ಮನೋರಂಜನೆ

ನಿರ್ದೇಶಕ ಟಿ.ಕೆ. ದಯಾನಂದ್ ನಿರ್ದೇಶನದ ಚೊಚ್ಚಿಲ ಚಿತ್ರ ‘ಬೆಂಕಿಪಟ್ಣ’ ಇಂದು (ಫೆ.20) ತೆರೆಗೆ

Pinterest LinkedIn Tumblr

be

ಕಥೆಗಳು ಗ್ರಂಥಾಲಯ, ವಿಶ್ವವಿದ್ಯಾಲಯಗಳಲ್ಲಿ ಸಿಕ್ಕುವುದಿಲ್ಲ. ಬೀದಿಗಳಲ್ಲಿ ಸಿಕ್ಕುತ್ತವೆ, ಕಾಣಿಸುತ್ತವೆ’ ಎನ್ನುವ ಲಂಕೇಶ್ ಅವರ ಮಾತುಗಳನ್ನು ನಾನು ಗಟ್ಟಿಯಾಗಿ ನಂಬಿಕೊಂಡಿದ್ದೇನೆ…

ಇದು ನಿರ್ದೇಶಕ ಟಿ.ಕೆ. ದಯಾನಂದ್ ಅವರ ಮಾತು. ಅವರ ನಿರ್ದೇಶನದ ಚೊಚ್ಚಿಲ ಚಿತ್ರ ‘ಬೆಂಕಿಪಟ್ಣ’ ಇಂದು (ಫೆ.20) ತೆರೆಗೆ ಬರುತ್ತಿದೆ. ಈಗಾಗಲೇ ಭರವಸೆಯ ಕಥೆಗಾರನಾಗಿ, ಜನಪರ ಹೋರಾಟಗಳಲ್ಲಿ, ಪೌರಕಾರ್ಮಿಕರ ಪರ ದನಿ ಮತ್ತು ಸಂಶೋಧನೆಯ ಮೂಲಕ ದಯಾನಂದ್ ಬಹು ಮಂದಿಗೆ ಪರಿಚಿತರು. ದಯಾನಂದ್ ಅವರ ಕಥಾ ಸಂಕಲನ ‘ರೆಕ್ಕೆ ಹಾವು’ ಅವರ ಸಂವೇದನೆ ಮತ್ತು ತುಡಿತಗಳನ್ನು ತೋರುತ್ತದೆ. ಅವರಿಗೀಗ ಚೊಚ್ಚಿಲ ಹೆರಿಗೆಯ ಸಂಭ್ರಮ.

‘ಬೆಂಕಿಪಟ್ಣ’ ಚಿತ್ರದ ಹಾಡುಗಳಿಗೆ ಮತ್ತು ಟ್ರೇಲರ್‌ಗೆ ಭರಪೂರ ಪ್ರಶಂಸೆಯೂ ಸಿಕ್ಕಿದೆ. ಚಿತ್ರದ ಆಡಿಯೊ ಬಿಡುಗಡೆ ಸಂದರ್ಭದಲ್ಲಿ ನಿರ್ದೇಶಕ ಯೋಗರಾಜ್ ಭಟ್ಟರು ‘ಈತ ಖಂಡಿತಾ ಕನ್ನಡಕ್ಕೆ ಹೊಸ ರೀತಿಯ ಸಶಕ್ತ ಚಿತ್ರಗಳನ್ನು ನೀಡಬಲ್ಲ ಮುಂಚೂಣಿ ನಿರ್ದೇಶಕರ ಸಾಲಿನಲ್ಲಿ ನಿಲ್ಲುತ್ತಾನೆ’ ಎಂದು ಮೆಚ್ಚುಗೆ ಮಾತನಾಡಿದ್ದರು. ಪ್ರಕಾಶ್ ಬೆಳವಾಡಿ, ಬಿ. ಸುರೇಶ್ ಸೇರಿದಂತೆ ರಂಗಭೂಮಿ ಹಿನ್ನೆಲೆಯ ಬಹುಮಂದಿ ಕೆಲಸ ಮಾಡಿರುವುದು ಸಿನಿಮಾದ ವಿಶೇಷ.

ಬಾಲ್ಯದ ಸಿನಿಮಾ ನಂಟು
‘ನಾನು ಏಳನೇ ತರಗತಿಯಲ್ಲಿದ್ದಾಗ ಸಿನಿಮಾ ಪ್ರೀತಿ ಮತ್ತು ಕುತೂಹಲ ಹೆಚ್ಚಿದ್ದು. ನಾನಾಗ ತುಮಕೂರಿನಲ್ಲಿದ್ದೆ. ನಮ್ಮ ಮನೆಯ ಹತ್ತಿರ ಕುಮಾರಣ್ಣ ಎಂಬುವವರು ವಾರಕ್ಕೊಮ್ಮೆ ವಿಸಿಆರ್‌ನಲ್ಲಿ ಚಿತ್ರಗಳನ್ನು ತಂದು ತೋರಿಸುತ್ತಿದ್ದರು. ಅವರ ಮನೆ ಒಂದು ಮಿನಿ ಥಿಯೇಟರ್‌ನಂತೆ. ಒಂದು ಸಿನಿಮಾಕ್ಕೆ ಒಂದು ರೂಪಾಯಿ ಕೆಲಕ್ಟ್‌ ಮಾಡುತ್ತಿದ್ದರು.

ಆಗಲೇ ಹಿಂದಿ, ತಮಿಳು, ಇಂಗ್ಲಿಷ್ ಸಿನಿಮಾಗಳು ಇವೆ ಎಂದು ಗೊತ್ತಾಗಿದ್ದು. ಆ ಮೂಲಕ ಗ್ಲಾಮರ್, ಇತ್ಯಾದಿ ಸಿನಿಮಾ ಪ್ರಪಂಚ ಗ್ರಹಿಸಿದ್ದು. ಎಸ್‌ಎಸ್‌ಎಲ್‌ಸಿ ನಂತರ ಎಲ್ಲ ಭಾಷೆಯ ಚಿತ್ರಗಳನ್ನು ಗಂಭೀರವಾಗಿ ನೋಡಿದೆ. ತಾಂತ್ರಿಕತೆ, ಸ್ಕ್ರೀನ್ ಪ್ಲೇ, ಶಾಟ್‌ಗಳು ಮತ್ತಿತರ ವಿಷಯಗಳ ಬಗ್ಗೆ ಸ್ನೇಹಿತರಲ್ಲಿ ಚರ್ಚಿಸುತ್ತಿದ್ದೆ.

ಅನುರಾಗ್ ಕಶ್ಯಪ್‌, ರಾಮ್‌ಗೋಪಾಲ್ ವರ್ಮಾ ಇತ್ಯಾದಿ ನಿರ್ದಿಷ್ಟ ನಿರ್ದೇಶಕರ ಪ್ರಯೋಗಾತ್ಮಕ ಸಿನಿಮಾಗಳು ಅಚ್ಚುಮೆಚ್ಚು’ ಎಂದು ಸಿನಿಮಾ ಒಂದರ ಕಥೆಯಂತೆ ಕಾಣುವ ತಮ್ಮ ಬಾಲ್ಯದ ಸಿನಿಮಾ ಸಂಘವನ್ನು ವಿವರಿಸುವರು ದಯಾನಂದ್‌.

ಸದ್ಯಕ್ಕೆ ‘ಬೆಂಕಿಪಟ್ಣ’ದ ಮೂಲಕ ದಯಾನಂದ್ ಚಿತ್ರರಂಗದಲ್ಲಿ ಭರವಸೆಯಾಗಿ ಕಂಡರೂ ಈ ಬಣ್ಣದ ಲೋಕದ ಹಾದಿಯಲ್ಲಿ ಚೆನ್ನಾಗಿಯೇ ಸೈಕಲ್ ತುಳಿದಿದ್ದಾರೆ. ‘ನಾನು ಸಿನಿಮಾರಂಗಕ್ಕೆ ಅರ್ಹನೇ’ ಎಂದು ತಮ್ಮನ್ನೇ ತಾವು ಪ್ರಯೋಗಕ್ಕೆ ಒಡ್ಡಿಕೊಂಡಿದ್ದಾರೆ.

ಕಥೆಗಾರನ ಬೆಂಕಿಪಟ್ಣ…
ವಿಶೇಷ ಆರ್ಥಿಕ ವಲಯ (ಎಸ್‌ಇಝಡ್‌), ಪೌರಕಾರ್ಮಿಕರ ಬದುಕು, ಇತ್ಯಾದಿ ಏಳೆಂಟು ಕಿರುಚಿತ್ರಗಳನ್ನು ನಿರ್ಮಿಸಿರುವ ಅನುಭವ ಮಾತ್ರ ಅವರು ಬೆಂಕಿಪಟ್ಣವನ್ನು ರೂಪಿಸುವಾಗ ಬೆನ್ನಿಗಿದ್ದದ್ದು. ‘ಸಿನಿಮಾಕ್ಕೆ ಕಲಿತುಕೊಂಡು ಹೋದರೆ ಒಳ್ಳೆಯದು ಅಂದುಕೊಂಡೆ. ಟೆಲಿಫಿಲ್ಮ್ ಮತ್ತು ಡಾಕ್ಯೂಮೆಂಟರಿಗಳೇ ಈ ದಿಸೆಯಲ್ಲಿ ನೆರವಾಗಿದ್ದು. ಕ್ಯಾಮೆರಾ ಕೆಲಸ ಮತ್ತು ಸಂಕಲನವನ್ನು ನಾನೇ ಮಾಡುತ್ತಿದ್ದೆ.

ಎಡಿಟಿಂಗ್ ಟೇಬಲ್ಲಿನಲ್ಲಿ ನನ್ನ ಸಿನಿಮಾ ಆಲೋಚನೆಗಳನ್ನು ಪ್ರಯೋಗಕ್ಕೆ ತರುತ್ತಿದ್ದೆ. ನಿರ್ಮಾಪಕ ಮತ್ತು ಸಂಕಲನಕಾರನ ರೀತಿ–ನೀತಿ–ಕೌಶಲಗಳ ಬೇಸಿಕ್‌ ಕರಗತವಾದವು. ನನ್ನ ಮೇಲೆ ನಾನೇ ಪ್ರಯೋಗ ಮಾಡಿಕೊಂಡೆ.

ಬೆಂಜಮಿನ್ ವಾಷಿಂಗ್ಟನ್ ಮತ್ತಿತರ ಸಿನಿಮಾಗಳನ್ನು ನಾನು ಎಡಿಟಿಂಗ್ ಟೇಬಲ್ಲಿಗೆ ತಂದೆ. ಸಿನಿಮಾಗಳ ಶಾಟ್‌ ಮತ್ತು ಸಂಭಾಷೆಗಳನ್ನು ಬೇರೆ ಬೇರೆ ಮಾಡಿ, ಆರ್ಡರ್ ಬದಲಿಸಿದೆ. ನಾನು ಆ ಚಿತ್ರಗಳ ನಿರ್ದೇಶಕನಾದರೆ ಮತ್ತು ಸಂಕಲನಕಾರನಾದರೆ ಯಾವ ರೀತಿ ಮಾಡಬಹುದು ಎಂದು ಹುಡುಕಾಟ ನಡೆಸಿದೆ.

ಆ ಶಾಟ್ ಬೇರೆ ಕಡೆ ಇದ್ದರೆ ಯಾವ ರೀತಿ ಆಗುತ್ತದೆ, ಈ ಸಂಭಾಷಣೆ ಮತ್ತೊಂದು ಕಡೆ ಬಂದರೆ ಯಾವ ಪರಿಣಾಮ ಬೀರುತ್ತದೆ ಎಂದು ಗಮನಿಸಿದೆ. ಆಗ ಸಿನಿಮಾಗಳಲ್ಲಿ ನಾನು ಮುಂದುವರೆಯಬಹುದು ಎನ್ನುವ ಭರವಸೆ ಸಿಕ್ಕಿತು. ಈ ಮುಂಚೆ ಗಣಿಗಾರಿಕೆ ವಿರುದ್ಧ ಜನರು ಹೋರಾಡಿ ಗೆಲ್ಲುವ ಕಥಾವಸ್ತುವಿನ ‘ದೋಣಿಮಲೈ’ ಹೆಸರಿನ ಕಥೆ ಸಿದ್ಧಮಾಡಿಕೊಂಡಿದ್ದು ಅದನ್ನು ವಿಡಿಯೊ ಮಾಡಿದ್ದೆ.

ಹಲವು ನಿರ್ಮಾಪಕರಿಗೆ ತೋರಿಸಿದರೂ ಬೆಂಬಲ ಸಿಕ್ಕಲಿಲ್ಲ. ಸಿನಿಮಾ ಅರ್ಹತೆಗಳನ್ನು ನಾನು ಕಂಡುಕೊಂಡಮೇಲೆ ‘ದೋಣಿಮಲೈ’ ಅನ್ನು ಪುನರ್‌ ದೃಶ್ಯೀಕರಿಸಿದಾಗ ಅದು ಬೇರೆಯದ್ದೇ ಆಗಿ ಕಂಡಿತು’ ಎಂದು ಸಿನಿಮಾ ಲೋಕ ಸಾಹಸಗಳನ್ನು ಬಿಚ್ಚಿಡುವರು.

ಸಾಮಾನ್ಯ ಪ್ರೇಕ್ಷಕನಿಗೆ ಜೈ!
ಜಾಗತಿಕ ಸಿನಿಮಾಗಳ ದೃಷ್ಟಿ ಮತ್ತು ಸಾಮಾನ್ಯ ಜನರು ನೋಡುವ ಚಿತ್ರಗಳ ರೀತಿ–ನೀತಿಗಳ ಸ್ಪಷ್ಟ ವ್ಯತ್ಯಾಸ ದಯಾನಂದ್ ಅವರಿಗೆ ಇದೆ. ‘ಚಿತ್ರರಂಗಕ್ಕೆ ಸಾಮಾನ್ಯ ಪ್ರೇಕ್ಷಕನೇ ಬೆಂಬಲಿಗ’ ಎನ್ನುವ ಅವರ ಮಾತುಗಳಲ್ಲಿ ‘ಬೆಂಕಿಪಟ್ಣ’ ಒಂದು ಸರಳ ಮತ್ತು ನಿರೂಪಣೆಯಲ್ಲಿ ಭಿನ್ನ ಚಿತ್ರ ಎನ್ನುವುದು ಇಣುಕುತ್ತದೆ. ‘ನಾನು ಸಣ್ಣ ಬಜೆಟ್‌ನಲ್ಲಿ ಸಿನಿಮಾ ಮಾಡಲು ಒಂದು ಚಿತ್ರಕತೆ ಸಿದ್ಧಮಾಡಿಕೊಂಡಿದ್ದೆ.

ಆ ಸಮಯದಲ್ಲಿ ನಿರ್ಮಾಪಕ ಜಾಕೀರ್ ಅಲಿಖಾನ್ ಅವರ ಪರಿಚಯವಾಯಿತು. ಈ ಮುನ್ನ ಅವರ ಪ್ರೊಪೈಲ್ ಡಾಕ್ಯೂಮೆಂಟರಿ ಮಾಡಿದ್ದೆ. ನಾವು ವಿಶ್ವ ಸಿನಿಮಾಗಳ ಬಗ್ಗೆ ಮಾತನಾಡಬಹುದು, ಆದರೆ ಅದಕ್ಕೆ ವೀಕ್ಷಕರ ಸಂಖ್ಯೆ ನಿರ್ದಿಷ್ಟ ಪ್ರಮಾಣದಲ್ಲಿದೆ.

ಅದನ್ನೆಲ್ಲ ಪಕ್ಕಕ್ಕಿಟ್ಟು ಸಾಮಾನ್ಯ ಪ್ರೇಕ್ಷಕರಿಗೆ ಇಷ್ಟವಾಗುವ ಕಥೆ ಕೊಡಬೇಕು ಎಂದುಕೊಂಡಿದ್ದೆ. ನಮ್ಮ ನಡುವಿನ ಸಮಾಜದಲ್ಲಿ ನಾನು ನೋಡಿದ ನಾಲ್ಕಾರು ಕಥೆಗಳನ್ನೆಲ್ಲ ಒಂದೇ ಎಳೆಯಲ್ಲಿ ತಾರ್ಕಿಕವಾಗಿ ಜೋಡಿಸಿಕೊಂಡಿದ್ದೇನೆ. ಆಕ್ಷನ್ ಕಟ್ ಹೇಳಿದ ಮೊದಲ ದಿನ ನರ್ವಸ್ ಆಗಿತ್ತು. ನಂತರ ವಿಶ್ವಾಸ ಹೆಚ್ಚಿತ್ತು.

ರಂಗಭೂಮಿ ಕಲಾವಿದರೇ ಹೆಚ್ಚು ಇದ್ದ ಕಾರಣ ಅನುಕೂಲವಾಯಿತು. ಕುತೂಹಲಕ್ಕೆ ಕಾರಣವಾಗುವ ಒಂದಿಷ್ಟು ಅಂಶಗಳನ್ನು ಸರಳವಾಗಿ ಹೇಳಲಾಗಿದೆ. ಹೊಸ ರೀತಿಯ ತಾಂತ್ರಿಕ ಅಂಶಗಳನ್ನು ಕಾಣಬಹುದು’ ಎನ್ನುತ್ತಾರೆ ದಯಾನಂದ್.

120ಕ್ಕೂ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಇದೇ ಹೊತ್ತಿನಲ್ಲಿ ಅವರು ಮತ್ತೆರಡು ಕಥೆಗಳನ್ನು ಸಿದ್ಧಮಾಡಿಕೊಂಡಿದ್ದಾರೆ. ಒಬ್ಬ ನಿರ್ದೇಶಕನನ್ನಾಗಿ ತಮ್ಮನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಕುತೂಹಲ ಅವರಿಗೂ ಇದ್ದು ಆ ನಂತರವೇ ಮುಂದಿನ ಆಲೋಚನೆ ಎನ್ನುವುದು ದಯಾನಂದ್ ನಿಲುವು.

Write A Comment