ಕರ್ನಾಟಕ

ತಿನ್ನಲು ಏನೂ ಸಿಗದೆ ಸತ್ತ ಕೋತಿಗೆ ಅಂತ್ಯಕ್ರಿಯೆ ನಡೆಸಿದ ಹಳ್ಳಿಗರು

Pinterest LinkedIn Tumblr


ವಿಜಯಪುರ: ಭೀಮಾ ಪ್ರವಾಹದ ಪರಿಣಾಮ ತಿನ್ನಲು ಏನೂ ಸಿಗದೆ ಮಂಗವೊಂದು ಸಾವಿಗೀಡಾದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ರೂಡಗಿ ಗ್ರಾಮದಲ್ಲಿ ನಡೆದಿದೆ.

ಈ ವಿಷಯ ಗೊತ್ತಾಗುತ್ತಿದ್ದಂತೆ ಕೋತಿ ಕಳೆಬರವನ್ನು ತಂದ ಗ್ರಾಮಸ್ಥರು ಅದಕ್ಕೆ ಸಂಪ್ರದಾಯಬದ್ಧವಾಗಿ ಗೌರವ ಸಲ್ಲಿಸಿದ್ದಾರೆ. ಮೊದಲಿಗೆ ಸಾವಿಗೀಡಾದ ಕೋತಿಗೆ ಹೊಸ ಬಟ್ಟೆ ತೊಡಿಸಿದ್ದಾರೆ. ಗಾಂಧಿಟೋಪಿ ಹಾಕಿದ್ದಾರೆ. ಅಲ್ಲದೇ, ಅದರ ಕಳೆಬರ ಇಡಲಾಗಿದ್ದ ಸ್ಥಳವನ್ನು ಕಬ್ಬಿನಿಂದ ಸಿಂಗರಿಸಿದ್ದಾರೆ.

ಅಷ್ಟೇ ಅಲ್ಲ, ವಾದ್ಯಮೇಳಗಳೂ ಬಂದಿವೆ. ಊದುವವರು ಮತ್ತು ಬಾರಿಸುವವರು ಬಂದು ವಾದ್ಯಮೇಳ ನುಡಿಸಿದ್ದಾರೆ. ಗ್ರಾಮದ ಮಹಿಳೆಯರೂ ಬಂದಿದ್ದಾರೆ. ಆರತಿ ಬೆಳಗಿದ್ದಾರೆ. ಊದಿನ ಕಡ್ಡಿಯನ್ನು ಹಚ್ಚಿ ಎಕ್ಕೆಯ ಎಲೆಯಿಂದ ಮಾಡಿದ ಹಾರವನ್ನು ಹಾಕಿ ಪೂಜೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಕ್ಕಳು ಮತ್ತು ಹಿರಿಯರೆನ್ನದೇ ಎಲ್ಲರೂ ಸೇರಿಕೊಂಡು ಭಜನೆ ಮಾಡಿ ನಾಮಸ್ಮರಣೆ ಮಾಡಿದ್ದಾರೆ. ನಂತರ ಊರಿನ ಗ್ರಾಮಸ್ಥರೆಲ್ಲ ಸೇರಿ ಮೆರವಣಿಗೆ ಮೂಲಕ ತೆರಳಿ ಮಂಗನ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಭೀಮಾ ಪ್ರವಾಹ ಬಸವನಾಡು ವಿಜಯಪುರ ಜಿಲ್ಲೆಯ ಚಡಚಣ, ಇಂಡಿ ಮತ್ತು ಸಿಂದಗಿ ತಾಲೂಕಿನ ಹಲವಾರು ಗ್ರಾಮಗಳು ಜಲಾವೃತವಾಗುವಂತೆ ಮಾಡಿತ್ತು. ಸಾವಿರಾರು ಜನರ ಮನೆ ತೊರೆಯುವಂತೆ ಮಾಡಿತ್ತು. ಅಷ್ಟೇ ಅಲ್ಲ, ಅಪಾರ ಆಸ್ತಿಪಾಸ್ತಿ, ಬೆಳೆಹಾನಿಗೂ ಕಾರಣವಾಗಿತ್ತು. ಇದರಿಂದ ಜನರಷ್ಟೇ ಅಲ್ಲ, ಜಾನುವಾರುಗಳೂ ಕೂಡ ಜೀವ ಉಳಿಸಿಕೊಳ್ಳಲು ಮತ್ತು ಬದುಕು ಕಟ್ಟಿಕೊಳ್ಳಲು ತೀವ್ರ ಸಂಕಷ್ಟ ಎದುರಿಸಿದ್ದರು. ಇದೀಗ ಪ್ರವಾಹ ಇಳಿದಿದೆ. ಆದರೆ, ಈಗ ಪ್ರವಾಹೋತ್ತರ ಸಮಸ್ಯೆಗಳು ಒಂದೊಂದಾಗಿ ಹೊರ ಬರುತ್ತಿವೆ. ಅದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಈ ಘಟನೆ ಗ್ರಾಮಸ್ಥರು ಪ್ರಾಣಿಗಳ ಬಗ್ಗೆ ಹೊಂದಿರುವ ಪ್ರೀತಿ, ಅವುಗಳ ಜೊತೆ ಹೊಂದಿರುವ ಒಡನಾಟಕ್ಕೆ ಸಾಕ್ಷಿಯಾಗಿದೆ. ಈ ವಿಚಾರ ಒಂದೆಡೆಯಾದರೆ, ಈ ಮಂಗ ಅನ್ನಾಹಾರವಿಲ್ಲದೆ, ವಾಸಿಸಲು ಜಾಗವೂ ಕೂಡ ಇಲ್ಲದೇ ಸಾವಿಗೀಡಾಗಿದ್ದು, ಮಾತ್ರ ಪ್ರಕೃತಿಯ ವಿಕೋಪಕ್ಕೆ ಹಿಡಿದ ಕೈಗನ್ನಡಿಯಾಗಿದೆ.

Comments are closed.