ಕರಾವಳಿ

ಆಯುರ್ವೇದ ಜೀವನಶೈಲಿಯಿಂದ ರೋಗನಿರೋಧಕ ಶಕ್ತಿ : ಡಾ.ಹೇಮವಾಣಿ 

Pinterest LinkedIn Tumblr

ಮಂಗಳೂರು : ಭಾರತೀಯ ಜೀವನ ಶಾಸ್ತ್ರ ಆಯುರ್ವೇದ ಸಹಿತ ಆಯುಷ್ ವೈದ್ಯಪದ್ಧತಿಗಳು ಇಂದು ಜನರ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಜಿಲ್ಲಾ ಆಯುಷ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಹೇಮವಾಣಿ ತಿಳಿಸಿದರು.

ಅವರು ಮಂಗಳೂರು ನಗರದ ಬೋಳೂರು ಸುಲ್ತಾನ್ ಬತ್ತೇರಿ ಬಳಿ ಇರುವ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕಾಹಾರ ಸಪ್ತಾಹ ಹಾಗೂ ಆಝಾದೀ ಕಾ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ಉಚಿತ ಆಯುಷ್ ಕಿಟ್ ವಿತರಣೆ ಮಾಡಿ ಮಾತನಾಡಿದರು.

ಆಯುಷ್ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ವತಿಯಿಂದ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮಕ್ಕೆ ಸ್ಥಳೀಯ ಬೋಳೂರು ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ಸಹಕಾರ ನೀಡಿತು.ಕ್ಲಬ್‌ ನ ಗೌರವಾಧ್ಯಕ್ಷ ಶ್ರೀ ವಾಸುದೇವ ಬೋಳೂರ್ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.

ಅಧ್ಯಕ್ಷ ಶ್ರೀ ರಾಘವ ಪಿ.ಬೋಳೂರು ಮಾತನಾಡಿ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ನ ಸಹಕಾರದೊಂದಿಗೆ ಕಳೆದ ಹಲವಾರು ವರ್ಷಗಳಿಂದ ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈ ಅಂಗನವಾಡಿ ಕೇಂದ್ರ ಮಾದರಿ ಕೇಂದ್ರವಾಗಿ ಕಾರ್ಯನಿರ್ವಹಿಸುವಲ್ಲಿ ಶಿಕ್ಷಕಿ ಕುಮುದಾಕ್ಷಿಯವರ ಪಾತ್ರ ಬಹಳ ಮಹತ್ವದ್ದಾಗಿದೆ ಎಂದರು.

ಆಯುಷ್ ಇಲಾಖೆಯ ನಿವೃತ್ತ ಹಿರಿಯ ಆಯುರ್ವೇದ ವೈದ್ಯ ಡಾ.ದೇವದಾಸ್ ಮಾತನಾಡಿ ಆಯುಷ್ ಇಲಾಖೆಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜೊತೆಗೆ ಆಯೋಜಿಸುತ್ತಾ ಬರುತ್ತಿರುವ ಕಾರ್ಯಕ್ರಮ ಯಶಸ್ವಿಯಾಗಿ ಮುಂದುವರಿಯುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು ಹಾಗೂ ಆಯುಷ್ ಆಸ್ಪತ್ರೆಗಳ ಪ್ರಯೋಜನ ಪಡೆಯುವಂತೆ ಕರೆಯಿತ್ತರು.

ಶ್ರೀಮತಿ ಪೂರ್ಣಿಮಾ ಸ್ವಾಗತಿಸಿದರು.ಶ್ರೀಮತಿ ಕುಮುದಾಕ್ಷಿ ವಂದಿಸಿದರು. ಕಾರ್ಯಕ್ರಮ ದಲ್ಲಿ ಮಕ್ಕಳ ಪೋಷಕರು ಸಿದ್ಧಪಡಿಸಿದ ಪೌಷ್ಟಿಕಾಹಾರಗಳಿಗೆ ಬಹುಮಾನ ವಿತರಣೆ, 0-6 ಮಕ್ಕಳಿಗೆ ಪೌಷ್ಟಿಕಾಂಶ ವೃದ್ಧಿ ಹಾಗೂ ರೋಗನಿರೋಧಕ ಔಷಧ ವಿತರಣೆ, ಹಿರಿಯ ‌ನಾಗರಿಕರಿಗೆ ಆಯುಷ್ ಕಿಟ್ವಿತರಣೆ ಹಾಗೂ ಕೊರೊನಾ ಮತ್ತು ಇತರ ರೋಗಗಳು ಬರದಂತೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧ ಹಾಗೂ ಮಾಹಿತಿಯನ್ನು ನೀಡಲಾಯಿತು. ಮಕ್ಕಳ ಪೋಷಕರು, ಹಿರಿಯ ನಾಗರಿಕರು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದರು.

Comments are closed.