ಕರ್ನಾಟಕ

ಕೊರೋನಾ ಭ್ರಷ್ಟಚಾರ: ಸಿದ್ದರಾಮಯ್ಯಗೆ ಪೂರ್ಣ ಲೆಕ್ಕ ಕೊಟ್ಟ ಶ್ರೀರಾಮುಲು

Pinterest LinkedIn Tumblr


ಬೆಂಗಳೂರು(ಜು.20): ಕೋವಿಡ್‌ -19 ಉಪಕರಣಗಳ ಖರೀದಿಯಲ್ಲಿ 2,200 ಕೋಟಿ ರೂ. ಅವ್ಯವಹಾರ ನಡೆದಿದೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಆರೋಗ್ಯ ಸಚಿವ ಬಿ ಶ್ರೀರಾಮುಲು ಉತ್ತರ ನೀಡಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ವೆಂಟಿಲೇಟರ್​​ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ. ನನ್ನ ಅವಧಿಯಲ್ಲಿ ಒಂದು ವೇಳೆ ಅವ್ಯವಹಾರ ನಡೆದಿದ್ದರೇ ಕೂಡಲೇ ರಾಜೀನಾಮೆ ನೀಡುತ್ತೇನೆ ಎಂದರು.

ವೆಂಟಿಲೇಟರ್​​​​ ತಾಂತ್ರಿಕತೆಯ ಆಧಾರದ ಮೇಲೆ ಖರೀದಿ ಮಾಡಬೇಕಾಗುತ್ತದೆ. ಸುಮಾರು 4 ಲಕ್ಷ ರೂ.ನಿಂದ 50-60 ಲಕ್ಷ ರೂ. ಮೌಲ್ಯದ ವೆಂಟಿಲೇಟರ್​​ ಖರೀದಿ ಮಾಡಲಾಗಿದೆ. ಬರೀ ನಾಲ್ಕು ಲಕ್ಷದ ಬೆಲೆ ಆಧಾರದ ಮೇಲೆ ಮಾತ್ರ ವೆಂಟಿಲೇಟರ್​ ಖರೀದಿ ಮಾಡಿಲ್ಲ. ಹಾಗೆಯೇ ಕೇವಲ ಐಸಿಯುನಲ್ಲಿ ಬಳಕೆಯಾಗುವ ವೆಂಟಿಲೇಟರ್‌ಗೆ 18 ಲಕ್ಷ ವೆಚ್ಚ ತಗುಲಿದೆ ಎಂದರು.

ಇನ್ನು, ವೆಂಟಿಲೇಟರ್ ಒಂದರಲ್ಲೇ 120 ಕೋಟಿ ರೂಪಾಯಿ ಅವ್ಯವಹಾರ ಆಗಿದೆ ಎಂದು ಸಿದ್ಧರಾಮಯ್ಯ ಹೇಳುತ್ತಾರೆ. ಈವರೆಗೂ 10.61 ಕೋಟಿ ರೂ. ಮೌಲ್ಯದ ವೆಂಟಿಲೇಟರ್ ಖರೀದಿಯಾಗಿದೆ. ಪಿಪಿಇ ಕಿಟ್​ಗಳಿಗೆ 48.65 ಕೋಟಿ ಆಗಬೇಕಿತ್ತು. ಆದರೆ, ಪಿಪಿಇ ಕಿಟ್‌ನಲ್ಲೂ ಕೆಲವೊಂದು ಕಾಂಪೋನೆಂಟ್ ಇರುತ್ತದೆ ಎಂದು ಹೇಳಿದರು.

ಹೀಗೆ ಮುಂದುವರಿದ ಶ್ರೀರಾಮುಲು, ಇಡೀ ದೇಶದಲ್ಲಿ ಕೊರೋನಾಗೆ ಮೊದಲ ಸಾವು ಆಗಿದ್ದು ಕಲ್ಬುರ್ಗಿಯಲ್ಲಿ. ನಾನು ಎರಡು ದಿನ ಅಲ್ಲೇ ಇದ್ದು ವೈದ್ಯರಿಗೆ ಧೈರ್ಯ ತುಂಬಿದೆ. ಕೇವಲ 4 ಕಾಂಪೋನೆಂಟ್ ಇರುವ ಕಿಟ್ ಕೊಟ್ಟರೇ ಆಗಲ್ಲ ಎಂದು ವೈದ್ಯರೇ ಹೇಳಿದ್ದರು. ಬಳಿಕ 6 ಕಾಂಪೋನೆಂಟ್ ಇರುವ ಕಿಟ್ ಬೇಕು ಎಂದರು. ಅದನ್ನು ತಯಾರು ಮಾಡಲು ಮುಂದಾಗಿದ್ದೆವು. 1 ಲಕ್ಷ ಕಿಟ್ ತಯಾರು ಮಾಡಲು ಆರ್ಡರ್ ಪ್ಲೇಸ್ ಮಾಡಿದ್ದೆವು. ಈವರೆಗೂ ಅದು 40 ಸಾವಿರ ಕಿಟ್ ಮಾತ್ರ ಕೊಟ್ಟಿದ್ದಾರೆ ಎಂದು ವಿವರಿಸಿದರು.

ನಾವು ಬಹಳ ಕಷ್ಟಪಟ್ಟು ಎಲ್ಲವನ್ನೂ ನಿಭಾಯಿಸುತ್ತಿದ್ದೇವೆ. 6 ಕಾಂಪೋನೆಂಟ್‌ನಿಂದ 10 ಕಾಂಪೋನೆಂಟ್ ಇರುವ ಕಿಟ್ ಬೇಕು ಅಂದರು. ಚೀನಾ, ಸಿಂಗಾಪುರ್‌ನಿಂದ ಕಿಟ್ ಖರೀದಿ ಮಾಡಿದ್ದೇವೆ. 3 ಕಂಪನಿಯಿಂದ 10 ಲಕ್ಷ ಕಿಟ್ ಖರೀದಿ ಮಾಡಿದ್ದೇವೆ. ಮೊದಲು ಇದರ ಬೆಲೆ ಇದ್ದಿದ್ದು ಬೇರೆ, ಈಗಿನ ದರ ಬೇರೆ. ಈವರೆಗೂ 9 ಲಕ್ಷದ 65 ಸಾವಿರ ಖರೀದಿ ಮಾಡಿದ್ದೇವೆ ಎಂದು ತಿಳಿಸಿದರು.

ಪಿಪಿಇ ಕಿಟ್‌ಗೆ 79,35,16,816 ರೂ. ಖರ್ಚು ಆಗಿದೆ. ಇದರಲ್ಲಿ 150 ಕೋಟಿ ರೂ. ಅವ್ಯವಹಾರ ಆಗಿದೆ ಎನ್ನುತ್ತಾರೆ ಸಿದ್ಧರಾಮಯ್ಯ. ಎಲ್ಲಿ ಆಗಿದೆ ಅಷ್ಟು ಅವ್ಯವಹಾರ? ಎಂದು ಪ್ರಶ್ನಿಸಿದರು.

ಹಾಗೆಯೇ N-95 ಮಾಸ್ಕ್ ಖರೀದಿ 156 ರೂಪಾಯಿಗೆ ಖರೀದಿ ಮಾಡಿದ್ದೇವೆ. ಬೇರೆ ಕಡೆಗಳಿಂದ ಒಟ್ಟು N-95 ಮಾಸ್ಕ್ ಖರೀದಿಗೆ 11,51,58,226 ರೂ. ಖರ್ಚಾಗಿದೆ. ಸರ್ಜಿಕಲ್ ಗ್ಲೌಸ್‌ನಲ್ಲೂ ಅವ್ಯವಹಾರ ಅಂತಾರೆ. ಸರ್ಜಿಕಲ್ ಗ್ಲಾಸ್‌ಗೆ ಕೇರಳದ ಕಂಪನಿಯಿಂದ 8 ರೂ. 10 ಪೈಸೆಗೆ ಕೊಡುತ್ತೇವೆ ಅಂದಿದ್ದರು. ಅದರೆ ಅವರು ನಮಗೆ ಕೊಡಲಿಲ್ಲ ಎಂದರು.ಬೆಂಗಳೂರಿನ ಕಂಪನಿಯೊಂದಕ್ಕೆ ಆರ್ಡರ್ ಕೊಟ್ಟಿದ್ದೇವೆ. ಒಂದು ಗ್ಲೌಸ್​​ 9 ರೂ. 50 ಪೈಸೆಗೆ ಕೊಡುತ್ತೇನೆ ಅಂದರು. ನಾವು ಅವರಿಗೆ 3 ಲಕ್ಷ ಗ್ಲೌಸ್ ಆರ್ಡರ್ ಕೊಟ್ಟಿದ್ದೇವೆ. 50 ಸಾವಿರ ಗ್ಲೌಸ್ ಮಾತ್ರ ಕೊಟ್ಟಿದ್ದಾರೆ. ಸರ್ಜಿಕಲ್ ಗ್ಲೌಸ್ ಈವರೆಗೂ 30 ಸಾವಿರ ತೆಗೆದುಕೊಂಡಿದ್ದೇವೆ. 28 ಲಕ್ಷದ 50 ಸಾವಿರ ಮಾತ್ರ ಸರ್ಜಿಕಲ್ ಗ್ಲೌಸ್ ಖರೀದಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ಆಕಾಶ ಭೂಮಿಗೆ ಅಂತರ ಎಷ್ಟಿದೆ? ಸಿದ್ದರಾಮಯ್ಯ ಅಂತಹುದ್ದೇ ದೊಡ್ಡ ಅಂತರದ ಸುಳ್ಳು ಹೇಳುತ್ತಿದ್ದಾರೆ. ನನ್ನ ಅವಧಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಆಗಿದ್ದು ಸಾಬೀತಾದ್ರೆ, ಒಂದು ಕ್ಷಣವು ಈ ಹುದ್ದೆಯಲ್ಲಿ ಕೂರುವುದಿಲ್ಲ. ತಕ್ಷಣವೇ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಬಿ ಶ್ರೀರಾಮುಲು ಸವಾಲ್​​ ಹಾಕಿದರು.

ಸ್ಯಾನಿಟೈಜೇಷರ್‌ನಲ್ಲಿ ಕೇಂದ್ರ ಸರ್ಕಾರದ ಆದೇಶದಂತೆ ಖರೀದಿಯಾಗಿದೆ. 500 ml ಬಾಟೆಲ್ 25 ಸಾವಿರ ಲೀಟರ್‌ಗೆ ಆರ್ಡರ್ ಮಾಡಿದ್ದೇವೆ. ಒಟ್ಟು 62 ಲಕ್ಷದ 50 ಸಾವಿರ ಸ್ಯಾನಿಟೈಜೇಷರ್ ಖರೀದಿ ಮಾಡಿದ್ದೇವೆ. ಸ್ಯಾನಿಟೈಜೇಷರ್‌ಗೆ ಈವರೆಗೂ ಬೇರೆ ಬೇರೆ ಕಂಪನಿಗಳೊಂದಿಗೆ 2,65,80,000 ರೂ. ಖರೀದಿಯಾಗಿದೆ‌. ಈ ಪರಿಸ್ಥಿತಿಯನ್ನು ಯಾರು ನಿರೀಕ್ಷೆ ಮಾಡಿರಲಿಲ್ಲ. ಕೋವಿಡ್-19 ಇಂದಿಗೂ ನಮಗೆ ಸವಾಲಾಗಿದೆ. ನಾನು ಜನರಿಗೆ ಮನವಿ ಮಾಡುತ್ತೇನೆ. ಎಲ್ಲರೂ ಮನೆಯಲ್ಲೇ ಇರಿ ಎಂದರು.

Comments are closed.