ಕರ್ನಾಟಕ

ಇಂದಿನಿಂದ ವಿಧಾನಮಂಡಲ ಅಧಿವೇಶನ: ಸರಕಾರಕ್ಕೆ ಚಾಟಿ ಬೀಸಲು ‘ಕೈ’ ಸಜ್ಜು; ಎತ್ತಿನ ಗಾಡಿಯಲ್ಲಿ ಬರಲಿದ್ದಾರೆ ಕಾಂಗ್ರೆಸ್ ನಾಯಕರು!

Pinterest LinkedIn Tumblr

ಬೆಂಗಳೂರು: ಇಂದಿನಿಂದ (ಸೆ.13 ಸೋಮವಾರ) 10 ದಿನಗಳ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದೆ. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೋವಿಡ್ ನಿರ್ವಹಣೆ, ಲಸಿಕೆ ಪೂರೈಕೆ ವ್ಯತ್ಯಯ, ರಾಷ್ಟ್ರೀಯ ಶಿಕ್ಷಣ ನೀತಿ ಸಹಿತ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷ ಕಾಂಗ್ರೆಸ್ ಸಜ್ಜುಗೊಳ್ಳುತ್ತಿದೆ.

(ಸಂಗ್ರಹ ಚಿತ್ರ)

ಈ ಕಲಾಪದಲ್ಲಿ 18 ಮಸೂದೆಗಳ ಅಂಗೀಕಾರಕ್ಕೆ ಮುಂದಾಗಿದೆ. ಕರ್ನಾಟಕ ಪೊಲೀಸ್ ಕಾಯ್ದೆ 1963, ಆನ್ ಲೈನ್ ಜೂಜಾಟ ಸೇರಿದಂತೆ ಎಲ್ಲಾ ಪ್ರಮುಖ ತಿದ್ದುಪಡಿಗಳಿಗೆ ಬಯಸುತ್ತಿದೆ.

ಅಧಿವೇಶನದ ಮೊದಲ ದಿನವಾದ ಸೋಮವಾರ ಪ್ರತಿಪಕ್ಷದ ನಾಯಕ ಡಿ.ಕೆ.ಶಿವಕುಮಾರ್ ಇಂಧನ ಬೆಲೆಯ ಏರಿಕೆಯನ್ನು ಖಂಡಿಸಿ ಎತ್ತಿನ ಗಾಡಿಯಲ್ಲಿ ವಿಧಾನಸೌಧಕ್ಕೆ ಬರಲು ಸಜ್ಜಾಗಿದ್ದಾರೆ. ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆಗಳು ಮತ್ತು ಧಾರ್ಮಿಕ ವಿಷಯಗಳ ಕುರಿತು ಕರಾವಳಿ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹೆಚ್ಚಿಸಲು ಕ್ರಮ ಕೈಗೊಳ್ಳುವ ಅಗತ್ಯ ಕುರಿತು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳಲು ಡಿ ಕೆ ಶಿವಕುಮಾರ್ ಮುಂದಾಗಿದ್ದಾರೆ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದು ಮೊದಲ ಅಧಿವೇಶನವಾಗಿದೆ. ಹಿಂದುಳಿದ ವರ್ಗಗಳ ಆಯೋಗ ನಡೆಸುವ ಜಾತಿ ಗಣತಿ, 2ಎ ಮಾನ್ಯತೆಗಾಗಿ ಪಂಚಮಶಾಲಿ-ಲಿಂಗಾಯತರ ಬೇಡಿಕೆ ಮತ್ತು ಇತರ ವಿರೋಧ ಪಕ್ಷಗಳ ಬೇಡಿಕೆಯನ್ನು ಸರ್ಕಾರ ಹೇಗೆ ನಿಭಾಯಿಸುತ್ತದೆಯೆಂಬ ಎಂಬ ಕುತೂಹಲವಿದೆ.

 

Comments are closed.