಲ್ವರು ರೇಣುಕಾ ಸ್ವಾಮಿಗೆ ಹಲ್ಲೆ ಮಾಡಿ ಕೊಲೆಗೈದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಘಟನೆ ಸಂದರ್ಭದಲ್ಲಿ ದರ್ಶನ್‌ ಅವರು ಸ್ಥಳದಲ್ಲೇ ಇದ್ದರು ಎನ್ನಲಾಗಿದೆ.

ಸದ್ಯ ದರ್ಶನ್‌ ಅವರನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ ಎನ್ನಲಾಗಿದೆ. ಕಾಮಾಕ್ಷಿ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Comments are closed.