ಕರ್ನಾಟಕ

ಮನೆಯಲ್ಲೇ ಸೆಲ್ಫ್ ಮೆಡಿಕೇಷನ್​ಗೆ ಮುಂದಾಗಿರುವ ಕೊರೋನಾ ಸೋಂಕಿತರು

Pinterest LinkedIn Tumblr


ಬೆಂಗಳೂರು: ಬಿಬಿಎಂಪಿ ನಂಬಿಕೊಂಡರೆ ಯಾವುದೇ ಪ್ರಯೋಜನವಿಲ್ಲ ಎಂಬ ಮನೋಭಾವಕ್ಕೆ ಬಂದಿರುವ ಅದೆಷ್ಟೋ ಕೊರೋನಾ ಸೋಂಕಿತರು ತಮಗೆ ಸೋಂಕಿರುವುದು ಸ್ಪಷ್ಟವಾದರೂ ಬಿಬಿಎಂಪಿ ಗಮನಕ್ಕೆ ತರುವ ಮನಸ್ಸು ಮಾಡ್ತಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಬದಲಿಗೆ ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳುವ ಹಂತ ತಲುಪಿದ್ದಾರೆ.

ಹೌದು, ನ್ಯೂಸ್ 18 ಕನ್ನಡಕ್ಕೆ ಸಿಕ್ಕ ಕೆಲವು ಮಾಹಿತಿ ಆಧರಿಸಿ ಹೋದ ಸಂದರ್ಭದಲ್ಲಿ ಇಂತಹ ಸ್ಫೋಟಕ ಸತ್ಯ ಬಯಲಾಗಿದೆ. ಅದೆಷ್ಟೋ ಕೊರೋನಾ ಸೋಂಕಿತರು ಬಿಬಿಎಂಪಿಯ ನಿರ್ಲಕ್ಷ್ಯ ಹಾಗೂ ತಾತ್ಸಾರಕ್ಕೆ ಬೇಸತ್ತು ತಮ್ಮ ಮನೆಗಳಲ್ಲಿಯೇ ಸ್ವಯಂ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸತ್ಯ ಬಯಲಾಗಿದೆ. ಕೊರೋನಾಗೆ ಸಂಬಂಧಿಸಿದ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದರೂ ಮೊದಲು ಬಿಬಿಎಂಪಿ ಗಮನಕ್ಕೆ ತರಬೇಕೆನ್ನುವ ನಿಯಮವಿದೆ. ಆರಂಭದಲ್ಲೇನೋ ಈ ಎಲ್ಲ ನಿಯಮಗಳನ್ನು ಸರಿಯಾಗಿ ಪಾಲಿಸಿಕೊಂಡು ಹೋಗಲಾಗುತ್ತಿತ್ತು. ಕೊರೋನಾಗೆ ಸಂಬಂಧಿಸಿದ ಯಾವುದೇ ಕರೆ ಬಂದರೂ ಬಿಬಿಎಂಪಿಯವರು ಕೂಡ ಸ್ಪಂದಿಸುತ್ತಾ ಇದ್ದರು. ಆದರೆ ಇತ್ತೀಚೆಗೆ ಸೋಂಕಿನ ಪ್ರಮಾಣ ಹಾಗೂ ಸಾವಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಬಿಬಿಎಂಪಿ ಒತ್ತಡದಿಂದಲೋ ಅಥವಾ ಪ್ರಜ್ಞಾಪೂರ್ವಕವಾಗಿಯೋ ತನ್ನ ಜವಾಬ್ದಾರಿ ಮರೆತಂತೆ ಕಾರ್ಯನಿರ್ವಹಿಸಿರುವುದು ಸೋಂಕಿತರು ಹಾಗೂ ಸಂಬಂಧಿಕರಲ್ಲಿ ಬಿಬಿಎಂಪಿ ಮೇಲಿನ ನಂಬಿಕೆಯನ್ನೇ ಕಳಕೊಳ್ಳುವಂತೆ ಮಾಡಿದೆ.

ನಮ್ಮ ಏರಿಯಾದಲ್ಲಿ ಕೊರೋನಾ ಸೋಂಕಿತರಿದ್ದಾರೆ. ಬಂದು ದಯವಿಟ್ಟು ಕರೆದುಕೊಂಡು ಹೋಗಿ ಎಂದು ಜನ ಪರಿಪರಿಯಾಗಿ ಬಿಬಿಎಂಪಿಯನ್ನು ಕೇಳಿಕೊಂಡರು ಕೇವಲ ನೆಪ ಒಡ್ಡಿ ಕಾಲಹರಣ ಮಾಡುವುದರಲ್ಲಿ ಬಿಬಿಎಂಪಿ ಸಿಬ್ಬಂದಿ ನಿರತರಾಗಿದ್ದಾರೆಯೇ ಹೊರತು ಮನೆ ಬಾಗಿಲಿಗೆ ಬಂದು ಸೋಂಕಿತರಿಗೆ ಆಗಬೇಕಾದ ತುರ್ತು ಕೆಲಸವನ್ನು ಮಾಡುತ್ತಲೇ ಇಲ್ಲ. ಮೊದಲೆಲ್ಲಾ ಕರೆ ಮಾಡಿದರೆ ಗಂಟೆಗಟ್ಟಲೇ ಸತಾಯಿಸುತ್ತಿದ್ದವರೂ ಈಗ ದಿನಗಟ್ಟಲೇ ಕಾಯಿಸುವ ಮಟ್ಟಕ್ಕೆ ಬಂದಿದ್ದಾರೆ. ಕೊರೋನಾ ಸೋಂಕಿತರ ಬಗ್ಗೆ ಮಾಹಿತಿ ಕೊಟ್ಟರೂ ಸ್ಥಳಕ್ಕೆ ಬಂದು ಸೋಂಕಿತರನ್ನು ಕರೆದುಕೊಂಡು ಹೋಗುವ ಮಾತು ಒತ್ತಟ್ಟಿಗಿರಲಿ, ಅವರು ಬದುಕಿದ್ದಾರೋ, ಸತ್ತಿದ್ದಾರೋ ಎಂದು ವಿಚಾರಿಸುವ ಗೋಜಿಗೂ ಹೋಗುತ್ತಿಲ್ಲ. ಒಬ್ಬರ ಮೇಲೆ ಇನ್ನೊಬ್ಬರು ಜವಾಬ್ದಾರಿಯನ್ನು ವರ್ಗಾಯಿಸುತ್ತಲೇ ಟೈಮ್ ಪಾಸ್ ಮಾಡುತ್ತಿದ್ದಾರೆ.

ಕೊರೋನಾ ಸೋಂಕಿತರ ವಿಷಯದಲ್ಲಿ ಸ್ವಲ್ಪವೂ ಕಾಳಜಿಯನ್ನೂ ತೋರದ ಬಿಬಿಎಂಪಿ ವರ್ತನೆಗೆ ಬೇಸತ್ತ ಸೋಂಕಿತರು ಬಿಬಿಎಂಪಿಗೆ ದುಂಬಾಲು ಬೀಳುವುದಕ್ಕಿಂತ ತಮ್ಮ ಜೀವವನ್ನು ತಾವೇ ಉಳಿಸಿಕೊಳ್ಳಲು ಬೇಕಾದ ಚಿಕಿತ್ಸಾ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದು ಅದೇ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆಸಿದ್ದಾರೆ. ಸೋಂಕಿತರು ಹಾಗೆಯೇ ಅವರ ಸಂಬಂಧಿಗಳು ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ಹತ್ತಿರವಾಗಿವೆ. ಅಲ್ಲದೇ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆಯ ಮೇಲೆ ಇದಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ದೂರುಗಳಿವೆ. ಸರ್ಕಾರದ ಮಟ್ಟದಲ್ಲೂ ಕೂಡ ಇದರ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಆದರೆ ನಿಯಮಗಳ ವಿಷಯಕ್ಕೆ ಬಂದ ಸಂದರ್ಭದಲ್ಲಿ ಮನೆಯಲ್ಲೇ ಸೋಂಕಿತರು ಇರುವಂತಹದ್ದು ಸೂಕ್ತವಲ್ಲ ಎನ್ನೋದು ಕೂಡ ಸತ್ಯ.

ನಿಯಮಾವಳಿಗಳ ಪ್ರಕಾರ ಸೋಂಕಿತರನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅಪಾಯಕಾರಿ. ತಕ್ಷಣಕ್ಕೆ ಬಿಬಿಎಂಪಿ ಸೂಚಿತ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರನ್ನು ಚಿಕಿತ್ಸೆಗೊಳಪಡಿಸುವುದು ನಿಯಮ. ಈ ನಿಯಮಕ್ಕೆ ವ್ಯತಿರಿಕ್ತವಾಗಿ ರೋಗಿ ನಡೆದುಕೊಂಡರೆ ಅಥವಾ ಆಸ್ಪತ್ರೆ ನಡೆದುಕೊಂಡರೆ ಅವರ ವಿರುದ್ಧವೂ ಕೂಡ ಕ್ರಮ ಕೈಗೊಳ್ಳುವ ಅವಕಾಶಗಳಿವೆ. ಆದರೆ ಕೆಲಸ ಮಾಡುವ ಮನಸ್ಥಿತಿಯಲ್ಲೇ ಬಿಬಿಎಂಪಿ ಇಲ್ಲದಿರುವಾಗ ಯಾವ ಗ್ಯಾರಂಟಿ ಮೇಲೆ ಬಿಬಿಎಂಪಿಯನ್ನು ನಂಬೊಕ್ಕಾಗುತ್ತೆ ಎಂದು ಪ್ರಶ್ನಿಸಿರುವ ಅನೇಕ ಸೋಂಕಿತರ ಕುಟುಂಬದವರು, ತಮ್ಮ ಪ್ರಾಣವನ್ನು ತಾವೇ ಸೆಲ್ಫ್ ಮೆಡಿಕೇಶನ್ ಮೂಲಕ ಉಳಿಸಿಕೊಳ್ಳುವುದು ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಬಿಬಿಎಂಪಿಗೆ ತಿಳಿಸಿ ಪ್ರಯೋಜನವಿಲ್ಲ. ಅವರಿಗೆ ಮಾಹಿತಿ ಕೊಟ್ಟರೂ ಅವರಿಂದ ಸಿಗುವ ಉತ್ತರ ಏನೂ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಅನುಭವ ಆಗಿರುವ ಕಾರಣಕ್ಕೆ ಸಾಕಷ್ಟು ಸೋಂಕಿತರು ಪಾಸಿಟಿವ್ ಇದ್ದರೂ ಅದನ್ನು ಬಿಬಿಎಂಪಿ ಗಮನಕ್ಕೆ ತಾರದೆ ಮನೆಯಲ್ಲೇ ಮೆಡಿಕೇಶನ್ ಮಾಡಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದ ಸಂಗತಿಯೇನಲ್ಲ. ಆದರೆ ಹಾಗೇ ಉಳಿಯುವುದರಿಂದ ಅಕ್ಕಪಕ್ಕದವರಿಗೆ ಸಮಸ್ಯೆಯಾಗುತ್ತದೆ ಎನ್ನುವುದು ಕೂಡ ಸತ್ಯ. ಕೊರೋನಾ ಸೋಂಕಿತರನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಆ ಸೋಂಕು ಇತರರಿಗೂ ಹರಡುವ ಸಾಧ್ಯತೆಗಳು ಹೆಚ್ಚಾಗಿದೆ. ಹಾಗಾಗಿ ಅಪಾಯ ತೆಗೆದುಕೊಳ್ಳುವುದಕ್ಕಿಂತ ಬಿಬಿಎಂಪಿಯನ್ನೇ ನಿಯಮಗಳ ಚೌಕಟ್ಟಿನಲ್ಲಿ ತರಾಟೆಗೆ ತೆಗೆದುಕೊಂಡು ಆಸ್ಪತ್ರೆಗಳಿಗೆ ಸೋಂಕಿತರನ್ನು ದಾಖಲಿಸಿ ಚಿಕಿತ್ಸೆ ಕೊಡಿಸುವುದು ಸೂಕ್ತ. ಬಿಬಿಎಂಪಿ ಮೇಯರ್ ಹಾಗೂ ಕಮಿಷನರ್ ಈ ನಿಟ್ಟಿನಲ್ಲಿ ಬಿಬಿಎಂಪಿ ವ್ಯವಸ್ಥೆಯನ್ನು ಸರಿಪಡಿಸಬೇಕಿದೆ.

Comments are closed.