
ಬೀದರ್: ಉದ್ಯೋಗಕ್ಕಾಗಿ ಹೈದರಾಬಾದ್ ಕರ್ನಾಟಕ ಭಾಗದ 200 ಯುವಕರನ್ನು ಕುವೈತ್ ದೇಶಕ್ಕೆ ಕರೆದೊಯ್ದಿದ್ದ ಮೆಗಾ ಎಂಜನಿಯರಿಂಗ್ ಎಂಬ ಕಂಪನಿ ಇದೀಗ ಆ ಯುವಕರನ್ನು ನಡುನೀರಿನಲ್ಲಿ ಕೈ ಬಿಟ್ಟಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.
ವರ್ಷದ ಹಿಂದೆ ಹೈದರಾಬಾದ್ ಮೂಲದ ಮೆಗಾ ಎಂಜನಿಯರಿಂಗ್ ಕಂಪನಿ ಕುವೈತ್ಗೆ 200 ಯುವಕರನ್ನು ಕರೆದೊಯ್ದಿತ್ತು. ಕೊರೋನಾ ಹಿನ್ನೆಲೆ ಅವರ ಸ್ಥಿತಿ ಇದೀಗ ಪರದೇಶದಲ್ಲಿ ಅತಂತ್ರವಾಗಿದೆ. ಅಲ್ಲಿರುವ 200 ಜನರಲ್ಲಿ ಅನೇಕರ ವೀಸಾ ಅವಧಿಯೂ ಮುಗಿದಿದ್ದು, ಅವರೆಲ್ಲ ಈಗ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಕರೆದೊಯ್ದಿದ್ದ ಮೆಗಾ ಎಂಜನಿಯರಿಂಗ್ ಕಂಪೆನಿ, ಉದ್ಯೋಗ ಅರಸಿ ದೇಶ ಬಿಟ್ಟು ಹೋದವರಿಗೆ ಸುಳ್ಳು ಹೇಳಿ, ಬೋಗಸ್ ಟಿಕೆಟ್ ಕೊಡುತ್ತಿರುವ ಆರೋಪ ಸಹ ಇದೆ ಎಂದು ಖಂಡ್ರೆ ಹೇಳಿದರು.
ನಮ್ಮ ಕರ್ನಾಟಕದ ಜನ ವಿದೇಶದಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ಕೇಂದ್ರ, ರಾಜ್ಯ ಸರಕಾರಗಳಿಗೆ ಇದ್ದರೂ ಏನು ಮಾಡುತ್ತಿವೆ ಎಂದು ಪ್ರಶ್ನಿಸಿದ ಖಂಡ್ರೆ, ವಿದೇಶದಲ್ಲಿ ಸಿಲುಕಿರುವವರನ್ನು ಕರೆಸಿಕೊಳ್ಳಲು ಕೇರಳಕ್ಕೆ 800 ವಿಶೇಷ ವಿಮಾನ ನೀಡಿದ ಕೇಂದ್ರ ಸರಕಾರ ಕರ್ನಾಟಕಕ್ಕೆ ಮಾತ್ರ ಕೇವಲ ಇಪ್ಪತ್ತು ಚಿಲ್ಲರೆ ವಿಮಾನ ನೀಡಿದೆ. ಈ ತಾರತಮ್ಯ ನೀತಿಯನ್ನು ಸರಕಾರ ಕೈ ಬಿಟ್ಟು ಕರ್ನಾಟಕದ ಸಂಸದರು ಸಹ ಈ ಬಗ್ಗೆ ದನಿ ಎತ್ತಬೇಕೆಂದು ಆಗ್ರಹಿಸಿದರು.
ಯುವಕರನ್ನು ವಿದೇಶಕ್ಕೆ ಕರೆದೊಯ್ದು ನಡುನೀರಿನಲ್ಲಿ ಕೈ ಬಿಟ್ಟುಮೋಸ ಮಾಡಿರುವ ಮೆಗಾ ಎಂಜನಿಯರಿಂಗ್ ಕಂಪನಿ ಮೇಲೆ ಕ್ರಮ ಜರುಗಿಸಬೇಕು. ಕುವೈತ್ನಲ್ಲಿರುವವರನ್ನು ಕೂಡಲೇ ವಿಶೇಷ ವಿಮಾನದ ಮೂಲಕ ಕರೆಸಿಕೊಳ್ಳಲು ಸರಕಾರ ಮುಂದಾಗಬೇಕು ಎಂದು ಭಾಲ್ಕಿ ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಈಶ್ವರ ಖಂಡ್ರೆ ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಆಗ್ರಹಿಸಿದರು.
ಇದೇ ವೇಳೆ ರಾಜ್ಯ ಸರಕಾರದ ವಿರುದ್ಧವೂ ಹರಿಹಾಯ್ದ ಖಂಡ್ರೆ, ಬಿಜೆಪಿಯಲ್ಲಿ ಸಾಕಷ್ಟು ಭಿನ್ನಮತ, ಆಂತರಿಕ ಕಲಹಗಳಿವೆ. ಸರ್ಕಾರವನ್ನು ಯಾರೂ ಅಸ್ಥಿರಗೊಳಿಸುವುದು ಬೇಕಾಗಿಲ್ಲ. ಸರ್ಕಾರದಲ್ಲಿರುವವರೇ ಅಸ್ಥಿರಗೊಳಿಸುತ್ತಾರೆ ಎಂದರು.
ಕೋವಿಡ್ ಉಪಕರಣಗಳ ಖರೀದಿಯಲ್ಲಿ ಅಕ್ರಮ ನಡೆದಿರುವುದು ದಾಖಲೆಗಳಿಂದ ಜಾಹೀರಾಗಿದೆ. ದೇಶದಲ್ಲಿ ಕೋವಿಡ್ ಸಂಕಷ್ಟ ಇರುವಾಗ, ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಬಿಜೆಪಿ ಕಗ್ಗೊಲೆ ಮಾಡುತ್ತಿದೆ. ದೇಶದ ಹಲವು ಕಡೆ ಚುನಾಯಿತ ಸರಕಾರಗಳನ್ನು ಭಾರತೀಯ ಜನತಾ ಪಕ್ಷ ಉರುಳಿಸುತ್ತಿದೆ. ಹೀಗಾದರೆ ಚುನಾವಣೆ ಯಾಕೆ ಬೇಕು? ಚುನಾವಣಾ ಆಯೋಗ ಯಾಕೆ ಬೇಕು ಎಂದು ಖಂಡ್ರೆ ಹರಿಹಾಯ್ದರು.
Comments are closed.