ಮನೋರಂಜನೆ

ರಾಮ್‌ಗೋಪಾಲ್‌ ವರ್ಮ ಹಾಗೂ ಶಿವರಾಜ್‌ ಕುಮಾರ್‌ ಕಾಂಬಿನೇಶನ್‌ನಲ್ಲಿ ಕಿಲ್ಲಿಂಗ್‌ ವೀರಪ್ಪನ್‌ ನಾಡಿದ್ದು ಶುರು

Pinterest LinkedIn Tumblr

killing-veerappan

ರಾಮ್‌ಗೋಪಾಲ್‌ ವರ್ಮ ಚಿತ್ರಕ್ಕೆ ಯಜ್ಞಾಶೆಟ್ಟಿ, ರಾಮ್‌ಗೋಪಾಲ್‌ ವರ್ಮ ಹಾಗೂ ಶಿವರಾಜ್‌ ಕುಮಾರ್‌ ಕಾಂಬಿನೇಶನ್‌ನಲ್ಲಿ “ಕಿಲ್ಲಿಂಗ್‌ ವೀರಪ್ಪನ್‌’ ಎಂಬ ಸಿನಿಮಾ ಮಾಡುವ ಹಾಗೂ ಫ‌ಸ್ಟ್‌ಲುಕ್‌ ರಿಲೀಸ್‌ ಆಗಿರುವ ವಿಷಯ ನಿಮಗೆ ಗೊತ್ತೇ ಇದೆ. ಈಗ ಬಹುತೇಕ ಎಲ್ಲವೂ ಪಕ್ಕ ಆಗಿದ್ದು, ಜೂನ್‌ 21 ರಿಂದ ಚಿತ್ರೀಕರಣ ಆರಂಭವಾಗಲಿದೆ. ಶಿವರಾಜ್‌ಕುಮಾರ್‌ ಅವರು ಭಿನ್ನ ಗೆಟಪ್‌ಗ್ಳಲ್ಲಿ ಕಾಣಿಸಿಕೊಂಡಿರುವ ಮತ್ತೂಂದಿಷ್ಟು ಫೋಟೋಗಳನ್ನು ವರ್ಮಾ ಬಿಡುಗಡೆ ಮಾಡಿದ್ದಾರೆ. ಚಿತ್ರದಲ್ಲಿ ವೀರಪ್ಪನ್‌ ಪತ್ನಿಯಾಗಿ ಯಾರು ಕಾಣಿಸಿಕೊಳ್ಳುತ್ತಾರೆಂಬ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಅದು ಯಜ್ಞಾ ಶೆಟ್ಟಿ. ಹೌದು, ಯಜ್ಞಾ ಇಲ್ಲಿ ವೀರಪ್ಪನ್‌ ಪತ್ನಿ ಮುತ್ತುಲಕ್ಷ್ಮೀ ಪಾತ್ರ ಮಾಡುವ ಮೂಲಕ ವರ್ಮಾ ಕ್ಯಾಂಪ್‌ ಸೇರಿಕೊಂಡಿದ್ದಾರೆ. ಅಲ್ಲಿಗೆ ತುಂಬಾ ದಿನಗಳ ನಂತರ ಯಜ್ಞಾಗೆ ಒಂದು ದೊಡ್ಡ ಆಫ‌ರ್‌ ಸಿಕ್ಕಿದಂತಾಗಿದೆ. ಚಿತ್ರದಲ್ಲಿ ಪಾರುಲ್‌ ಯಾದವ್‌ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಆದರೆ, ಯಾವ ಪಾತ್ರ ಎಂಬ ಬಗ್ಗೆ ಇನ್ನೂ ಮಾಹಿತಿಯಿಲ್ಲ.

ಅಂದಹಾಗೆ, ವೀರಪ್ಪನ್‌ ಕುರಿತ ಸಿನಿಮಾ ಮಾಡಬೇಕೆಂದು ವರ್ಮಾ ಹಿಂದೆಯೇ ಯೋಚಿಸಿದ್ದರು. ಆ ಸಿನಿಮಾಕ್ಕೆ “ಲೆಟ್ಸ್‌ ಕ್ಯಾಚ್‌ ವೀರಪ್ಪನ್‌ ಅಂತ ಹೆಸರಿಟ್ಟು ಶೂಟಿಂಗ್‌ ಶುರು ಮಾಡಿದ ದಿನಾನೇ ವೀರಪ್ಪನ್‌ ಸತ್ತ. ಅವನು ಸತ್ತ ಮೇಲೆ “ಲೆಟ್ಸ್‌ ಕ್ಯಾಚ್‌ ವೀರಪ್ಪನ್‌’ ಅಂತ ಸಿನಿಮಾ ಮಾಡಿದ್ರೆ ಸರಿಯಾಗಲ್ಲ ಅಂತ ಸಿನಿಮಾ ಮಾಡದೇ ಸುಮ್ಮನಾಗಿದ್ದರು. ಈಗ ಶಿವರಾಜ ಕುಮಾರ್‌ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇನ್ನು, ವರ್ಮಾ ಯಾವ ರೀತಿಯಲ್ಲಿ ವೀರಪ್ಪನ್‌ ಸಿನಿಮಾ ಮಾಡುತ್ತಾರೆ ಎಂಬ ಕುತೂಹಲ ಕೂಡಾ ಇದೆ. ವರ್ಮಾ ಸಾಕಷ್ಟು ತಯಾರಿ ಮಾಡಿಕೊಂಡೇ ಈ ಸಿನಿಮಾ ಮಾಡುತ್ತಿದ್ದಾರೆ. ಒಂದು ಹುಲಿಯನ್ನು ಕಾಡಿನೊಳಗೆ ಕೊಲ್ಲುವುದಕ್ಕಿಂತ ನಾಡಲ್ಲಿ ಕೊಲ್ಲುವುದು ಸುಲಭ. ವೀರಪ್ಪನ್‌ನನ್ನು ಅವನ ಕಾಡಿನೊಳಗೆ ಕೊಲ್ಲುವುದು ಕಷ್ಟವಿತ್ತು. ಅವನನ್ನು ಅಲ್ಲಿಂದ ಹೊರಗೆ ಬರುವಂತೆ ಮಾಡಬೇಕು. ಆದರೆ ಹಾಗೆ ಹೊರಗೆ ಬರುವಂತೆ ಮಾಡುವುದು ಹೇಗೆ? ಆ ಐಡಿಯಾ ಇಟ್ಟುಕೊಂಡು ಸಿನಿಮಾ ಮಾಡುತ್ತಿರುವುದಾಗಿ ಈ ಹಿಂದೆಯೇ ವರ್ಮಾ ಇದೇ ಹೇಳಿಕೊಂಡಿದ್ದರು. ಚಿತ್ರ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ತಯಾರಾಗುತ್ತಿದೆ.

ಜೂನ್‌ 21ರಿಂದ ಚಿತ್ರೀಕರಣ ಆರಂಭವಾಗಲಿದ್ದು, ಶಿವರಾಜ ಕುಮಾರ್‌ ಜೂನ್‌ 26 ರಿಂದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಚಿತ್ರದ ಕಾಡಿನ ಭಾಗದ ಚಿತ್ರೀಕರಣ ಯಲ್ಲಾಪುರ ಬಳಿಯ ಕಾಡಿನಲ್ಲಿ ಚಿತ್ರೀಕರಿಸಲಾಗುತ್ತದೆಯಂತೆ. ವೀರಪ್ಪನ್‌ ಕಾರ್ಯಾಚರಣೆಯ ಉಸ್ತುವಾರಿ ಹೊತ್ತಿದ್ದ ಅಂದಿನ ಎಸ್‌ಟಿಎಪ್‌ ಕಮಾಂಡೋ ವಿಜಯ ಕುಮಾರ್‌ ಅವರ ಪಾತ್ರದಲ್ಲಿ ಶಿವರಾಜ ಕುಮಾರ್‌ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಬಿ.ವಿ.ಮಂಜುನಾಥ್‌ ನಿರ್ಮಿಸುತ್ತಿದ್ದು, ಬಿ.ಎಸ್‌.ಸುಧೀಂದ್ರ ಹಾಗೂ ಶಿವಪ್ರಕಾಶ್‌ ಚಿತ್ರದ ಸಹ ನಿರ್ಮಾಪಕರು. ಚಿತ್ರಕ್ಕೆ ರಮ್ಮಿ ಛಾಯಾಗ್ರಹಣ, ಅಲನ್‌ ಅಮಿನ್‌ ಸಾಹಸ ನಿರ್ದೇಶನ, ಅನ್ವರ್‌ ಆಲಿ ಅವರ ಸಂಕಲನ, ರಘು ಕುಲಕರ್ಣಿ ಅವರ ಕಲಾ ನಿರ್ದೇಶನವಿದೆ.

ಕಥೆ, ಚಿತ್ರಕಥೆ, ಸಂಭಾಷಣೆಯ ಜೊತೆಗೆ ನಿರ್ದೇಶನ ಮಾಡುತ್ತಿರುವ ರಾಮ್‌ಗೊಪಾಲ್‌ ವರ್ಮಾ ವೀರಪ್ಪನ್‌ ಬಗ್ಗೆ ಸಾಕಷ್ಟು ಮಾಹಿತಿ ಪಡೆದುಕೊಂಡಿದ್ದಾರಂತೆ. ಮೊದಲ ಬಾರಿಗೆ ವರ್ಮಾ ಹಾಗೂ ಶಿವಣ್ಣ ಜೊತೆಯಾಗಿ ಸಿನಿಮಾ ಮಾಡುತ್ತಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ.
-ಉದಯವಾಣಿ

Write A Comment