ಅಂತರಾಷ್ಟ್ರೀಯ

ಮೋದಿಯವರ ರಾಖಿ ಸೋದರಿ ನಿಗೂಢ ಹತ್ಯೆ

Pinterest LinkedIn Tumblr


ಟೊರೊಂಟೊ: ಸ್ವತಂತ್ರ ಬಲೂಚಿಸ್ತಾನ ಹೋರಾಟಗಾರ್ತಿ ಕರೀಮಾ ಬಲೂಚ್​ ಕೆನಡಾದ ಟೊರೊಂಟೋದಲ್ಲಿ ನಿಗೂಢವಾಗಿ ಹತ್ಯೆಗೀಡಾಗಿದ್ದು, ಅಸಹಜ ಸಾವಿನ ಪ್ರಕರಣವಾಗಿ ನೋಡದೆ ಹತ್ಯೆ ಎಂದು ಪರಿಗಣಿಸಿ ತನಿಖೆ ನಡೆಸಬೇಕು ಎಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ.

ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸರ್ಕಾರ, ಐಎಸ್​ಐ, ಸೇನೆಗಳು ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಪ್ರಬಲವಾಗಿ ಧ್ವನಿ ಎತ್ತಿದ್ದ ಕರೀಮಾ 2016ರಲ್ಲಿ ಪ್ರಾಣಾಪಾಯ ಎದುರಾದ ಕಾರಣ ಅಲ್ಲಿಂದ ಪರಾರಿಯಾಗಿ ಕೆನಡಾದಲ್ಲಿ ನಿರಾಶ್ರಿತರಾಗಿ ನೆಲೆಯೂರಿದ್ದರು. ಅವರ ಶವ ಟೊರೊಂಟೋದ ಹಾರ್ಬರ್​​ಫ್ರಂಟ್​ನಲ್ಲಿ ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿ ಮೊನ್ನೆ ಪತ್ತೆಯಾgitftu. ಅವರ ಪತಿ ಹಮ್ಮಲ್​ ಹೈದರ್​ ಮತ್ತು ಸಹೋದರ ಶವವನ್ನು ಗುರುತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ರಕ್ಷಾ ಬಂಧನದ ಶುಭಾಶಯ ಕೋರುವ ಮೂಲಕ ಕರೀಮಾ ಭಾರತದ ಗಮನಸೆಳೆದಿದ್ದರು.

ಸ್ವತಂತ್ರ ಬಲೂಚಿಸ್ತಾನದ ಪ್ರಬಲ ಪ್ರತಿಪಾದಕಿಯಾಗಿದ್ದ ಕರೀಮಾ, ಐಎಸ್​ಐ ಮತ್ತು ಪಾಕಿಸ್ತಾನ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದ್ದರು. ಅವರು ಡಿಸೆಂಬರ್ 20ರಂದು ನಾಪತ್ತೆಯಾಗಿದ್ದರು. ಪೊಲೀಸರು ಅವರ ಸಾವನ್ನು ಅಸಹಜ ಸಾವು ಎಂದು ಪರಿಗಣಿಸಿದ್ದು, ನೆಪ ಮಾತ್ರದ ತನಿಖೆ ನಡೆಸುವಂತೆ ತೋರುತ್ತಿದೆ. ಈ ಹತ್ಯೆ ಪಾಕಿಸ್ತಾನದ ಪಿತೂರಿಯಾಗಿದ್ದು, ಕೊಲೆ ಪ್ರಕರಣವೆಂದು ದಾಖಲಿಸಿ ತನಿಖೆ ನಡೆಸಬೇಕು ಎಂದು ಪಾಕಿಸ್ತಾನದ ಭಿನ್ನಮತೀಯ ಗುಂಪುಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.

ಬಲೂಚಿಸ್ತಾನದಲ್ಲಿ ಪಾಕಿಸ್ತಾನ ನಡೆಸುತ್ತಿರುವ ದೌರ್ಜನ್ಯ, ಹಿಂಸಾಚಾರಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನಾವರಣಗೊಳಿಸುತ್ತಿದ್ದ ಕರೀಮಾ ಮತ್ತು ಸಂಗಡಿಗರನ್ನು ಮಟ್ಟಹಾಕಲು ಐಎಸ್​ಐ, ಪಾಕ್​ ಸೇನೆ ಬಹಳಷ್ಟು ಪ್ರಯತ್ನ ಮಾಡಿದ್ದವು. ಕರೀಮಾ ಅವರ ಟ್ವಿಟರ್ ಖಾತೆ ನೋಡಿದರೆ, ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಹಿಂಸಾಚಾರ, ದೌರ್ಜನ್ಯಗಳ ಚಿತ್ರಣ ಸಿಗುತ್ತದೆ.

ಅವರು ಡಿಸೆಂಬರ್ 11ರಂದು ಬಲೂಚ್​ ಹೋರಾಟಗಾರ ಶಬೀರ್​ ಬಲೂಚ್​ ಪರವಾಗಿ ಧ್ವನಿ ಎತ್ತಿದ್ದರು. ಡಿಸೆಂಬರ್ 14ರಂದು ದ ಗಾರ್ಡಿಯನ್ ವರದಿ ‘Kidnap, torture, murder: the plight of Pakistan’s thousands of disappeared’ಯ ಲಿಂಕ್ ಶೇರ್ ಮಾಡಿದ್ದರು. ಇದುವೇ ಅವರ ಕೊನೆಯ ಟ್ವೀಟ್.

Comments are closed.