ಕರ್ನಾಟಕ

ಕೃಷಿ ಕಾಯ್ದೆ ವಿರೋಧಿಸಿ ಕಾಂಗ್ರೆಸ್’ನಿಂದ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ರಾಲಿ

Pinterest LinkedIn Tumblr

ಬೆಂಗಳೂರು: ಕೃಷಿ ಕಾಯ್ದೆ ವಿರೋಧಿಸಿ ಇಂದು ಕಾಂಗ್ರೆಸ್ ಪಕ್ಷ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ರಾಲಿ, ಸಮಾವೇಶ ಹಾಗೂ ರಾಜಭವನ ಚಲೋ ನಡೆಸುತ್ತಿದೆ. ಈ ನಡುವಲ್ಲೇ ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದು, ಪರಿಣಾಮ ಸಿಲಿಕಾನ್ ಸಿಟಿಕಾನ್ ಸಿಟಿಯಲ್ಲಿ ಸಂಚಾರ ದಟ್ಟಣೆ ಶುರುವಾಗಿದೆ.

ಕಾಂಗ್ರೆಸ್ ಹಮ್ಮಿಕೊಂಡಿರುವ ರಾಜಭವನ ಚಲೋ ರ್ಯಾಲಿಯಲ್ಲಿ ನೂರಾರು ಸಂಖ್ಯೆಯಲ್ಲಿ ರೈತರು ಹಾಗೂ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ. ಹೀಗಾಗಿ ಬೆಂಗಳೂರು–ಮೈಸೂರು ಹೆದ್ದಾರಿ, ಆನಂದರಾವ್‌ ವೃತ್ತ, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಸೇರಿದಂತೆ ಹಲವೆಡೆ ವಾಹನ ಸಂಚಾರ ದಟ್ಟಣೆ ಉಂಟಾಗಿದೆ.

ಹೀಗಾಗಿ ಬೆಂಗಳೂರಿನ ಕೆಲ ಮಾರ್ಗಗಳಲ್ಲಿ ವಾಹನ ಸಂಚಾರ ಬದಲಾವಣೆ ಮಾಡಲಾಗಿದೆ. ಕಾರ್ಪೊರೇಷನ್, ವಿಧಾನಸೌಧ, ಬನಶಂಕರಿಯತ್ತ ತೆರಳುವ ವಾಹನಗಳ ಸಂಚಾರ ಮಾರ್ಗ ಬದಲಾಯಿಸಲಾಗಿದೆ.

ಓಕಳಿಪುರಂ ಜಂಕ್ಷನ್‌ಗೆ ವಾಹನಗಳಿಗೆ ಪ್ರವೇಶ ಇಲ್ಲ. ಓಕಳಿಪುರಂನಿಂದ ಕೃಷ್ಣ ಫ್ಲೋರ್ ಮಿಲ್ ಕಡೆ ಡೈವರ್ಟ್ ಮಾಡಲಾಗಿದೆ. ಶಾಂತಲಾ ಸಿಲ್ಕ್ ನಿಂದ ಮೆಜೆಸ್ಟಿಕ್ ಗೆ ಬರುವ ವಾಹನ ಡೈವರ್ಟ್ ಮಾಡಲಾಗಿದೆ. ಮಲ್ಲೇಶ್ವರಂ ಸರ್ಕಲ್‌ನಲ್ಲಿಯೇ ವಾಹನಗಳ ಡೈವರ್ಟ್ ಮಾಡಲಾಗಿದ್ದು ರೇಸ್‌ಕೋರ್ಸ್ ರಸ್ತೆ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಪ್ರತಿಭಟನಾ ರ್ಯಾಲಿ ಆರಂಭವಾಗುತ್ತಿದ್ದಂತೆ ಕೆಲ ರಸ್ತೆಗಳಲ್ಲಿ ಸಂಚಾರ ಬಂದ್ ಆಗಲಿದೆ. ಕೆಎಸ್ಆರ್ ರೈಲ್ವೆ ನಿಲ್ದಾಣದಿಂದ ಇಂದು ರ್ಯಾಲಿ ಆರಂಭವಾಗುತ್ತಿದ್ದಂತೆ ಶೇಷಾದ್ರಿ ರೋಡ್ ಬಂದ್ ಆಗಲಿದೆ. ಟ್ರಾಫಿಕ್ ನಿಯಂತ್ರಣಕ್ಕೆ 220 ಟ್ರಾಫಿಕ್ ಪೊಲೀಸರ ನಿಯೋಜನೆ ಮಾಡಲಾಗಿದೆ.

ಈ ನಡುವೆ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಸಿಟಿ ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್ ವರೆಗೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಪಶ್ಚಿಮ ವಿಭಾಗ ಡಿಸಿಪಿ, ಕೇಂದ್ರ ವಿಭಾಗ ಡಿಸಿಪಿ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 6ಕ್ಕೂ ಹೆಚ್ಚು ಕೆಎಸ್​ಆರ್​​ಪಿ ತುಕಡಿ ನಿಯೋಜನೆಗೊಂಡಿದೆ.

Comments are closed.