
ರಾಯ್ಪುರ: ಮನೆಗೆ ಬರೋದು ತಡವಾಗಿದ್ದರಿಂದ ಅಪ್ರಾಪ್ತೆ ತನ್ನ ಮೇಲೆ ಗ್ಯಾಂಗ್ರೇಪ್ ಆಗಿದೆ ಎಂದು ಸುಳ್ಳು ಕಥೆ ಕಟ್ಟಿರುವ ಪ್ರಕರಣ ಛತ್ತೀಸಗಢದ ಕವರ್ಡಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ನವೆಂಬರ್ 22ರಂದು ಅಪ್ರಾಪ್ತೆ ಸ್ನೇಹಿತೆಯರನ್ನು ಭೇಟಿಯಾಗಿ ಬರೋದಾಗಿ ಹೇಳಿ ಮನೆಯಿಂದ ಹೊರ ಹೋಗಿದ್ದಳು. ರಾತ್ರಿ 11 ಗಂಟೆಯಾದ್ರೂ ಮಗಳು ಮನೆಗೆ ಬರದ ಕಾರಣಕ್ಕೆ ಪೋಷಕರು 11.30ಕ್ಕೆ ದೂರು ಸಲ್ಲಿಸಲು ಪೊಲೀಸ್ ಠಾಣೆಗೆ ತೆರಳಿದ್ದರು. ಅಷ್ಟರಲ್ಲಿ ಬಾಲಕಿ ಮನೆಗೆ ಹಿಂದಿರುಗಿದ್ದಾಳೆ. ಪೋಷಕರು ಬೈಯಬಹುದು ಎಂದು ಹೆದರಿದ ಬಾಲಕಿ ಗೆಳೆಯನ ಜೊತೆಯಲ್ಲಿರುವಾಗ ಬಂದ ನಾಲ್ಕು ಜನ ಅಪರಿಚಿತರ ತನ್ನ ಅತ್ಯಾಚಾರ ಎಸಗಿದ್ದರು ಎಂದು ಸುಳ್ಳು ಕಥೆ ಕಟ್ಟಿ ಹೇಳಿದ್ದಳು.
ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಏಳು ತಂಡಗಳನ್ನ ರಚಿಸಿ ತನಿಖೆಗೆ ಇಳಿದಿದ್ದರು. ಬಾಲಕಿಯ ಗೆಳೆಯನನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಇಬ್ಬರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಅನುಮಾನದ ಮೇಲೆ ಪೊಲೀಸರು ಬಾಲಕಿ ಮತ್ತು ಆಕೆಯ ಗೆಳೆಯನ ವಿಚಾರಣೆ ತೀವ್ರಗೊಳಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ.
ಪಿಜಿ ಕಾಲೇಜು ಬಳಿ ಭೇಟಿಯಾದ ಇಬ್ಬರು ಮಾತುಕತೆ ನಡೆಸಿದ್ದಾರೆ. ನಂತರ ಲೈಂಗಿಕ ಸಂಪರ್ಕ ಹೊಂದಿದ್ದಾರೆ. ಮನೆಗೆ ಹೋಗಲು ತಡವಾಗಿದ್ದರಿಂದ ಯುವಕ ಆಕೆಗೆ ಗ್ಯಾಂಗ್ರೇಪ್ ಆಗಿದೆ ಎಂದು ಸುಳ್ಳು ಹೇಳುವಂತೆ ಹೇಳಿದ್ದಾನೆ. ಬಾಲಕಿ ಸಹ ಮನೆಗೆ ಬಂದು ತನ್ನ ಮೇಲೆ ಗ್ಯಾಂಗ್ರೇಪ್ ಆಗಿದೆ ಎಂದು ಹೇಳಿದ್ದಳು. ಘಟನೆ ಸಂಬಂಧ ಪೋಕ್ಸೋ ಅಡಿ ಪ್ರಕರಣ ದಾಖಲಾಗಿದ್ದು, ಅಪ್ರಾಪ್ತೆ ಜೊತೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದರಿಂದ ಯುವಕನನ್ನು ಬಂಧಿಸಲಾಗಿದೆ.
Comments are closed.