ಕರ್ನಾಟಕ

ಬಾಲ್ಯದಲ್ಲೇ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದ ಸಿ.ಕೆ.ಜಾಫ‌ರ್‌ ಷರೀಫ್

Pinterest LinkedIn Tumblr


ಬೆಂಗಳೂರು: ಚಿತ್ರದುರ್ಗ ಜಿಲ್ಲೆಯ ಚೆಳ್ಳಕೆರೆಯಲ್ಲಿ 1933 ನವೆಂಬರ್​​ 3 ರಂದು ಬಡ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಚಾಲೆಕೆರೆ ಕರೀಮ್ ಜಾಫರ್ ಷರೀಫ್(ಸಿ.ಕೆ.ಜಾಫ‌ರ್‌ ಷರೀಫ್) 10ನೇ ವಯಸ್ಸಿನಲ್ಲಿಯೇ ಕ್ವಿಟ್‌ ಇಂಡಿಯಾ ಚಳವಳಿಗೆ ಧುಮುಕಿದರು.

ಬಾಲ್ಯದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ, ಕಾಂಗ್ರೆಸ್‌ ಸಖ್ಯ ಬೆಳೆಸಿಕೊಂಡು, ತಿಂಗಳಿಗೆ ನೂರು ರೂ.ಸಂಬಳಕ್ಕೆ ಸೇರಿಕೊಂಡು ಅದೇ ಪಕ್ಷದಲ್ಲಿ ಕೇಂದ್ರದಲ್ಲಿ ಮಹತ್ವದ ರೈಲ್ವೆ ಖಾತೆಯನ್ನು ಪಡೆಯುವಷ್ಟರ ಮಟ್ಟಿಗೆ ಬೆಳೆದು ನಿಂತವರು ಸಿ.ಕೆ.ಜಾಫ‌ರ್‌ ಷರೀಫ್.

ಅಂದಿನ ಮುಖ್ಯಮಂತ್ರಿ ಎಸ್​​. ನಿಜಲಿಂಗಪ್ಪನವರ ನೇತೃತ್ವದಲ್ಲಿ ಕಾಂಗ್ರೆಸ್​ ಸೇರಿದ ಜಾಫ‌ರ್‌ ಷರೀಫ್, ಎಸ್​​.ನಿಜಲಿಂಗಪ್ಪನವರ ಕಾಲದಲ್ಲಿಯೇ ರಾಜಕೀಯ ಜೀವನವನ್ನು ಪ್ರಾರಂಭಿಸಿ ಕಾಂಗ್ರೆಸ್​​ ಹೈಕಮಾಂಡ್​​ಗೆ ಆಪ್ತರಾಗುವ ಮಟ್ಟಕ್ಕೆ ಬೆಳೆದರು. ಇಂದಿಗೂ ಕಾಂಗ್ರೆಸ್​ ಹೈಕಮಾಂಡ್​​ ಮಟ್ಟದಲ್ಲಿ ಜಾಫರ್​​ ಅವರು ಭಾರೀ ಪ್ರಭಾವ ಹೊಂದಿದ್ದರು.

ಇಂದಿರಾಗಾಂಧಿ ಕಾಲದಿಂದಲೂ ಇಂದಿನವರೆಗೂ ಗಾಂಧಿ ಕುಟುಂಬಕ್ಕೆ ಆಪ್ತರಾಗಿದ್ದ ಜಾಫರ್ ಷರೀಫ್:
ಕಾಂಗ್ರೆಸ್​​ ಪಾಲಿಗೆ ಮಹತ್ವದ ಕಾಲಘಟ್ಟವಾಗಿದ 1960-70 ರ ದಶಕದಲ್ಲಿ, ಮಾಜಿ ಸಿಎಂ ಎಸ್​​.ನಿಜಲಿಂಗಪ್ಪ ಅವರನ್ನು ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷರನ್ನಾಗಿ 1968 ರಲ್ಲಿ ಆಯ್ಕೆ ಮಾಡಲಾಯ್ತು. ಈ ವೇಳೆ ಕರ್ನಾಟಕದಿಂದ ಆಯ್ಕೆಯಾದ ಕಾಂಗ್ರೆಸ್‌ನ ಏಕೈಕ ಅಧ್ಯಕ್ಷರು ಎಂಬ ಕೀರ್ತಿ ಎಸ್‌.ನಿಜಲಿಂಗಪ್ಪವರಿಗೆ ಸಲ್ಲಿತು. ಆದರೆ, ಎಸ್​​.ನಿಜಲಿಂಗಪ್ಪ ಅವರು ಅಧ್ಯಕ್ಷರಾದ ಅವಧಿಯಲ್ಲೇ ಕ್ಷಿಪ್ರ ರಾಜಕೀಯ ಬೆಳವಣಿಗೆಯೊಂದು ನಡೆಯಿತು. ಹೀಗಾಗಿ 1969ರಲ್ಲಿ ಇಂದಿರಾ ಗಾಂಧಿ ಅವರನ್ನು ಪಕ್ಷದಿಂದ ಉಚ್ಚಾಟಿಸುವ ನಿರ್ಧಾರಕ್ಕೆ ನಿಜಲಿಂಗಪ್ಪನವರು ಬಂದರು. 1969ರಲ್ಲಿ ಕಾಂಗ್ರೆಸ್‌ ಇಬ್ಭಾಗವಾದ ವೇಳೆ ಷರೀಫ್ ಅವರು ಇಂದಿರಾ ಕಾಂಗ್ರೆಸ್‌ ಸೇರ್ಪಡೆಯಾದರು. ಬಳಿಕ ರಾಜ್ಯದಲ್ಲಿ ದೇವರಾಜ ಅರಸು ಅವರಿಗೆ ಹತ್ತಿರವಾದರು. ಆ ಕಾರಣಕ್ಕಾಗಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರು, ಲಾಲ್‌ ಬಹದ್ದೂರ್‌ ಶಾಸ್ತ್ರೀ ಹಾಗೂ ಇಂದಿರಾ ಗಾಂಧಿಯವರನ್ನು ಹತ್ತಿರದಿಂದ ನೋಡುವ ಅವಕಾಶ ಷರೀಫ್ ಅವರಿಗೆ ಲಭಿಸಿತು.

1971 ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಪ್ರವೇಶಿಸಿದ ಜಾಫರ್ ಷರೀಫ್, ಎಂಟು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಅತ್ಯಂತ ಆಪ್ತರಾಗಿದ್ದ ಷರೀಫ್ 1980-84- ರೈಲ್ವೆ ಖಾತೆ ರಾಜ್ಯ ಸಚಿವ, 1984- ನೀರಾವರಿ ಖಾತೆ ರಾಜ್ಯ ಸಚಿವ, 1988-89- ಕಲ್ಲಿದ್ದಲು ಖಾತೆ ರಾಜ್ಯ ಸಚಿವ, 1991ರಿಂದ 1995ರ ವರೆಗೆ ಕೇಂದ್ರ ರೈಲ್ವೆ ಸಚಿವರಾಗಿ ಮಹತ್ವದ ಪಾತ್ರವಹಿಸಿದ್ದರು.

ರೈಲ್ವೆ ಮಂತ್ರಿಯಾಗಿ ರಾಜ್ಯದಲ್ಲಿನ ರೈಲ್ವೆ ಮಾರ್ಗಗಳೆಲ್ಲವನ್ನು ಮೀಟರ್ ಗೇಜ್ ನಿಂದ ಬ್ರಾಡ್ ಗೇಜ್ ಗೆ ಪರಿವರ್ತಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಬೆಂಗಳೂರಿನಲ್ಲಿನ ವೀಲ್ ಮತ್ತು ಆಕ್ಸಲ್ ಪ್ಲಾಂಟ್ ಸ್ಥಾಪನೆಯಲ್ಲಿಯೂ ಷರೀಫ್ ಅವರ ಸೇವೆ ಮಹತ್ವವಾದದ್ದು.

ಪಕ್ಷನಿಷ್ಠೆಗೆ ಹೆಸರಾಗಿದ್ದ ಜಾಫರ್ ಷರೀಫ್ ಇಂದಿರಾಗಾಂಧಿ ಕಾಲದಿಂದಲೂ ಇಂದಿನವರೆಗೂ ಗಾಂಧಿ ಕುಟುಂಬಕ್ಕೆ ಆಪ್ತರಾಗಿದ್ದರು. ಅಷ್ಟೇ ಅಲ್ಲ ಹೈಕಮಾಂಡ್‍ ಮಟ್ಟದಲ್ಲಿ ಅತ್ಯಂತ ಪ್ರಭಾವಿ ಮುಖಂಡರಾಗಿದ್ದರು. 1999 ರಲ್ಲಿ ಅವರ ಕಿರಿಯ ಪುತ್ರ, 2008 ರಲ್ಲಿ ಅವರ ಪತ್ನಿ ಮತ್ತು ಲೋಕಸಭೆ ಚುನಾವಣೆಗೆ ಮೂರು ದಿನಗಳ ಮೊದಲು 2009 ರಲ್ಲಿ ಅವರ ಹಿರಿಯ ಮಗ ಹೀಗೆ ಜಾಫರ್ ಶರೀಫ್ ಅವರು ಕುಟುಂಬದ ಮೂವರು ಸದಸ್ಯರನ್ನು ಕಳೆದುಕೊಂಡಿದ್ದರು. 2009ರಲ್ಲಿ ರಸ್ತೆ ಅಪಘಾತದಲ್ಲಿ ಹಿರಿಯ ಪುತ್ರನನ್ನು ಕಳೆದುಕೊಂಡ ಬಳಿಕ ಷರೀಫ್ ಸಕ್ರಿಯ ರಾಜಕಾರಣದಿಂದಲೇ ದೂರವಾಗಿದ್ದರು.

ಭಾರತದ ಮೊದಲ ಶಿಕ್ಷಣ ಮಂತ್ರಿ ಮೌಲಾನಾ ಅಬ್ದುಲ್ ಕಲಾಮ್ ಅಜಾದ್ ರವರ ‘ಇಂಡಿಯಾ ವಿನ್ಸ್ ಫ್ರೀಡಂ’ ಪುಸ್ತಕದ ಉರ್ದು ಅನುವಾದವನ್ನು ಮಾಡಿದ್ದರು. ಈ ಪುಸ್ತಕ ಈಗ ಬೆಂಗಳೂರಿನ ಅರಮನೆ ಮೈದಾನದಲ್ಲಿ ನವಂಬರ್ 28 ರಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜೀ ಅವರಿಂದ ಬಿಡುಗಡೆಯಾಗಬೇಕಾಗಿತ್ತು ಆದರೆ ಇದಕ್ಕೆ ಇನ್ನು ಮೂರು ದಿನಗಳು ಬಾಕಿ ಇರುವಾಗಲೇ ಅವರ ನಿಧನವಾಗಿದ್ದು ನಿಜಕ್ಕೂ ದುಃಖದ ಸಂಗತಿಯಾಗಿದೆ.

Comments are closed.