ಕರ್ನಾಟಕ

ಯಡಿಯೂರಪ್ಪ ಇಂದು ಮಂಡಿಸಿರುವ ಬಜೆಟ್’ನಲ್ಲಿ ಯಾವ ವಲಯಕ್ಕೆ ಎಷ್ಟು ಅನುದಾನ ನೀಡಿದ್ದಾರೆ ನೋಡಿ…

Pinterest LinkedIn Tumblr

ತೆರಿಗೆ ಹೆಚ್ಚಳ ಮಾಡದೆ, ಎಲ್ಲಾ ಜಾತಿ ಧರ್ಮಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ರಾಜ್ಯದ ಅಭಿವೃದ್ಧಿಗೆ ಹಲವು ಉಪಕ್ರಮಗಳನ್ನು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಜೊತೆಗೆ ಗೋ ಹತ್ಯೆ ನಿಷೇಧದ ಪರಿಣಾಮವಾಗಿ ಎಲ್ಲಾ ರಾಜ್ಯಗಳಲ್ಲಿ ಗೋ ಶಾಲೆ ಹಾಗೂ ಅಯೋಧ್ಯೆಯಲ್ಲಿ ರಾಜ್ಯದ ಭಕ್ತರಿಗಾಗಿ ಯಾತ್ರಿ ನಿವಾಸ ಸ್ಥಾಪನೆಗೂ ಬಜೆಟ್‌ನಲ್ಲಿ ನಿರ್ಧರಿಸಲಾಗಿದೆ.

ತೆರಿಗೆಗಳ ಏರಿಕೆ ಇಲ್ಲ…
ಕೊರೊನಾ ವೈರಸ್ ಸೋಂಕಿನ ಅಬ್ಬರ, ಲಾಕ್‌ಡೌನ್‌ನಿಂದ ಆದ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಜನರಿಗೆ ಬಜೆಟ್‌ನಲ್ಲಿ ಸಿಎಂ ಯಡಿಯೂರಪ್ಪ ಕೊಂಚ ರಿಲೀಫ್‌ ಕೊಟ್ಟಿದ್ಧಾರೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ಇಂಧನಗಳ ತೆರಿಗೆ ಏರಿಕೆ ಆಗಿಲ್ಲ. ಹಾಗೆ ನೋಡಿದ್ರೆ ತೆರಿಗೆ ಇಳಿಕೆ ಆಗುತ್ತೆ ಎಂದು ನಿರೀಕ್ಷಿಸಲಾಗಿತ್ತಾದರೂ, ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಇಂಧನದ ಮೇಲಿನ ತೆರಿಗೆ ಕಡಿಮೆ ಇದೆ ಎಂದು ಸರ್ಕಾರ ಹೇಳಿದೆ.

ಇನ್ನು, ನೋಂದಣಿ ಹಾಗೂ ಮುದ್ರಾಂಕ ಶುಲ್ಕದಲ್ಲೂ ಏರಿಕೆಯಾಗಿಲ್ಲ. ಫ್ಲ್ಯಾಟ್‌ಗಳನ್ನು ಮೊದಲ ಬಾರಿಗೆ ಖರೀದಿಸುವವರಿಗೆ ಕೊಂಚ ತೆರಿಗೆ ರಿಲೀಫ್ ನೀಡಲಾಗಿದೆ. ಸಾಮಾನ್ಯವಾಗಿ ಪ್ರತಿ ಬಜೆಟ್‌ನಲ್ಲೂ ಏರಿಕೆ ಕಾಣುವ ಅಬಕಾರಿ ಸುಂಕ, ಈ ಬಾರಿ ಯಾವುದೇ ಏರಿಕೆ ಕಂಡಿಲ್ಲ.

ಜಾತಿ, ಧರ್ಮಗಳಿಗೆ ಹಣ…
ಒಕ್ಕಲಿಗ ಅಭಿವೃದ್ದಿ ಪ್ರಾಧಿಕಾರ ಸ್ಥಾಪನೆ ನಿರ್ಣಯದ ಜೊತೆಯಲ್ಲೇ 500 ಕೋಟಿ ರೂ. ಅನುದಾನ, ವೀರಶೈವ ಲಿಂಗಾಯತ ಸಮಾಜದ ಸಮಗ್ರ ಅಭಿವೃದ್ಧಿಗೆ 500 ಕೋಟಿ ಅನುದಾನ, ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಕಾರ್ಯಕ್ರಮಗಳಿಗೆ 50 ಕೋಟಿ ರೂ. ನೀಡಿರೋದು ಈ ಬಾರಿಯ ಬಜೆಟ್ ಹೈಲೈಟ್ಸ್.

ಇನ್ನು ರಾಜ್ಯಾದ್ಯಂತ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳ ಸಮಗ್ರ ಏಳಿಗೆಗಳಾಗಿ ಒಟ್ಟು 1,500 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಪ್ರಕಟಿಸಿರುವ ಸಿಎಂ ಯಡಿಯೂರಪ್ಪ, ಈ ಪೈಕಿ ಕ್ರೈಸ್ತ ಸಮುದಾಯಕ್ಕೆ 200 ಕೋಟಿ ರೂ. ನೀಡಿದ್ದಾರೆ.

ಬೆಂಗಳೂರು ಅಭಿವೃದ್ಧಿಗೆ ಭರಪೂರ ಅನುದಾನ…
ಮುಂಬರುವ ಬಿಬಿಎಂಪಿ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಎಸ್ ಯಡಿಯೂರಪ್ಪ, ರಾಜಧಾನಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ. ರಾಜಧಾನಿಯ ಸಮಗ್ರ ಅಭಿವೃದ್ಧಿಗೆ ಭರ್ಜರಿ 7795 ಕೋಟಿ ರು. ಹಣ ತೆಗೆದಿರಿಸಲಾಗಿದೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮೈಸೂರು ಲ್ಯಾಂಪ್ಸ್‌ ನಿಯಮಿತಕ್ಕೆ ಸೇರಿದ ಪ್ರದೇಶದಲ್ಲಿ ಎಕ್ಸ್‌ಪೀರಿಯನ್ಸ್‌ ಬೆಂಗಳೂರು ಕೇಂದ್ರ ಅಭಿವೃದ್ಧಿ. ಬೈಯಪ್ಪನಹಳ್ಳಿಯಲ್ಲಿರುವ ಎನ್‌.ಜಿ.ಇ.ಎಫ್‌ನಲ್ಲಿ ಹಾಗೂ ನಗರದ ಇನ್ನೂ ಮೂರು ಕಡೆ ವೃಕ್ಷೋದ್ಯಾನಗಳ ಅಭಿವೃದ್ಧಿ, ಇನ್ನೂ ನೆನೆಗುದಿಗೆ ಬಿದ್ದಿರುವ ಬೆಂಗಳೂರು ನಗದರದ ಫೆರಿಫೆರಲ್‌ ರಿಂಗ್‌ ರಸ್ತೆ ಕಾಮಗಾರಿ ಆರಂಭಿಸಲು ಕ್ರಮ, 58.2 ಕಿಲೋ ಮೀಟರ್‌ ಉದ್ದದ ಔಟರ್‌ ರಿಂಗ್‌ ರೋಡ್‌ ಹಾಗೂ ಏರ್‌ಪೋರ್ಟ್‌ ಮೆಟ್ರೋ ಜಾಲ ಹಂತ 2A ಮತ್ತು 2B ಅನುಷ್ಠಾನ. ಇದಕ್ಕೆ 14,778 ಕೋಟಿ ಮೀಸಲು ಸೇರಿದಂತೆ ಹಲವು ಯೋಜನೆಗಳಿಗೆ ಬಿಎಸ್‌ವೈ ಸರ್ಕಾರ ಭರಪೂರ ಅನುದಾನ ನೀಡಿದೆ.

ಆರೋಗ್ಯ ಕರ್ನಾಟಕ ನಿರ್ಮಾಣಕ್ಕೆ ಬಿಎಸ್‌ವೈ ಸಂಕಲ್ಪ..!
ಕೊರೊನಾ ವೈರಸ್ ಹಾವಳಿಯಿಂದ ತತ್ತರಿಸಿ, ಇದೀಗ ಸುಧಾರಣೆ ಕಾಣುತ್ತಿರುವ ಆರೋಗ್ಯ ಕ್ಷೇತ್ರಕ್ಕೆ ಯಡಿಯೂರಪ್ಪ ಭರ್ಜರಿ ಅನುದಾನ ನೀಡಿದ್ದಾರೆ. 2021-22ನೇ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ 11,908 ಕೋಟಿ ರೂ. ಅನುದಾನ ಸಿಕ್ಕಿದೆ. ಚಿತ್ರದುರ್ಗ ಜಿಲ್ಲೆಗೆ ಹೊಸ ವೈದ್ಯಕೀಯ ಕಾಲೇಜು, ನಾಲ್ಕು ವಿಭಾಗಗಳಲ್ಲಿ ತಾಯಂದಿರ ಎದೆಹಾಲು ಬ್ಯಾಂಕ್‌, ಶಿವಮೊಗ್ಗದ ಆಯುರ್ವೇದ ಕಾಲೇಜನ್ನು ಆಯುಷ್ ವಿಶ್ವವಿದ್ಯಾಲಯವನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ, ಶಿವಮೊಗ್ಗ ಮತ್ತು ಮೈಸೂರಿನಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಪ್ರಾದೇಶಿಕ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರ ಸೇರಿದಂತೆ ಹಲವು ಯೋಜನೆಗಳಿಗೆ ಸರ್ಕಾರ ಹಣ ಎತ್ತಿಟ್ಟಿದೆ.

ಬಜೆಟ್‌ನಲ್ಲಿ ಕೃಷಿಗೆ ₹31 ಸಾವಿರ ಕೋಟಿ ಅನುದಾನ…
ಕರ್ನಾಟಕ ಬಜೆಟ್‌-2021ರಲ್ಲಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಕೃಷಿ ವಲಯಕ್ಕೆ ಬರೋಬ್ಬರಿ 31,021 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಕೃಷಿ ವಲಯದ ಅಭಿವೃದ್ಧಿಗಾಗಿ ಹಲವಾರು ಹೊಸ ಯೋಜನೆಗಳನ್ನು ಕೈಗೊಳ್ಳಲಾಗಿದೆ.

ಈ ಬಾರಿ ನೀರಾವರಿ ಮತ್ತು ಮಾರುಕಟ್ಟೆ ವ್ಯವಸ್ಥೆ ಒದಗಿಸುವತ್ತ ಯಡಿಯೂರಪ್ಪ ಸರಕಾರ ಹೆಚ್ಚು ಗಮನಹರಿಸಿದೆ. ರಾಜ್ಯದ ಹಲವು ಭಾಗಗಳಲ್ಲಿ ಕೃಷಿ ಉತ್ಪನ್ನ ಆಧಾರಿತ ಮಾರುಕಟ್ಟೆ ನಿರ್ಮಾಣಕ್ಕೆ ಯೋಜನೆ ಹಮ್ಮಿಕೊಂಡಿದೆ. ಜತೆಗೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಹಲವಾರು ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಮಹಿಳಾ ದಿನದಂದೇ ಮಹಿಳೆಯರಿಗೆ ಬಿಎಸ್‌ವೈ ಬಜೆಟ್ ಗಿಫ್ಟ್‌..!
ರಾಜ್ಯದ ಮಹಿಳೆಯರಿಗೆ ಸಿಎಂ ಬಿಎಸ್‌ ಯಡಿಯೂರಪ್ಪ ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಭಾರೀ ಗಿಫ್ಟ್‌ ನೀಡಿದ್ದಾರೆ. ನಾರಿ ಶಕ್ತಿಯನ್ನು ಸ್ಮರಿಸುವ ಮೂಲಕ ಬಜೆಟ್‌ಗೆ ಚಾಲನೆ ನೀಡಿದ ಮುಖ್ಯಮಂತ್ರಿಗಳು, 37,188 ಕೋಟಿ ರೂ. ಮೌಲ್ಯದ ಅನೇಕ ಮಹಿಳಾ ಯೋಜನೆಗಳನ್ನು ಘೋಷಿಸಿದ್ದಾರೆ. ಪ್ರಮುಖವಾಗಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ 2 ಪ್ರಮುಖ ಸರಕಾರಿ ಕಚೇರಿಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಬಿಎಸ್‌ ಯಡಿಯೂರಪ್ಪ ಘೋಷಿಸಿದ್ದಾರೆ. ಶೇ.4ರ ಬಡ್ಡಿದರದಲ್ಲಿ ಮಹಿಳಾ ಉದ್ಯಮಿಗಳಿಗೆ ಸಾಲ ನೀಡಲು ಸರಕಾರ ಮುಂದಾಗಿದ್ದು, 2 ಕೋಟಿ ರೂ.ವರೆಗೂ ಮಹಿಳಾ ಉದ್ಯಮಿಗಳಿಗೆ ಸಾಲ ನೀಡುವುದಾಗಿ ತಿಳಿಸಿದ್ದಾರೆ.

ರಾಜ್ಯಾದ್ಯಂತ 60 ಸಾವಿರ ಮಹಿಳೆಯರಿಗೆ ಸ್ವಯಂ ಉದ್ಯೋಗದ ಅವಕಾಶ ಸೃಷ್ಟಿಸಲು ಸರಕಾರ ಮುಂದಾಗಿದೆ. ಹಪ್ಪಳ, ಉಪ್ಪಿನಕಾಯಿಯಂತಹ ಗೃಹ ಉದ್ಯಮಗಳಿಗೆ ಆನ್‌ಲೈನ್‌ ಮಾರುಕಟ್ಟೆ ಸೃಷ್ಟಿ ಮಾಡುವುದಾಗಿ ಸರಕಾರ ಘೋಷಿಸಿದೆ. ಅದರೊಂದಿಗೆ ವನಿತಾ ಸಂಗಾತಿ ಹೆಸರಲ್ಲಿ ರಿಯಾಯಿತಿ ದರದಲ್ಲಿ ಬಿಎಂಟಿಸಿ ಬಸ್‌ಪಾಸ್‌ ನೀಡುವುದಾಗಿ ಘೋಷಿಸಿದ್ದಾರೆ.

ಗೋ ಹತ್ಯೆ ನಿಷೇಧದ ಬೆನ್ನಲ್ಲೇ ಪ್ರತಿ ಜಿಲ್ಲೆಯಲ್ಲೂ ಗೋ ಶಾಲೆ..!
ಗೋ ಹತ್ಯಾ ನಿಷೇಧ ವಿಧೇಯಕವನ್ನು ಮಂಡಿಸಿ ಉಭಯ ಸದನಗಳಲ್ಲೂ ಅಂಗೀಕಾರ ಪಡೆದ ಸರ್ಕಾರ, ಇದೀಗ ಗೋವುಗಳ ಸಂರಕ್ಷಣೆ ನಿಟ್ಟಿನಲ್ಲಿ ಗೋ ಶಾಲೆಗಳ ಸ್ಥಾಪನೆಗೆ ಮುಂದಾಗಿದೆ. ಇದಲ್ಲದೆ ಸಮಗ್ರ ಗೋ ಸ‌ಂಕುಲ ಸಮೃದ್ಧಿ ಯೋಜನೆಯನ್ನೂ ಯಡಿಯೂರಪ್ಪ ಸರ್ಕಾರ ಜಾರಿಗೆ ತಂದಿದೆ.

ಪ್ರತಿ ಜಿಲ್ಲೆಗೆ ಒಂದರಂತೆ ಗೋಶಾಲೆ ಸ್ಥಾಪನೆ ಮಾಡಲಾಗುವುದು ಎಂದು ರಾಜ್ಯ ಬಜೆಟ್‌ನಲ್ಲಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ವಯಸ್ಸಾದ ಗೋವುಗಳ ಪಾಲನೆ, ಪೋಷಣೆ ಹಿನ್ನೆಲೆಯಲ್ಲಿ ಈ ಗೋ ಶಾಲೆಗಳು ನೆರವಿಗೆ ಬರಲಿವೆ.

ಬಜೆಟ್‌ನಲ್ಲಿ ಅನುಗ್ರಹ ಯೋಜನೆ ಮುಂದುವರಿಕೆ: ಸಿದ್ದು ಬೇಡಿಕೆಗೆ ಮನ್ನಣೆ…
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿಅನುಗ್ರಹ ಯೋಜನೆಯನ್ನು ಮುಂದುವರೆಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ನಿರ್ಧರಿಸಿದೆ. ಕುರಿಗಳು ಸತ್ತರೆ ಐದು ಸಾವಿರ ರೂ. ಗಳ ಪರಿಹಾರ ನೀಡುವ ಅನುಗ್ರಹ ಯೋಜನೆಯನ್ನು ರಾಜ್ಯ ಸರ್ಕಾರ ಹಿಂಪಡೆದಿತ್ತು. ರಾಜ್ಯ ಸರ್ಕಾರದ ಈ ನಿರ್ಣಯ ವಿರೋಧಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದರು.

ಒಂದು ವೇಳೆ ಅನುಗ್ರಹ ಯೋಜನೆಯನ್ನು ಜಾರಿಗೊಳಿಸದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ಮಾಡುವುದಾಗಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದರು. ಈ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದ ಸಿದ್ದರಾಮಯ್ಯ, ಮಳೆ, ಸಿಡಿಲು, ಪ್ರವಾಹ ಹಾಗೂ ಅಪಘಾತದಲ್ಲಿ ಕುರಿಗಳು ಸಾವಿಗೀಡಾದರೆ ಐದು ಸಾವಿರ ರೂ.ಗಳ ಪರಿಹಾರ ನೀಡುವ ಅನುಗ್ರಹ ಯೋಜನೆಯನ್ನು ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತರಲಾಗಿತ್ತು. ಆದರೆ ಈ ಯೋಜನೆಗೆ ತಡೆ ನೀಡಿ ರಾಜ್ಯ ಸರ್ಕಾರ ಅನ್ಯಾಯವೆಸಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ತವರು ಜಿಲ್ಲೆ ಶಿವಮೊಗ್ಗಕ್ಕೆ ಸಿಎಂ ಬೆಣ್ಣೆ..!
ತವರು ಜಿಲ್ಲೆ ಶಿವಮೊಗ್ಗಕ್ಕೆ ಸಿಎಂ ಯಡಿಯೂರಪ್ಪ ಈ ಬಾರಿ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ. ಪಶು ವೈದ್ಯಕೀಯ ವಿಜ್ಞಾನದಲ್ಲಿ ಆಯುರ್ವೇದ ಔಷಧಗಳ ಅಳವಡಿಕೆ ಉತ್ತೇಜನಕ್ಕೆ, ಶಿವವಮೊಗ್ಗದ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ಕಾಲೇಜಿನಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿರುವ ಆಯುರ್ವೇದ ಕಾಲೇಜನ್ನು ಆಯುಷ್‌ ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೇರಿಸಲು ಕ್ರಮ, ಶಿವಮೊಗ್ಗ ಹಾಗೂ ಮೈಸೂರಿನಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಪ್ರಾದೇಶಿಕ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರ ಪ್ರಾರಂಭ ಹಾಗೂ ಶಿವಮೊಗ್ಗದಲ್ಲಿ 384 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಅಯೋಧ್ಯೆಯಲ್ಲಿ ಕರ್ನಾಟಕದ ಭಕ್ತರಿಗಾಗಿ ಯಾತ್ರಿ ನಿವಾಸ…
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ರಾಮ ಮಂದಿರ ಹಾಗೂ ನಗರದ ವಿವಿಧ ದೇವಸ್ಥಾನ ಹಾಗೂ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವ ಕರ್ನಾಟಕದ ಪ್ರವಾಸಿಗರ ಅನುಕೂಲಕ್ಕಾಗಿ, ಅಯೋಧ್ಯೆಯಲ್ಲಿ ಯಾತ್ರಿ ನಿವಾಸ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಯೋಧ್ಯೆಯಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಸಿಎಂ ಯಡಿಯೂರಪ್ಪ ತಮ್ಮ ಬಜೆಟ್‌ನಲ್ಲಿ 10 ಕೋಟಿ ರೂ. ಅನುದಾನ ಘೋಷಣೆ ಮಾಡಿದರು.

ಅಲ್ಲದೇ ಉತ್ತರ ಪ್ರದೇಶ ಸರ್ಕಾರ ಈ ಯಾತ್ರಿ ನಿವಾಸ ನಿರ್ಮಾಣಕ್ಕಾಗಿ 5 ಎಕರೆ ಭೂಮಿಯನ್ನು ಒದಗಿಸಲು ಮುಂದಾಗಿದೆ ಎಂದೂ ಬಿಎಸ್‌ವೈ ಸದನಕ್ಕೆ ಮಾಹಿತಿ ನೀಡಿದರು.

Comments are closed.