ಕರ್ನಾಟಕ

ಮತಾಂತರ ನಿಷೇಧ ಕಾನೂನು ಜಾರಿಗೆ ತಂದೇ ತರುತ್ತೇವೆ; ಸಚಿವ ಸುಧಾಕರ್

Pinterest LinkedIn Tumblr


ಚಿಕ್ಕಮಗಳೂರು: ಮದುವೆ ಸಂಬಂಧ ಮಂತಾತರ ನಿಷೇಧ ಕಾನೂನು ಜಾರಿಗೆ ತರುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದ್ದು, ಈ ಕುರಿತು ಕಾನೂನನ್ನು ಜಾರಿಗೆ ತಂದೇ ತರುತ್ತೇವೆ ಎಂದು ಆರೋಗ್ಯ ಸಚಿವ ಕೆ ಸುಧಾಕರ್​ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮೆಸ್ಕಾಂ ದರ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಎಂದಾಕ್ಷಣ ಅಕ್ಷಯ ಪಾತ್ರೆ ಅಲ್ಲ, ಸರ್ಕಾರಕ್ಕೂ ಆರ್ಥಿಕ ಇತಿಮಿತಿ ಇದೆ. ಹಾಗಾಗಿ ವಿದ್ಯುತ್ ದರ ಹೆಚ್ಚಳಕ್ಕೆ ಜನ ಸಹಕರಿಸಬೇಕು ಎಂದು ಮನವಿ ಮಾಡಿದರು. ಕೋವಿಡ್​ನಿಂದಾಗಿ ಈ ವರ್ಷ ಸರ್ಕಾರಕ್ಕೆ ಬಹಳಷ್ಟು ಕಠಿಣ ಸವಾಲು ಎದುರಾಗಿವೆ. ಕೋವೀಡ್ ಆರ್ಥಿಕ ದುಸ್ಥಿತಿ ಬರದಂತೆ ಬಡಿದಿದೆ. ಇನ್ನು ಒಂದೇ ವರ್ಷದಲ್ಲಿ ಎರಡು ಬಾರಿ ಅತಿವೃಷ್ಠಿಯಾಗಿ ಸಾವಿರಾರು ಕೋಟಿ ರಾಜ್ಯದಲ್ಲಿ ನಷ್ಟವಾಗಿದೆ. ಸರ್ಕಾರ 8 ತಿಂಗಳಿಂದ 6 ಕೋಟಿ ಜನರಿಗೆ ವಿವಿಧ ಬಗೆಯಲ್ಲಿ ಕೋವಿಡ್ ನಿರ್ವಹಣೆ ಮಾಡಿದೆ. ಆರ್ಥಿಕ ಚಟುವಟಿಕೆ ಕಡಿಮೆಯಾಗಿದ್ದು, ಹಣ ಕ್ರೋಢೀಕರಣಕ್ಕೆ ಕಷ್ಟಸಾಧ್ಯವಾಗಿದೆ, ಹಾಗಾಗಿ ಮೆಸ್ಕಾಂ ಬೆಲೆ ಜಾಸ್ತಿಯನ್ನು ಸರ್ಕಾರ ಸಂತೋಷದಿಂದ ಮಾಡಿಲ್ಲ, ಅನಿವಾರ್ಯದಿಂದ ಮಾಡಿದೆ ಎಂದರು.

ಕಾಫಿನಾಡಿಗೆ ಮೆಡಿಕಲ್ ಕಾಲೇಜು ಬಂದಿರುವುದು ಜಿಲ್ಲೆಗೆ ಕಳಶಪ್ರಾಯದಂತ. ಈಗಾಗಲೇ ಮೆಡಿಕಲ್ ಕಾಲೇಜು ಮಂಜೂರಾತಿಯಾಗಿದ್ದು, ಟೆಂಡರ್ ಪ್ರಕ್ರಿಯೆ ಕೂಡ ಮುಗಿದಿದೆ. ಅದರ ವಿನ್ಯಾಸ ಕೂಡ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಎಂದರು.

ಸಚಿವರಾದ ಮೇಲೆ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಸುಧಾಕರ್ ಮೆಡಿಕಲ್ ಕಾಲೇಜು ನಿರ್ಮಾಣದ ಜಾಗವನ್ನು ವೀಕ್ಷಿಸಿದರು. ಶೀಘ್ರದಲ್ಲೇ ಭೂಮಿ ಪೂಜೆ ದಿನಾಂಕ ನಿಗದಿಯಾಗಲಿದ್ದು, ಪೂಜೆ ಕೂಡ ಮುಗಿಯಲಿದೆ. ಭೂಮಿ ಪೂಜೆಗೆ ಮುಖ್ಯಮಂತ್ರಿಗಳು, ನಾನು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಇಡಿ ಜಿಲ್ಲೆಯ ಜನ ಸಾಕ್ಷಿಯಾಗಲಿದ್ದಾರೆ. ಅದೊಂದು ಐತಿಹಾಸಿಕ ದಿನವಾಗಲಿದೆ. ಕಾಲೇಜು ನಿರ್ಮಾಣದ ವಿಚಾರದಲ್ಲಿ ಕೆಲವೊಂದು ಬದಲಾವಣೆಗಳ ಕುರಿತಂತೆ ಕೂಡ ಚರ್ಚಿಸಿದ್ದೇವೆ. 24 ರಿಂದ 30 ತಿಂಗಳು ಅಂದರೆ ಎರಡರಿಂದ ಎರಡೂವರೆ ವರ್ಷದೊಳಗೆ ಸಂಪೂರ್ಣ ಕಾಮಗಾರಿ ಮುಗಿಯಲಿದೆ.

ಇದೇ ತಿಂಗಳ 30ರ ಒಳಗೆ ಎಂ.ಸಿ.ಐ.ನವರಿಗೆ ಸಿಬ್ಬಂದಿ, ಅರೆಸಿಬ್ಬಂದಿಗಳನ್ನ ತೆಗೆದುಕೊಳ್ಳಲು ಪರವಾನಿಗೆ ಕೊಟ್ಟಿದ್ದೇವೆ. ಇನ್ನೊಂದು ತಿಂಗಳಲ್ಲಿ ಸಿಬ್ಬಂದಿ ನೇಮಕಾತಿ ಕೂಡ ಆಗಲಿದೆ. 20-21ನೇ ಸಾಲಿನ ಜೂನ್ ವೇಳೆಗೆ ಮೊದಲ ವರ್ಷದ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳು ಕೂಡ ವ್ಯಾಸಂಗ ಮಾಡಲಿದ್ದಾರೆ. ಸರ್ಕಾರದ ಬೇರೆ ಕಚೇರಿಗಳಲ್ಲಿ ತಾತ್ಕಾಲಿಕವಾಗಿ ಉಪಯೋಗಿಸಿಕೊಂಡು ನಮ್ಮ ಕಟ್ಟಡ ಮುಗಿಯುವವರೆಗೆ ಅಲ್ಲಿ ತರಗತಿಗಳು ಆರಂಭವಾಗಲಿದೆ, ನಮ್ಮ ಕಟ್ಟಡ ಸಂಪೂರ್ಣವಾದ ಬಳಿಕ ಅಲ್ಲಿಗೆ ಸ್ಥಳಾಂತರ ಮಾಡಲಿದ್ದೇವೆ ಎಂದರು.

Comments are closed.