ಕರ್ನಾಟಕ

ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವುದಕ್ಕೆ ಸಿದ್ಧರಾಮಯ್ಯ ಯಾರು: ಬಿ ವೈ.ವಿಜಯೇಂದ್ರ

Pinterest LinkedIn Tumblr


ಕೊಡಗು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವುದಕ್ಕೆ ಸಿದ್ಧರಾಮಯ್ಯ ಯಾರು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಕಿಡಿಕಾರಿದ್ದಾರೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಬಿಜೆಪಿಯಿಂದ ನಡೆದ ಗ್ರಾಮ ಸ್ವರಾಜ್ ಸಮಾವೇಶದಲ್ಲಿ ಭಾಗವಹಿಸಿದ್ದ ಸಂದರ್ಭ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು. ಮುಖ್ಯಮಂತ್ರಿ ಸ್ಥಾನದಿಂದ ಬಿಎಸ್‍ವೈ ಬದಲಾಗಲಿದ್ದಾರೆ ಎನ್ನುವ ಪ್ರಶ್ನೆಯನ್ನು ಇನ್ನೂ ಮೂರು ವರ್ಷಗಳ ಕಾಲ ನೀವು ಕೇಳುತ್ತಲೇ ಇರುತ್ತೀರಿ. ಆದರೆ, ಬಹುಮತದಿಂದ ಸರ್ಕಾರ ರಚನೆ ಮಾಡಿರುವ ಬಿಜೆಪಿ ಸರ್ಕಾರ ಸುಭದ್ರವಾಗಿದ್ದು, ಮುಂದಿನ ಮೂರು ವರ್ಷಗಳಲ್ಲೂ ಯಡಿಯೂರಪ್ಪನವರೇ ಸಿಎಂ ಆಗಿರುತ್ತಾರೆ ಎಂದರು. ಮುಖ್ಯಮಂತ್ರಿ ಆಗುವುದಕ್ಕೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವೆ ಪೈಪೋಟಿ ಶುರುವಾಗಿದೆ. ಹೀಗಾಗಿ ಅದಕ್ಕಾಗಿಯೇ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಇಂತ ಪ್ರಶ್ನೆ ಕೇಳುತ್ತಿರುತ್ತಾರೆ. ಅಷ್ಟಕ್ಕೂ ಸಿಎಂ ಸ್ಥಾನದಿಂದ ಯಡಿಯೂರಪ್ಪ ಬದಲಾಗುತ್ತಾರೆ ಎನ್ನುವ ವಿಷಯವನ್ನು ಕೇಳುವುದಕ್ಕೆ ಬಿಜೆಪಿಗೆ ಸಿದ್ದರಾಮಯ್ಯ ಯಾರು ಎಂದರು.

ಕಾಂಗ್ರೆಸ್, ಜೆಡಿಎಸ್ ನಲ್ಲಿ ಬೇಸತ್ತು ಶಾಸಕರು ಬಿಜೆಪಿ ಸೇರಿ ಚುನಾವಣೆಯಲ್ಲಿ ಗೆಲುವು ಪಡೆದು ಸಚಿವರಾಗಿದ್ದಾರೆ. ಬಿಜೆಪಿ ಬಹುಮತ ಪಡೆಯದಿದ್ದಾಗ ಹೊರಗಿನಿಂದ ಬಂದ ಶಾಸಕರು ಬಿಜೆಪಿ ಅಧಿಕಾರ ನಡೆಸುವಂತೆ ಮಾಡಿದ್ದಾರೆ. ಹೀಗಾಗಿ ಅವರೆಲ್ಲರಿಗೂ ಸಚಿವ ಸ್ಥಾನ ಕೊಡುವುದಕ್ಕೆ ಕೇಂದ್ರ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹಲವು ಬಾರಿ ಚರ್ಚೆ ಆಗಿದ್ದು, ಯಾರನ್ನು ಸಚಿವ ಸಂಪುಟದಿಂದ ಕೈಬಿಡಬೇಕು, ಯಾರಿಗೆ ಸಚಿವಸ್ಥಾನ ಕೊಡಬೇಕು ಎಂಬುದನ್ನು ಕೇಂದ್ರ ನಾಯಕರು ನಿರ್ಧರಿಸಲಿದ್ದಾರೆ. ಆದರೆ, ಸದ್ಯ ಗ್ರಾಮ ಪಂಚಾಯತ್ ಚುನಾವಣೆ ಮತ್ತು ಅಧಿವೇಶನ ಇರುವುದರಿಂದ ಅವೆರಡು ಮುಗಿದ ನಂತರ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದರು.

ಇನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರ ಕಚೇರಿ ಉದ್ಘಾಟನೆಗೆಂದು ಹೋದ ಶಾಸಕರು, ಸಚಿವರು ಕೇಂದ್ರ ನಾಯಕರನ್ನು ಭೇಟಿಯಾಗಿ ಸಿಎಂ ಸ್ಥಾನ ಬದಲಾವಣೆ ಬಗ್ಗೆ ಚರ್ಚಿಸಿದ್ದಾರೆ ಎನ್ನುವ ವಿಷಯಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಸಿ.ಟಿ. ರವಿ ಅವರು ಕಚೇರಿ ಉದ್ಘಾಟನೆಗೆ ನನ್ನನ್ನೂ ಆಹ್ವಾನಿಸಿದ್ದರು. ಆದರೆ, ಬೇರೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದರಿಂದ ಹೋಗಲು ಸಾಧ್ಯವಾಗಿಲ್ಲ. ಕೇಂದ್ರ ನಾಯಕರನ್ನು ಶಾಸಕರು, ಸಚಿವರು ಭೇಟಿಯಾಗಿರುವುದಕ್ಕೆ ವಿಶೇಷ ಅರ್ಥ ಬೇಡ ಎಂದರು.

ಇದೇ ಸಂದರ್ಭ ಗ್ರಾಮ ಸ್ವರಾಜ್ ಸಮಾವೇಶದಲ್ಲಿ ಭಾಗವಹಿಸಿ ಗ್ರಾಮ ಪಂಚಾಯತ್ ಚುನಾವಣೆಗೆ ಎಲ್ಲರೂ ಸಿದ್ಧತೆ ನಡೆಸುವಂತೆ ಬಿ ವೈ ವಿಜಯೇಂದ್ರ ಕರೆ ನೀಡಿದರು.

Comments are closed.