ಕರಾವಳಿ

ಪೊಲೀಸ್ ಮೇಲಿನ ಹಲ್ಲೆ : ಮಾಯ ಗ್ಯಾಂಗ್‌‌ನಿಂದ ಪೊಲೀಸ್ ‌ಗೋಲಿಬಾರ್‌ಗೆ ಪ್ರತಿಕಾರ- ಬಂಧಿತರಿಂದ ಸ್ಪೋಟಕ ಮಾಹಿತಿ ಬಹಿರಂಗ

Pinterest LinkedIn Tumblr

ಮಂಗಳೂರು, ಜನವರಿ19: ಮಂಗಳೂರಿನಲ್ಲಿ ಕರ್ತವ್ಯ ನಿರತ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಮೇಲೆ ಇತ್ತೀಚಿಗೆ ನಡೆದ ಹಲ್ಲೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಈ ಹಲ್ಲೆ 2019ರ ಡಿಸೆಂಬರ್ 19ರಂದು ಮಂಗಳೂರಿನಲ್ಲಿ ನಡೆದ ಪೊಲೀಸ್ ‌ಗೋಲಿಬಾರ್ ಪ್ರಕರಣದ ಪ್ರತೀಕಾರವಾಗಿ ನಡೆದಿದೆ ಎಂಬ ಸ್ಪೋಟಕ ಮಾಹಿತಿ ಬಹಿರಂಗಗೊಂಡಿದೆ.

ನಗರದ ಪೊಲೀಸ್ ಅಯುಕ್ತರ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು, ಕರ್ತವ್ಯ ನಿರತ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಓರ್ವರಿಗೆ ಕಳೆದ ಡಿಸೆಂಬರ್‌ 16 ರಂದು ಹಾಡುಹಗಲಲ್ಲೇ ತಲವಾರು ದಾಳಿ ನಡೆಸಿ ಕೊಲೆಗೆ ಯತ್ನ ಮಾಡಿದ್ದ ಘಟನೆಯು ಮಂಗಳೂರು ಗೋಲಿಬಾರ್‌ ರಿವೇಂಜ್‌ ಎಂಬ ಮಾಹಿತಿ ದೊರೆತಿದ್ದು, ಈ ಸಂಬಂಧ 6 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

2020ರ ಡಿ. 16ರಂದು ಮಂಗಳೂರಿನ ಬಂದರು ಠಾಣಾ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಗಣೇಶ್ ಕಾಮತ್ ಹಾಗೂ ಮಹಿಳಾ ಸಿಬ್ಬಂದಿಯೋರ್ವರು ನಗರದ ನ್ಯೂಚಿತ್ರ ಸರ್ಕಲ್‌ನಲ್ಲಿ ಕರ್ತವ್ಯದಲ್ಲಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರಲ್ಲಿ ಓರ್ವ ಬೈಕ್‌ನಿಂದ ಇಳಿದು ಪೊಲೀಸರು ಕುಳಿತುಕೊಂಡಲ್ಲಿಗೆ ಹೋಗಿ ಗಣೇಶ್ ಕಾಮತ್‌ಗೆ ಹರಿತವಾದ ಅಯುಧದಿಂದ ಹಲ್ಲೆ ನಡೆಸಿ ಬೈಕ್‌ ಏರಿ ಪರಾರಿಯಾಗಿದ್ದರು.

ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಪೊಲೀಸ್ ‌ಗೋಲಿಬಾರ್ ಪ್ರಕರಣದ ಪ್ರತೀಕಾರವಾಗಿ ಈ ಹಲ್ಲೆ ನಡೆದಿದೆ ಎಂಬ ಸ್ಪೋಟಕ ಮಾಹಿತಿ ಬಹಿರಂಗಗೊಂಡಿದೆ ಎಂದು ಕಮಿಷನರ್ ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿ ಅಪ್ರಾಪ್ತ ಬಾಲಕ ಸೇರಿ ಈ ಹಿಂದೆ ಇಬ್ಬರನ್ನು ಬಂಧಿಸಲಾಗಿತ್ತು, ಇದೀಗ ಮತ್ತೆ ಹೆಚ್ಚುವರಿಯಾಗಿ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಬಂಟ್ವಾಳ ನಿವಾಸಿ ಮಹಮ್ಮದ್ ನವಾಝ್ (30), ಕುದ್ರೋಳಿ ನಿವಾಸಿ ಅನೀಶ್ ಅಶ್ರಫ್ (22), ಕುದ್ರೋಳಿ ನಿವಾಸಿ ಅಬ್ದುಲ್ ಖಾದರ್ ಫಹಾದ್ (23), ಬಜಪೆ ನಿವಾಸಿ ಶೇಖ್ ಮಹಮ್ಮದ್ ಹ್ಯಾರಿಸ್ ಯಾನಿ ಜಿಗ್ರಿ (31), ಕುದ್ರೋಳಿ ನಿವಾಸಿ ರಾಹಿಲ್ ಯಾನೆ ಚೋಟು ರಾಹಿಲ್ (18), ತಣ್ಣೀರು ಬಾವಿ ನಿವಾಸಿ ಮಹಮ್ಮದ್ ಕೈಝ್ (24) ಬಂಧಿತರು.

ಅನಿಶ್ ಅಶ್ರಫ್ ಹಾಗೂ ಅಬ್ದುಲ್ ಖಾದರ್ ಧಕ್ಕೆಯಲ್ಲಿ ಫಿಶಿಂಗ್ ಕೆಲಸದಲ್ಲಿದ್ದು, ಮುಹಮ್ಮದ್ ನವಾಝ್ ನಗರದ ಮೆಡಿಕಲ್ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. 2019ರ ಡಿಸೆಂಬರ್ 19ರಂದು ನಗರದಲ್ಲಿ ಕಾನೂನು ಸುವ್ಯವಸ್ಥೆ ಸಂದರ್ಭ ಪೊಲೀಸರಿಂದ ತಮ್ಮವರಿಗೆ ತೊಂದರೆ ಆಗಿದ್ದು, ಅದರ ಸೇಡಿನ ಕ್ರಮಕ್ಕಾಗಿ ಸ್ಥಳೀಯ ಎರಡು ಗ್ಯಾಂಗ್‌ಗಳು ಸೇರಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆಸಿದೆ.

2019ರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ಗೋಲಿಬಾರ್ ಗೆ ಪ್ರತೀಕಾರ ತೀರಿಸಲು ಈ ಆರೋಪಿಗಳು ಸಂಚು ರೂಪಿಸಿದ್ದರು. ಎರಡು ಗ್ಯಾಂಗ್ ಗಳನ್ನು ಕಟ್ಟಿಕೊಂಡಿದ್ದು, ಮಾಯ ಗ್ಯಾಂಗ್‌ ಮತ್ತು ಇನ್ನೊಂದು ಗ್ಯಾಂಗ್ ನಿಂದ ಹಲ್ಲೆಗೆ ಯೋಜನೆ ಹಾಕಿಕೊಳ್ಳಲಾಗಿತ್ತು. ನೈಟ್ರೋವಿಟ್ ಟ್ಯಾಬ್ಲೆಟ್ ಸೇವಿಸಿ 16 ವರ್ಷದ ಯುವಕ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ.

ಈ ಕೃತ್ಯದಲ್ಲಿ ಸ್ಥಳೀಯವಾಗಿ ಮಾಯಾ ಗ್ಯಾಂಗ್ ಎಂದು ಗುರುತಿಸಿಕೊಂಡಿರುವ ತಂಡದ ಜತೆಗೆ ಇನ್ನೊಂದು ತಂಡ ಸೇರಿ ಅತ್ಯಂತ ವ್ಯವಸ್ಥಿತವಾಗಿ ಪಿತೂರಿ ನಡೆಸಿರುವುದು ಕಂಡು ಬಂದಿದ್ದು, ಇನ್ನೊಂದು ತಂಡದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಲಾಗಿದೆ.

ಅವರನ್ನು ಬಂಧಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಸಿಬ್ಬಂದಿ ಮೇಲಿನ ಹಲ್ಲೆಯನ್ನು ಕೊಲೆ ಪ್ರಕರಣವಾಗಿ ದಾಖಲಿಸಲಾಗಿದ್ದು, ಪ್ರಕರಣ ನಡೆದ ದಿನ ಅಪ್ರಾಪ್ತ ಬಾಲಕ 3ರಿಂದ 6ರಷ್ಟು ಈ ಟ್ಯಾಬ್ಲೆಟ್‌ಗಳನ್ನು ಸೇವಿಸಿ ಕೃತ್ಯ ನಡೆಸಿರುವುದು ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದರು. ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್ ಉಪಸ್ಥಿತರಿದ್ದರು.

Comments are closed.