ಬೆಂಗಳೂರು: ಡಾ. ಎಸ್.ಎಲ್ ಭೈರಪ್ಪನವರ ಪರ್ವ ನಾಟಕದ ಪ್ರದರ್ಶನವನ್ನು ರಂಗಾಯಣಗಳ ಮೂಲಕ ರಾಜ್ಯಾದ್ಯಂತ ಆಯೋಜಿಸಲು ಒಂದು ಕೋಟಿ ರೂ. ಅನುದಾನವನ್ನು ಸಿಎಂ ಯಡಿಯೂರಪ್ಪ ಪ್ರಕಟಿಸಿದ್ದಾರೆ.
ಇಂದಿನ ಬಜೆಟ್ನಲ್ಲಿ ಸಂಸ್ಕೃತಿ, ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ವಲಯಕ್ಕೆ ಯಡಿಯೂರಪ್ಪ ಒಟ್ಟು 2,645 ಕೋಟಿ ರೂ. ಅನುದಾನ ಪ್ರಕಟಿಸಿದ್ದಾರೆ.
ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿರುವ ಅರಣ್ಯಗಳ ವಿಧ ಮತ್ತು ಸಾಂದ್ರತೆ ವಿವರಗಳನ್ನು 50 ಸೆಂಟಿ ಮೀಟರ್ ಸ್ಯಾಟ್ಲೈಟ್ ರೆಸಲೂಷನ್ ಒಳಗೊಂಡ ನಕ್ಷೆ ತಯಾರಿ.
ಅಯೋಧ್ಯೆ ರಾಮ ಮಂದಿರಕ್ಕೆ ಕರ್ನಾಟಕದಿಂದ ತೆರಳುವ ಭಕ್ತರಿಗೆ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗುವುದು. ಈ ಕಟ್ಟಡಕ್ಕೆ ಉತ್ತರ ಪ್ರದೇಶ ಸರ್ಕಾರ 5 ಎಕ್ರೆ ಜಮೀನು ನೀಡಲಿದ್ದು ಕಾಮಗಾರಿ ಆರಂಭಿಸಲು 10 ಕೋಟಿ ಅನುದಾನ.
ತುಮಕೂರಿನಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಮತ್ತು ಉಡುಪಿಯಲ್ಲಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಗೌರವಾರ್ಥ ಸ್ಮೃತಿ ವನ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ. ಆದಿಕವಿ ಪಂಪನಿಂದ ಮುದ್ಡಣನ ಕಾಲಘಟ್ಟದವರೆಗೆ ಎಲ್ಲ ಕೃತಿಗಳನ್ನು ಡಿಜಿಟಲೀಕರಿಸಿ ವಿಕೀಪಿಡಿಯಾ- ವಿಕಿಸೋರ್ಸ್ಗೆ ಅಪ್ಲೋಡ್ ಮಾಡಲಾಗುವುದು.
ಕಬಿನಿ ಕೆಳಭಾಗದಲ್ಲಿ 50 ಕೋಟಿ ರೂ.ಗಳಲ್ಲಿ ಥೀಮ್ ಪಾರ್ಕ್, ಉಡುಪಿಯ ಸೋಮೇಶ್ವರ ಕಡಲ ತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 10 ಕೋಟಿ. ರೂ., ತ್ರಾಸಿ, ಮರವಂತೆ, ಒತ್ತಿನೆಣೆ ಇತರ ಕಡಲ ತೀರಗಳ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ.
ತದಡಿಯಲ್ಲಿ 1 ಎಕ್ರೆ ಪ್ರದೇಶದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಪರಿಸರ ಪ್ರವಾಸೋದ್ಯಮ. ಚಾಮರಾಜನಗರ ಜಿಲ್ಲೆಯ ಗೋಪಿನಾಥಂನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ವನ್ಯಜೀವಿ ಸಫಾರಿ. ಆನೆ ಕಾರಿಡಾರ್ ಭಾಗವಾಗಿರುವ ಚಾಮರಾಜನಗರ ಬೂದಿಪಡಗದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಆನೆ ಶಿಬಿರ ಸ್ಥಾಪನೆ.