ಕರ್ನಾಟಕ

ಜಯಾ ಪ್ರಕರಣ : ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ರಾಜ್ಯಸರ್ಕಾರ ತಕರಾರು ಅರ್ಜಿ

Pinterest LinkedIn Tumblr

jayalalitha7

ಬೆಂಗಳೂರು, ಜೂ.20- ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನಿಂದ ಕ್ಲೀನ್‌ಚಿಟ್ ಪಡೆದಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ರಾಜ್ಯಸರ್ಕಾರ ತಕರಾರು ಅರ್ಜಿ ಸಲ್ಲಿಸಲಿದೆ.

ಕಳೆದ ಮೇ 11ರಂದು ಕರ್ನಾಟಕ ಹೈಕೋರ್ಟ್‌ನ ವಿಶೇಷ ಪೀಠದ ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿಯವರು ಜಯಲಲಿತಾ ಮತ್ತು ಅವರ ಆಪ್ತರಾದ ಶಶಿಕಲಾ, ಇಳವರಸಿ ಮತ್ತು ದತ್ತುಪುತ್ರ ಸುಧಾಕರನ್ ಅವರನ್ನು ನಿರ್ದೋಷಿ ಎಂದು ತೀರ್ಪು ನೀಡಿದ್ದರು. ಹೈಕೋರ್ಟ್ ನೀಡಿರುವ ಈ ತೀರ್ಪನ್ನು ಪ್ರಶ್ನಿಸಿ ಸೋಮವಾರ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ನ ರಜಾ ಪೀಠದಲ್ಲಿ ತಕರಾರು ಅರ್ಜಿ ಸಲ್ಲಿಸಲಿದೆ.

ರಾಜ್ಯಸರ್ಕಾರದ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಬಿ.ವಿ.ಆಚಾರ್ಯ ಅವರು ಸುಪ್ರೀಂಕೋರ್ಟ್‌ನಲ್ಲಿ ಸೋಮವಾರ ತಕರಾರು ಅರ್ಜಿ ಸಲ್ಲಿಸಲಿದ್ದಾರೆ.  ಹೈಕೋರ್ಟ್ ನ್ಯಾಯಮೂರ್ತಿ ಸಿ.ಕೆ.ಕುಮಾರಸ್ವಾಮಿ ಅವರು ಜಯಲಲಿತಾ ಮತ್ತು ಇತರೆ ಮೂವರು ಆರೋಪಿಗಳ ವಿರುದ್ಧ ನೀಡಿರುವ ತೀರ್ಪು ಸಾಕಷ್ಟು ಸಂದೇಹಕ್ಕೆ ಕಾರಣವಾಗಿದೆ. ಈ ತೀರ್ಪನ್ನು ಮತ್ತೊಮ್ಮೆ ಪರಾಮರ್ಷೆ ಮಾಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಿದ್ದಾರೆ.  ರಾಜ್ಯಸರ್ಕಾರದ ಕಾನೂನು ಸಲಹೆಗಾರ ಬ್ರಿಜೇಶ್ ಕಾಳಪ್ಪ ಈಗಾಗಲೇ ತಕರಾರು ಅರ್ಜಿ ಸಲ್ಲಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ. ನಾಳೆ ನವದೆಹಲಿಗೆ ತೆರಳಲಿರುವ ಬಿ.ವಿ.ಆಚಾರ್ಯ ರಜಾ ಕಾಲದ ವಿಶೇಷ ಪೀಠಕ್ಕೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.  ರಾಜ್ಯಸರ್ಕಾರದ ಸೂಚನೆಯಂತೆ ಬಿ.ವಿ.ಆಚಾರ್ಯ, ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ ಅರ್ಜಿ ಹಾಕಲಿದ್ದು, ಜಯಲಲಿತಾ ಮತ್ತು ಇತರೆ ಆರೋಪಿಗಳನ್ನು ನಿರ್ದೋಷಿ ಎಂದು ನೀಡಿರುವ ತೀರ್ಪನ್ನು ರದ್ದುಪಡಿಸಬೇಕು ಎಂದು ಕೋರಲಿದ್ದಾರೆ.

ಪ್ರಕರಣದ ಹಿನ್ನೆಲೆ:

ಈ ಹಿಂದೆ ಜಯಲಲಿತಾ ಮುಖ್ಯಮಂತ್ರಿಯಾಗಿದ್ದ ವೇಳೆ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಚೆನ್ನೈ ಹೈಕೋರ್ಟ್‌ಗೆ ದೂರು ಸಲ್ಲಿಸಿದ್ದರು. ಸುಮಾರು ಒಂದೂವರೆ ದಶಕಕ್ಕೂ ಹೆಚ್ಚು ಕಾಲ ಸುದೀರ್ಘ ವಿಚಾರಣೆ ನಡೆಸಿದ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮೈಕೆಲ್ ಕುನ್ನಾ ಅವರು 2014 ಸೆಪ್ಟೆಂಬರ್ 27ರಂದು ಮಹತ್ವದ ತೀರ್ಪು ನೀಡಿದ್ದರು. ಜಯಲಲಿತಾ, ಅವರ ಆಪ್ತ ಗೆಳತಿಯರಾದ ಶಶಿಕಲಾ, ಇಳವರಸಿ, ದತ್ತುಪುತ್ರ ಸುಧಾಕರನ್ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವುದು ಸಾಬೀತಾಗಿದ್ದು, ಆರೋಪಿಗಳೆಂದು ತೀರ್ಪು ನೀಡಿತ್ತು.

ಜಯಲಲಿತಾಗೆ ನಾಲ್ಕು ವರ್ಷ ಜೈಲು ಶಿಕ್ಷೆ, ನೂರು ಕೋಟಿ ದಂಡ ವಿಧಿಸಿದ್ದರು. ಇದರ ಪರಿಣಾಮ ತಮಿಳುನಾಡಿನಲ್ಲಿ ಅಮ್ಮ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದಲ್ಲದೆ, ಅವರ ಶಾಸಕತ್ವ ಸ್ಥಾನವೂ ಅನರ್ಹಗೊಂಡಿತ್ತು. ಜತೆಗೆ ಪರಪ್ಪನ ಅಗ್ರಹಾರದಲ್ಲಿ 24 ದಿನ ಜೈಲುವಾಸ ಶಿಕ್ಷೆ ಅನುಭವಿಸಿದ್ದರು. ಸಿಬಿಐ ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಆದರೆ, ಹೈಕೋರ್ಟ್ ತಡೆಯಾಜ್ಞೆ ನೀಡಲು ನಿರಾಕರಿಸಿದ್ದರಿಂದ ಸುಪ್ರೀಂಕೋರ್ಟ್‌ಗೆ ಜಯಾ ಪರ ವಕೀಲರು ಮೊರೆ ಹೋಗಿದ್ದರು. ಅಂತಿಮವಾಗಿ ಸುಪ್ರೀಂಕೋರ್ಟ್ ಜಯಲಲಿತಾ ಮತ್ತು ಅವರ ಆಪ್ತರಿಗೆ ಷರತ್ತು ಬದ್ಧ ಜಾಮೀನು ನೀಡಿ ಕರ್ನಾಟಕ ಹೈಕೋರ್ಟ್‌ನಲ್ಲಿ ಮೂರು ತಿಂಗಳೊಳಗೆ ಪ್ರಕರಣವನ್ನು ಇತ್ಯರ್ಥಗೊಳಿಸುವಂತೆ ಸೂಚನೆ ನೀಡಿತ್ತು.
ಎರಡೂ ಕಡೆ ವಾದ-ವಿವಾದ ನಡೆದು ಅಂತಿಮವಾಗಿ ಮೇ 11ರಂದು ಹೈಕೋರ್ಟ್ ವಿಶೇಷ ಪೀಠದ ನ್ಯಾಯಮೂರ್ತಿ ಸಿ.ಕೆ.ಕುಮಾರಸ್ವಾಮಿ ಅವರು ಜಯಲಲಿತಾ ಮತ್ತು ಇತರ ಮೂವರು ಆರೋಪಿಗಳನ್ನು ನಿರ್ದೋಷಿಗಳೆಂದು ತೀರ್ಪು ನೀಡಿದ್ದರು.
ಜಯಲಲಿತಾ ಹೊಂದಿರುವ ಆಸ್ತಿಗೂ, ಅವರ ವಿರುದ್ಧ ನೀಡಿರುವ ದೂರಿಗೂ ತಾಳೆಯಾಗುವುದಿಲ್ಲ. ಒಬ್ಬ ವ್ಯಕ್ತಿ ತನ್ನ ಆದಾಯಕ್ಕಿಂತ ಶೇ.10ರಷ್ಟು ಹೆಚ್ಚಿನ ಆದಾಯವನ್ನು ಹೊಂದಿದ್ದರೆ ಅದು ಕಾನೂನು ಬಾಹಿರವಲ್ಲ ಎಂದು ಉಲ್ಲೇಖಿಸಿದ್ದರು.
ಆದರೆ, ಇದಕ್ಕೆ ಆಕ್ಷೇಪಿಸಿದ್ದ ಬಿ.ವಿ.ಆಚಾರ್ಯ ನ್ಯಾಯಮೂರ್ತಿಗಳ ಕೂಡುವಿಕೆಯಲ್ಲಿ ತಪ್ಪು ಲೆಕ್ಕಾಚಾರವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸದಿದ್ದರೆ ನ್ಯಾಯಾಲಯದ ಮುಂದೆ ನಗೆಪಾಟಲಿಗೀಡಾಗುತ್ತೀರೆಂದು ಎಚ್ಚರಿಸಿದ್ದರು. ಅಂತಿಮವಾಗಿ ಸರ್ಕಾರ ಜಯಲಲಿತಾ ಪ್ರಕರಣವನ್ನು ಸುಪ್ರೀಂಕೋರ್ಟ್ ಮೆಟ್ಟಿಲೇರಲು ತೀರ್ಮಾನಿಸಿತ್ತು.

Write A Comment