ಕರ್ನಾಟಕ

ಬೆಂಗಳೂರಿನ ಒಂದೇ ಪೊಲೀಸ್ ಠಾಣೆಯ 12 ಸಿಬ್ಬಂದಿಗೆ ಕೊರೋನಾ!

Pinterest LinkedIn Tumblr


ಬೆಂಗಳೂರು (ಜು. 7): ಬೆಂಗಳೂರಿನಲ್ಲಿ ಪ್ರತಿದಿನ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಬೆಂಗಳೂರಿನಲ್ಲಿ ಈಗಾಗಲೇ 6 ಪೊಲೀಸರು ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಅನೇಕ ಪೊಲೀಸ್ ಠಾಣೆಗಳನ್ನು ಸೀಲ್​ಡೌನ್ ಮಾಡಲಾಗಿದೆ. ಇಂದು ಬೆಂಗಳೂರಿನ ಒಂದೇ ಠಾಣೆಯ 12 ಪೊಲೀಸರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

ಕರ್ನಾಟಕದಲ್ಲಿ 370ಕ್ಕೂ ಹೆಚ್ಚು ಪೊಲೀಸರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದರಿಂದ ರಾಜ್ಯದ ಎಲ್ಲ ಪೊಲೀಸರಿಗೂ ಕೊರೋನಾ ಪರೀಕ್ಷೆ ಮಾಡಿಸಲು ಪೊಲೀಸ್ ಇಲಾಖೆ ನಿರ್ಧರಿಸಿತ್ತು. ನಿನ್ನೆಯವರೆಗೆ ಸುಮಾರು 10 ಸಾವಿರ ಪೊಲೀಸರ ಕೊರೋನಾ ತಪಾಸಣೆ ನಡೆದಿದೆ. ಈ ತಪಾಸಣೆಯ ವರದಿಯಲ್ಲಿ ಬೆಂಗಳೂರಿನ ಎಚ್​ಎಎಲ್​ ಪೊಲೀಸ್ ಠಾಣೆಯ 12 ಪೊಲೀಸರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಎಚ್​ಎಎಲ್​ ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್, ಸಬ್ ಇನ್​ಸ್ಪೆಕ್ಟರ್ ಹಾಗೂ 10 ಜನ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ಸದ್ಯ ಇಡೀ ಠಾಣೆಯನ್ನು ಬಿಬಿಎಂಪಿ ಸಿಬ್ಬಂದಿ ಸೀಲ್​ಡೌನ್ ಮಾಡಿದ್ದಾರೆ. ದರೋಡೆ ಕೇಸ್​ನಲ್ಲಿ ಆರೋಪಿಯೊಬ್ಬನನ್ನು ಬಂಧಿಸಿದ್ದ ಪೊಲೀಸರಿಗೆ ಆರೋಪಿಯ ವಿಚಾರಣೆ ಬಳಿಕ ಆತನಿಗೆ ಕೊರೋನಾ ಪಾಸಿಟಿವ್ ಇರುವುದು ಗೊತ್ತಾಗಿತ್ತು. ಕೂಡಲೇ ಆರೋಪಿಯ ಸಂಪರ್ಕದಲ್ಲಿದ್ದ ಪೊಲೀಸರು ಪರೀಕ್ಷೆಗೆ ಒಳಪಟ್ಟಿದ್ದರು. ಸದ್ಯ 12 ಜನ ಪೊಲೀಸರಿಗೆ ಪಾಸಿಟಿವ್ ಆಗಿದ್ದು, ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದಾಗಿ ಎಚ್​ಎಎಲ್​ ಪೊಲೀಸ್ ಠಾಣೆಯ ಸಿಬ್ಬಂದಿಗೆ ಆತಂಕ ಹೆಚ್ಚಾಗಿದೆ.

Comments are closed.