ಮನೋರಂಜನೆ

ಕಾಕಾ ಮುಟ್ಟೈ: ವೈಚಾರಿಕತೆಗೆ ಮನರಂಜನೆಯ ಕಾವು

Pinterest LinkedIn Tumblr

the-crows-egg

ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರಗಳೆಂದರೆ ಸಾಮಾನ್ಯವಾಗಿ ಬೋರ್ ಹೊಡೆಸುತ್ತವೆ ಹಾಗೂ ಅವು ವಿಮರ್ಶಕರಿಗೋಸ್ಕರವೇ ತಯಾರಾದಂತಿರುತ್ತವೆ. ಅಲ್ಲದೆ ಅವುಗಳಲ್ಲಿ ಮನರಂಜನೆಗೆ ಅವಕಾಶವಿರುವುದಿಲ್ಲ ಹಾಗೂ ತುಂಬಾ ಮೆಲೊಡ್ರಾಮಾದಿಂದ ಕೂಡಿರುತ್ತವೆ ಎಂಬ ನಂಬಿಕೆ ಜನಸಾಮಾನ್ಯರಲ್ಲಿದೆ. ಆದರೆ ಈ ಸಾಲಿನ ರಾಷ್ಟ್ರಪ್ರಶಸ್ತಿ ಪುರಸ್ಕೃತ ತಮಿಳು ಚಿತ್ರ ಕಾಕಾ ಮುಟ್ಟೈ ಮಾತ್ರ ಇದಕ್ಕೆ ಅಪವಾದ ಎಂದರೆ ತಪ್ಪಾಗಲಾರದು. ಮಣಿಕಂಠನ್ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರವು ಮಾಮೂಲಿ ಕಲಾತ್ಮಕ ಚಿತ್ರಗಳಿಗಿಂತ ತೀರಾ ಭಿನ್ನವಾಗಿದೆ. ಚಿತ್ರದ ಪ್ರತಿಯೊಂದು ದೃಶ್ಯವೂ ಜೀವಂತಿಕೆ, ಲವಲವಿಕೆಯಿಂದ ಕೂಡಿದ್ದು, ಪ್ರೇಕ್ಷಕರಿಗೆ ಭರಪೂರ ಮನರಂಜನೆಯನ್ನು ಒದಗಿಸುತ್ತದೆ.
ಸ್ಲಮ್‌ನಲ್ಲಿ ಬೆಳೆದ ಚಿಣ್ಣರಿಬ್ಬರು ಪಿಝಾ ತಿನ್ನುವ ಹಂಬಲವನ್ನು ಈಡೇರಿಸಿಕೊಳ್ಳಲು ನಾನಾ ರೀತಿಯಲ್ಲಿ ಪರದಾಡುವುದೇ ‘ಕಾಕಾ ಮುಟ್ಟೈ’ನ ಒನ್‌ಲೈನ್ ಸ್ಟೋರಿ. 109 ನಿಮಿಷಗಳ ಅವಧಿಯ ಈ ಚಿತ್ರದ ಕಥೆ ತೀರಾ ಸರಳವಾದರೂ, ಮಣಿಕಂಠನ್ ಅತ್ಯಂತ ಚಾಕಚಕ್ಯತೆಯ ನಿರೂಪಣೆಯಿಂದ ಎಲ್ಲೂ ಬೋರೆನಿಸದ ರೀತಿಯಲ್ಲಿ ಚಿತ್ರವನ್ನು ಕೊಂಡೊಯ್ದಿದ್ದಾರೆ.
ಕಾಕಾ ಮುಟ್ಟೈ ಎಂದರೆ ತಮಿಳಿನಲ್ಲಿ ಕಾಗೆ ಮೊಟ್ಟೆ ಎಂದರ್ಥ. ಮನೆಯವರು ಹಾಗೂ ಸ್ಲಂ ನಿವಾಸಿಗಳು, ಅಣ್ಣನನ್ನು ‘ಪೆರಿಯ ಕಾಕಾ ಮುಟ್ಟೈ’ ಹಾಗೂ ತಮ್ಮನನ್ನು ‘ಚಿನ್ನ ಕಾಕಾ ಮುಟ್ಟೈ’ ಎಂಬ ಅಡ್ಡ ಹೆಸರಿನಿಂದಲೇ ಕರೆಯುತ್ತಾರೆ.
ಇವರಿಬ್ಬರೂ ಜೀವನೋಪಾಯಕ್ಕಾಗಿ ರೈಲ್ವೆ ಯಾರ್ಡ್ ನಿಂದ ಕಲ್ಲಿದ್ದಲು ಕದ್ದು ಮಾರಾಟ ಮಾಡುತ್ತಿರುತ್ತಾರೆ. ತಂದೆ ಜೈಲಿನಲ್ಲಿದ್ದರೆ, ತಾಯಿ (ಐಶ್ವರ್ಯಾ ರಾಜೇಶ್) ಈ ಮಕ್ಕಳನ್ನು ಕಷ್ಟಪಟ್ಟು ಸಾಕುತ್ತಿರುತ್ತಾರೆ.ಅಜ್ಜಿಯ ಮನೆಯಲ್ಲಿ ಬೆಳೆಯುವ ಈ ಚಿಣ್ಣರಿಗೂ ಉಳಿದ ಸಾಮಾನ್ಯ ಮಕ್ಕಳ ಹಾಗೆ ಅವರದೇ ಆದ ಕನಸುಗಳಿರುತ್ತವೆ. ಕೊಳೆಗೇರಿ ಸಮೀಪವೇ ಹೊಸತಾಗಿ ತೆರೆಯಲಾದ ಪಿಝಾ ಅಂಗಡಿಯಲ್ಲಿ ಪಿಝಾ ತಿನ್ನುವುದಕ್ಕಾಗಿ ಇವರು ಪಡಬಾರದಷ್ಟು ಕಷ್ಟ ಪಡುವುದೇ ಚಿತ್ರದ ಮುಖ್ಯ ಕಥಾವಸ್ತು. ಅಂಗಡಿಯಲ್ಲಿ ಪಿಝಾ ತಿನ್ನಬೇಕೆಂಬುದೇ ಅವರ ಏಕೈಕ ಹಂಬಲವಾಗಿದೆ. ಯಾವ ರೀತಿಯಲ್ಲಾದರೂ ಪಿಝಾ ಅಂಗಡಿಗೆ ಪ್ರವೇಶ ಪಡೆದು ತಮ್ಮದೇ ಹಣದಿಂದ ಪಿಝಾ ತಿನ್ನಲು ಅವರು ಪ್ಲಾನ್ ಮಾಡುತ್ತಾರೆ…
ನಿರ್ದೇಶಕ ಮಣಿಕಂಠನ್, ಮನರಂಜನೆಯ ಜೊತೆಜೊತೆಗೆ ನಮ್ಮ ಸಮಾಜದಲ್ಲಿರುವ ಅಸಮಾನ ಆರ್ಥಿಕ ಪರಿಸ್ಥಿತಿ ಹಾಗೂ ತಮ್ಮ ದೈನಂದಿನ ಬದುಕಿನ ಆಶೋತ್ತರಗಳನ್ನು ಈಡೇರಿಸಿಕೊಳ್ಳಲು ಬಡಮಕ್ಕಳು ಹೇಗೆ ಶಾಲೆಯನ್ನು ತೊರೆಯುತ್ತಾರೆಂಬ ಬಗ್ಗೆ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುತ್ತಾರೆ.ಸ್ಲಂ ನಿವಾಸಿಗಳ ಜೀವನಶೈಲಿಯನ್ನು ನಿರ್ದೇಶಕ ಮಣಿಕಂಠನ್ ಯಥಾವತ್ತಾಗಿ ತೆರೆಯಲ್ಲಿ ಮೂಡಿಸುವಲ್ಲಿ ಸಫಲತೆ ಕಂಡಿದ್ದಾರೆ.ಕಲಾತ್ಮಕ ಚಿತ್ರವಾದರೂ ಸಾಮಾನ್ಯ ಪ್ರೇಕ್ಷಕನೂ ಇಷ್ಟ ಪಡುವಂತಹ ರೀತಿಯಲ್ಲಿ ಚಿತ್ರವನ್ನು ರೂಪಿಸಿರುವುದು ಅವರ ಹೆಚ್ಚುಗಾರಿಕೆಯಾಗಿದೆ.
ಮಾತ್ರವಲ್ಲ, ಬಡತನದಲ್ಲಿ ಹುಟ್ಟಿದ ಮಕ್ಕಳೂ ಕೂಡ ಬದುಕಿನ ಪ್ರತಿಯೊಂದು ಕ್ಷಣದಲ್ಲೂ ಆನಂದವನ್ನು ಹುಡುಕಲು ಪ್ರಯತ್ನಿಸುತ್ತಾರೆಂಬುದನ್ನು ಕಾಕಾ ಮುಟ್ಟೈ ಹೃದಯಂಗಮವಾಗಿ ತೋರಿಸಿದೆ.
ದಿಢೀರ್ ಹಣಸಂಪಾದಿಸುವುದಕ್ಕಾಗಿ ಈ ಚಿಣ್ಣರು ಕುಡುಕನೊಬ್ಬನನ್ನು ಆಟಿಕೆ ಕಾರಿನಲ್ಲಿ ಸಾಗಿಸುವ ಹಾಗೂ ಬೀದಿನಾಯಿಯೊಂದನ್ನು ದುಬಾರಿ ಬೆಲೆಗೆ ಮಾರುವ ದೃಶ್ಯಗಳು ನಗೆಗಡಲಲ್ಲಿ ತೇಲಿಸುತ್ತವೆ.
ಚಿತ್ರದ ಮುಖ್ಯಪಾತ್ರಗಳಾಗಿರುವ ಬಾಲನಟರಾದ ರಮೇಶ್ ಹಾಗೂ ವ್ನಿೇಶ್ ಅದ್ಭುತವಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿನ ನಟನೆಗಾಗಿ ಇವರಿಬ್ಬರಿಗೂ ರಾಷ್ಟ್ರಪ್ರಶಸ್ತಿ ದೊರೆತಿರುವುದನ್ನು ಇಲ್ಲಿ ನೆನಪಿಸಬೇಕಾಗಿದೆ. ಈ ಸಹೋದರರ ತಾಯಿಯಾಗಿ ನಟಿಸಿದ ಐಶ್ವರ್ಯಾ ರಾಜೇಶ್ ಕೂಡಾ ಅತ್ಯುತ್ತಮವಾಗಿ ನಟಿಸಿದ್ದಾರೆ.ಅವರ ಭಾವಪೂರ್ಣ ಅಭಿನಯವನ್ನು ಕಂಡಾಗ ಗತಕಾಲದ ತಮಿಳು ನಟಿ ಶೋಭಾ ನೆನಪಿಗೆ ಬರುತ್ತಾರೆ. ಪೋಷಕ ನಟರಾಗಿ ರಮೇಶ್ ತಿಲಕ್, ಯೋಗಿ, ಬಾಬು ಆ್ಯಂಟನಿ ಗಮನಸೆಳೆಯುತ್ತಾರೆ. ಚಿಣ್ಣರ ಅಜ್ಜಿಯ ಪಾತ್ರದಲ್ಲಿ ನಟಿಸಿರುವ ನವನಟಿಯ ಅಭಿನಯ ಬಹುಕಾಲ ನೆನಪಿನಲ್ಲುಳಿಯುತ್ತದೆ.
ಆನಂದ್ ಕುಮಾರೇಶನ್ ಹಾಗೂ ಆನಂದ್ ಅಣ್ಣಾಮಲೈ ಸಂಭಾಷಣೆಗಳು ಅತ್ಯಂತ ಲವಲವಿಕೆಯಿಂದ ಕೂಡಿದ್ದು, ಅವುಗಳಲ್ಲಿ ಹಾಸ್ಯ ಹಾಗೂ ಬೌದ್ಧಿಕತೆಗಳೆರಡೂ ಮೇಳೈಸಿವೆ.
ಈ ಚಿತ್ರಕ್ಕೆ ಛಾಯಾಗ್ರಹಣ ಕೂಡ ಮಾಡಿರುವ ಮಣಿಕಂಠನ್ ತಾನೊಬ್ಬ ಅತ್ಯುತ್ತಮ ತಂತ್ರಜ್ಞನೆಂಬುದನ್ನು ಸಾಬೀತುಪಡಿಸಿದ್ದಾರೆ. ಕೊಳೆಗೇರಿಯ ದೃಶ್ಯಗಳನ್ನು ಅವರು ಕಣ್ಣಿಗೆ ಕಟ್ಟುವ ರೀತಿಯಲ್ಲಿ ತೆರೆಯಲ್ಲಿ ಮೂಡಿಸಿದ್ದಾರೆ. ಜಿವಿ ಪ್ರಕಾಶ್ ಹಿನ್ನೆಲೆ ಸಂಗೀತ ಹಾಗೂ ಹಾಡುಗಳು ಕಥೆಗೆ ಪೂರಕವಾಗಿವೆ. ಕಿಶೋರ್ ಅವರ ಹರಿತವಾದ ಸಂಕಲನವು ಚಿತ್ರದ ಮೆರುಗನ್ನು ಇನ್ನಷ್ಟು ಹೆಚ್ಚಿಸಿದೆ.
ಕಾಕಾ ಮುಟ್ಟೈ ಚಿತ್ರ ನೋಡಿ ಥಿಯೇಟರ್‌ನಿಂದ ಹೊರಬರುವ ಪ್ರೇಕ್ಷಕನ ಮೊಗದಲ್ಲಿ ಮಂದಹಾಸವನ್ನು ಮೂಡಿಸುವುದು ಖಂಡಿತ. ಜಾಗತೀಕರಣವು ಕಡುಬಡವರ ಮೇಲೆ ಯಾವ ರೀತಿಯ ದುಷ್ಪರಿಣಾಮ ವನ್ನು ಬೀರಿದೆಯೆಂಬುದನ್ನು ಅತ್ಯಂತ ಮಾರ್ಮಿಕವಾಗಿ ತೋರಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಎಲ್ಲ ವರ್ಗಗಳ ಪ್ರೇಕ್ಷಕರಿಗೂ ಇಷ್ಟವಾಗುವ, ಕಾಕಾ ಮುಟ್ಟೈ ಖಂಡಿತವಾಗಿಯೂ ತಮಿಳು ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗ ಈ ವರೆಗೆ ಕಂಡಿರುವ ಅತ್ಯುತ್ತಮ ಚಿತ್ರರತ್ನಗಳಲ್ಲೊಂದಾಗಿದೆ

Write A Comment