ಕರ್ನಾಟಕ

ಶಿವಮೊಗ್ಗ ಕ್ವಾರಿ ಸ್ಪೋಟ ಕೇಸ್: 9 ತಿಂಗಳ ಬಳಿಕ ಡಿಎನ್ಎ ವರದಿಯಿಂದ 6ನೇ ಶವದ ಗುರುತು ಪತ್ತೆ

Pinterest LinkedIn Tumblr

ಶಿವಮೊಗ್ಗ: ಶಿವಮೊಗ್ಗ ಕಲ್ಲಗಂಗೂರು ಕಲ್ಲು ಕ್ವಾರಿಯಲ್ಲಿ 2021ರ ಜನವರಿ 21ರ ಸಂಭವಿಸಿದ ಸ್ಪೋಟದಲ್ಲಿ ಮೃತಪಟ್ಟಿದ್ದ 6ನೇ ವ್ಯಕ್ತಿಯ ಗುರುತು ಬರೋಬ್ಬರಿ 9 ತಿಂಗಳ ಬಳಿಕ ಪತ್ತೆಯಾಗಿದೆ.

ಕಲ್ಲಗಂಗೂರು ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟದಲ್ಲಿ ಆರು ಮಂದಿ ಮೃತಪಟ್ಟಿದ್ದರು. ಐವರ ಗುರುತು ಪತ್ತೆಯಾಗಿ ಮೃತದೇಹಗಳನ್ನು ಹಸ್ತಾಂತರ ಮಾಡಲಾಗಿತ್ತು. ಆದರೆ ಆರನೆ ವ್ಯಕ್ತಿಯ ದೇಹ ಸಂಪೂರ್ಣ ಛಿದ್ರವಾಗಿದ್ದ ಹಿನ್ನೆಲೆ ಗುರುತು ಪತ್ತೆ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ.

ಇದೀಗ ಆತನ ಗುರುತು ಪತ್ತೆಯಾಗಿದ್ದು ಮೃತನನ್ನು ಭದ್ರಾವತಿಯ ಕೆ.ಹೆಚ್.ನಗರದ ಆಟೋ ಚಾಲಕ ಶಶಿ ಅಲಿಯಾಸ್ ದೇವೇಂದ್ರಪ್ಪ (32) ಎಂದು ಗುರುತಿಸಲಾಗಿದೆ.

ಕಲ್ಲು ಕ್ವಾರಿ ಸ್ಫೋಟದ ನಂತರ ಛಿದ್ರವಾಗಿದ್ದ ದೇಹದ ಭಾಗಗಳನ್ನು ವಶಕ್ಕೆ ಪಡೆದ ಪೊಲೀಸರು ಅವುಗಳನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಿದ್ದರು. ಬೆಂಗಳೂರಿನ ಮಡಿವಾಳದಲ್ಲಿರುವ ಎಫ್ಎಸ್ಎಲ್ ಪ್ರಯೋಗಾಲಯಕ್ಕೆ ಕಳುಹಿಸಿದ್ದು ಪರೀಕ್ಷಾ ವರದಿ ಮೂಲಕ ಗುರುತು ಪತ್ತೆಯಾಗಿದೆ.

ಅಂದು ರಾತ್ರಿ 10.20ರ ಹೊತ್ತಿಗೆ ಕಲ್ಲಗಂಗೂರು ಗ್ರಾಮದ ಸರ್ವೇ ನಂಬರ್ 2ರಲ್ಲಿರುವ ಎಸ್.ಎಸ್.ಕ್ರಷರ್ ಬಳಿ ಭಾರಿ ಪ್ರಮಾಣದ ಸ್ಪೋಟಕ ಸ್ಪೋಟಗೊಂಡಿತ್ತು. ಈ ಘಟನೆಯಲ್ಲಿ ಆರು ಮಂದಿ ಮೃತರಾಗಿದ್ದರು. ಆಂಧ್ರದಿಂದ ವಾಹನದಲ್ಲಿ ಸ್ಪೋಟಕ ತುಂಬಿಕೊಂಡು ತರಲಾಗಿತ್ತು. ಕ್ರಷರ್ ಬಳಿ ವಾಹನ ನಿಲ್ಲಿಸಿದ್ದಾಗ ಸ್ಪೋಟ ಸಂಭವಿಸಿದ್ದು, ಘಟನೆ ಸಂಬಂಧ ಕ್ವಾರಿ ಮಾಲೀಕರು, ಕ್ವಾರಿಗೆ ಜಾಗ ನೀಡಿದ ಮಾಲೀಕ, ಸ್ಪೋಟಕ ಪೂರೈಕೆ ಮಾಡಿದಾತ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿತ್ತು.

Comments are closed.