ಬೆಂಗಳೂರು: ಹೊಸ ರೂಪಾಂತರ ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸಲು ಸಜ್ಜಾಗಿರುವ ರಾಜ್ಯ ಸರ್ಕಾರ ಇಂದಿನಿಂದಲೇ ರಾತ್ರಿ ಕರ್ಫ್ಯೂ ಜಾರಿ ಮಾಡಿದ್ದು, ಮಾರ್ಗಸೂಚಿ ಕುರಿತು ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಸಭೆ ನಡೆಸಿದರು.
ಬುಧವಾರ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ವಿಜಯಭಾಸ್ಕರ್, ಸರ್ಕಾರ ಜಾರಿ ಮಾಡಿರುವ ನೈಟ್ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೆ ನಿರ್ಬಂಧ ಜಾರಿ ಕಠಿಣವಾಗಿರಬೇಕು. ತುರ್ತು ಸೇವೆಗಳಿಗೆ ಮಾತ್ರ ಅವಕಾಶ ಕೊಡಬೇಕು. ಯಾವುದೇ ಕಾರಣಕ್ಕೂ ಹೊಸ ವರ್ಷದ ಸಂಭ್ರಮಾಚರಣೆಗೆ ಅವಕಾಶ ಕೊಡಬಾರದು ಎಂದು ಸೂಚಿಸಿದರು.
ವಿದೇಶಗಳಿಂದ ಆಗಮಿಸುವವರಿಗೆ ಕಡ್ಡಾಯವಾಗಿ ಕರೊನಾ ಟೆಸ್ಟ್, ಮಾಡಿಸಬೇಕು. ವಿದೇಶದಿಂದ ಬಂದ ಪ್ರಯಾಣಿಕರು 14 ದಿನ ಜಿಲ್ಲಾಡಳಿತದ ಕಣ್ಗಾವಲಿನಲ್ಲೇ ಇರಬೇಕು. ರೂಪಾಂತರ ಕರೊನಾ ಅಲೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸುವಂತೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಮುಖ್ಯಕಾರ್ಯದರ್ಶಿ ಹೇಳಿದರು.
ಆಯಾ ಜಿಲ್ಲೆಯ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಲಭ್ಯವಿರುವಂತೆ ಕ್ರಮವಹಿಸಿ. ಶಾಲಾ ಕಾಲೇಜುಗಳಲ್ಲಿ ಕರೊನಾ ತಡೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಶಾಲಾ ಆಡಳಿತ ಮಂಡಳಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿ ಎಂದು ತಿಳಿಸಿದರು.