ಕರ್ನಾಟಕ

50 ದಿನಗಳಿಂದಲೂ ಪೆಟ್ರೋಲ್ ಬೆಲೆ ಇಳಿಕೆಗೆ ಕಾರಣ ಏನು?

Pinterest LinkedIn Tumblr


ಬೆಂಗಳೂರು: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಈಗ ಇನ್ನಷ್ಟು ಇಳಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 35 ಮತ್ತು 41 ಪೈಸೆಗಳಷ್ಟು ಕಡಿಮೆ ಆಗಿವೆ. ನಿನ್ನೆಯೂ 59 ಪೈಸೆ ಮತ್ತು 46 ಪೈಸೆಯಷ್ಟು ಬೆಲೆ ಇಳಿಕೆಯಾಗಿತ್ತು. ಕಳೆದ 5 ದಿನದಲ್ಲಿ ಪೆಟ್ರೋಲ್ ಬೆಲೆ ಹೆಚ್ಚುಕಡಿಮೆ 2 ರೂಪಾಯಿಯಷ್ಟು ಕಡಿಮೆಯಾಗಿದೆ. ಡೀಸೆಲ್ ಬೆಲೆ ಸರಿಯಾಗಿ 2 ರೂ.ನಷ್ಟು ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 75.08 ರೂಪಾಯಿಗೆ ಬಂದಿದೆ. ಡೀಸೆಲ್ ಬೆಲೆ 69.65 ರೂ. ತಲುಪಿದಂತಾಗಿದೆ.

ಅಕ್ಟೋಬರ್ 18ರಿಂದಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಒಂದು ದಿನವೂ ಏರಿಕೆ ಕಂಡಿಲ್ಲ ಎಂಬುದು ವಿಶೇಷ. ಅಕ್ಟೋಬರ್ ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 84.67 ಮತ್ತು 76.08 ರೂ.ಗಳೊಂದಿಗೆ ದಾಖಲೆ ಮಟ್ಟ ತಲುಪಿದ್ದವು.

ಪೆಟ್ರೋಲ್​ನ ಈಗಿನ ಬೆಲೆಯು ಏಪ್ರಿಲ್ ಮಟ್ಟದಲ್ಲಿದೆ. ಅಂದರೆ, ಏಪ್ರಿಲ್ ನಂತರದ ಕನಿಷ್ಠ ಪೆಟ್ರೋಲ್ ಬೆಲೆ ಇದಾಗಿದೆ. ಹಾಗೆಯೇ, ಜೂನ್ ನಂತರ ಡೀಸೆಲ್ ಕೂಡ ಅತ್ಯಂತ ಕಡಿಮೆ ಬೆಲೆಗೆ ಬಂದಿದೆ. ಹಾಗೆಯೇ, ಇವೆರಡೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿನ ವ್ಯತ್ಯಾಸದಲ್ಲೂ ಇಳಿಕೆಯಾಗುತ್ತಿರುವುದು ವಿಶೇಷ. ಡೀಸೆಲ್ ಬೆಲೆಗಿಂತಲೂ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚು ಇಳಿಕೆಯಾಗುತ್ತಿರುವುದು ಇದಕ್ಕೆ ಕಾರಣ. ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ನಡುವೆ ಕೇವಲ 5.43 ರೂಪಾಯಿ ಮಾತ್ರ ಬೆಲೆ ವ್ಯತ್ಯಾಸವಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಇದೆ ಬೆಲೆ?

ಪೆಟ್ರೋಲ್ ಬೆಲೆ:
ಬೆಂಗಳೂರು: 75.08 ರೂ.
ದೆಹಲಿ: 74.49 ರೂ.
Loading…

ಚೆನ್ನೈ: 77.32 ರೂ.
ಕೋಲ್ಕತಾ: 76.47 ರೂ.
ಮುಂಬೈ: 80.03

ಡೀಸೆಲ್ ಬೆಲೆ:
ಬೆಂಗಳೂರು: 69.65 ರೂ.
ದೆಹಲಿ: 69.29
ಚೆನ್ನೈ: 69.65 ರೂ.
ಕೋಲ್ಕತಾ: 71.14 ರೂ.
ಮುಂಬೈ: 73.20 ರೂ.

ಯಾಕೆ ಬೆಲೆ ಕಡಿಮೆ?
ಕಳೆದ ಐದು ದಿನಗಳಿಂದ ಪೆಟ್ರೋಲ್ ಬೆಲೆಗಳು ದೊಡ್ಡ ಮಟ್ಟದಲ್ಲೇ ಇಳಿಕೆಯಾಗುತ್ತಿರವುದನ್ನು ನಾವು ಗಮನಿಸಬಹುದು. ಪೆಟ್ರೋಲ್ ಬೆಲೆ ಇಳಿಕೆಗೆ ಮಾಮೂಲಿಯಂತೆ ಕಾರಣವಾಗಿರುವುದು ಅಂತಾರಾಷ್ಟ್ರೀಯ ಕಚ್ಛಾ ತೈಲ ಬೆಲೆಯಲ್ಲಿ ಆಗುತ್ತಿರುವ ಗಣನೀಯ ಇಳಿಕೆ. ಪ್ರಮುಖ ತೈಲ ಮಾರುಕಟ್ಟೆಯಾದ ಬ್ರೆಂಟ್ ಕ್ರೂಡ್​ನಲ್ಲಿ ಬ್ಯಾರೆಲ್ ತೈಲವು 59.23 ಡಾಲರ್​ಗೆ ಇಳಿಕೆಯಾಗಿದೆ. ಹಾಗೆಯೇ ಡಬ್ಲ್ಯೂಟಿಐ ಕ್ರೂಡ್​ನಲ್ಲಿನ ಬ್ಯಾರೆಲ್ ತೈಲವು 50.53 ಡಾಲರ್ ಆಗಿದೆ. ಮುಂದಿನ ಕೆಲ ದಿನಗಳವರೆಗೂ ಈ ತೈಲ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗುವ ಸಂಭವವಿದ್ದು, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇನ್ನಷ್ಟು ಇಳಿಯುವ ಸಾಧ್ಯತೆ ಇದೆ.

ಪೆಟ್ರೋಲ್ ಬೆಲೆ ಇಳಿಕೆಯ ವೇಗ ಹೆಚ್ಚಲು ಮತ್ತೊಂದು ಕಾರಣವಾಗಿರುವುದು ರೂಪಾಯಿ ಮೌಲ್ಯ ಹೆಚ್ಚಳ. ಡಾಲರ್ ಎದುರು 74ರ ಗಡಿ ದಾಟಿದ್ದ ರೂಪಾಯಿ ಅಕ್ಟೋಬರ್ ತಿಂಗಳ ನಂತರ ಸತತವಾಗಿ ಚೇತರಿಸಿಕೊಳ್ಳುತ್ತಿದೆ. ಇದೀಗ ಒಂದು ಡಾಲರ್​ಗೆ 70.56 ರೂಪಾಯಿ ಆಗಿದೆ. ಸದ್ಯಕ್ಕೆ ತೈಲ ವಹಿವಾಟು ಡಾಲರ್ ಲೆಕ್ಕದಲ್ಲೇ ಅಗುವುದರಿಂದ, ರೂಪಾಯಿ ಮೌಲ್ಯ ಹೆಚ್ಚಳದಿಂದ ತೈಲ ಆಮದು ವೆಚ್ಚ ತುಸು ಕಡಿಮೆ ಆಗುತ್ತದೆ.

ಆದರೆ, ಕಚ್ಛಾ ತೈಲ ಬೆಲೆ ಇಳಿಕೆಯಷ್ಟು ಪ್ರಮಾಣದಲ್ಲಿ ಪೆಟ್ರೋಲ್ ಬೆಲೆ ಇಳಿಯುತ್ತಿಲ್ಲ ಎಂಬುದನ್ನು ಈ ಸಂದರ್ಭದಲ್ಲಿ ಗಮನಿಸಲೇಬೇಕು. ಅಕ್ಟೋಬರ್​ನಿಂದೀಚೆ ಅಂತಾರಾಷ್ಟ್ರೀಯ ಕಚ್ಛಾ ತೈಲ ಬೆಲೆ ಶೇ. 32ರಷ್ಟು ಇಳಿಕೆಯಾಗಿದೆ. ಆದರೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಕೇವಲ 7-11 ಪ್ರತಿಶತದಷ್ಟು ಕಡಿಮೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಕೇಂದ್ರ ಮತ್ತು ರಾಜ್ಯಗಳು ವಿಧಿಸುವ ತೆರಿಗೆ, ಕಚ್ಛಾ ತೈಲವನ್ನು ಸಂಸ್ಕರಿಸಲು ತಗಲುವ ವೆಚ್ಚ, ಇನ್ಷೂರೆನ್ಸ್ ಇತ್ಯಾದಿ ಶುಲ್ಕಗಳಾಗಿವೆ.

Comments are closed.