ಕರ್ನಾಟಕ

ರಾಜ್ಯದ ಕೊರೋನಾ ಸ್ಥಿತಿಗತಿಯ ಅಧ್ಯಯನ ಆರಂಭಿಸಿದ ಕೇಂದ್ರ ತಂಡ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಸ್ಥಿತಿಗತಿ, ಸರ್ಕಾರ ಕೈಗೊಂಡಿರುವ ನಿಯಂತ್ರಣ ಕ್ರಮಗಳ ಕುರಿತು ಕೇಂದ್ರ ಅಧ್ಯಯನ ತಂಡ ಎರಡು ದಿನಗಳ ಸಮಾಲೋಚನೆ, ಅಧ್ಯಯನ ಆರಂಭಿಸಿದೆ.

ಕೊರೋನಾ ಸೋಂಕು ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜತೆ ಕೇಂದ್ರ ತಂಡ ಮಹತ್ವದ ಚರ್ಚೆ ನಡೆಸಿತು.

ಕೇಂದ್ರದ ಇಎಂಆರ್ ನ ನಿರ್ದೇಶಕ ಪಿ.ರವೀದ್ರನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮುಖ್ಯ ಕಾರ್ಯದರ್ಶಿ ಅರ್ತಿ ಅಹುಜಾ ನೇತೃತ್ವದ ತಂಡ ರಾಜ್ಯದಲ್ಲಿನ ಕೊರೊನಾ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯಿತು. ರಾಜ್ಯದಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡುವ ಅಗತ್ಯವಿದೆಯೇ? ಎನ್ನುವ ಕುರಿತಂತೆಯೂ ಪರಿಶೀಲನೆ ನಡೆಸಿದ್ದು, ರಾಜ್ಯಕ್ಕೆ ತಜ್ಞರು ನೀಡಿರುವ ಶಿಫಾರಸುಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡಿತು.

ಕೊರೋನಾ ನಿಯಂತ್ರಣ, ನಿರ್ವಹಣೆಗೆ ರಾಜ್ಯ ಕೈಗೊಂಡ ಕ್ರಮಗಳು, ಕೇಂದ್ರದ ಮಾರ್ಗಸೂಚಿಗಳ ಜಾರಿ, ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳ, ಒಟ್ಟು ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿರುವ ಕುರಿತು ವಿವರ ಪಡೆದುಕೊಂಡಿದೆ.

ಕಂಟೈನ್ಮೆಂಟ್ ವಲಯಗಳಲ್ಲಿ ಕೈಗೊಂಡ ಕ್ರಮಗಳು, ಆಸ್ಪತ್ರೆಗಳಲ್ಲಿ ಒದಗಿಸಿರುವ ಆರೋಗ್ಯ ಸೌಕರ್ಯ, ಒಟ್ಟು ಲಭ್ಯ ವಿರುವ ಹಾಸಿಗೆ, ವೆಂಟಿಲೇಟರ್, ಸಮುದಾಯಕ್ಕೆ ಸೋಂಕು ಹಬ್ಬಿರುವ ಬಗ್ಗೆ ವಿವರ, ಬೆಂಗಳೂರಿನಲ್ಲಿ ಯಾವೆಲ್ಲ ಕ್ರಮ ಕೈಗೊಳ್ಳಲಾಗಿದೆ. ಕೊರೊನಾ ಆರಂಭವಾದಾಗಿನಿಂದ ಇಲ್ಲಿವರೆಗೂ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಿಸಿತು.

ಕೇಂದ್ರದ ತಂಡ ಟ್ರೇಸ್, ಟ್ರ್ಯಾಕ್, ಟೆಸ್ಟಿಂಗ್, ಟ್ರೀಟ್ಮೆಂಟ್ ಮತ್ತು ಟೆಕ್ನಾಲಾಜಿ ಕುರಿತ 5 ಸೂತ್ರಗಳ ಬಗ್ಗೆ ಸಮಗ್ರ ವಿರಗಳನ್ನು ದಾಖಲಿಸಿಕೊಂಡಿತು. ಇದೇ ಸಂದರ್ಭದಲ್ಲಿ ಕೇಂದ್ರ ತಂಡ ರಾಜ್ಯದಲ್ಲಿ ಕೋವಿಡ್ ನಿರ್ವಹಣೆ ಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿತು. ಕೋವಿಡ್ ನಿಯಂತ್ರಣಕ್ಕಾಗಿ ಸಂಪರ್ಕಿತರ ಪತ್ತೆ ಹಚ್ಚುವುದು ಹಾಗೂ ಕೊ-ಮಾರ್ಬಿಡ್ ವ್ಯಕ್ತಿಗಳನ್ನು ಗುರುತಿಸಿ, ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಮನಾರ್ಹ ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಶಂಸೆ ಮಾಡಿತು.

ಮುಂದಿನ ದಿನಗಳಲ್ಲಿ, ಕೋವಿಡ್ ನಿಂದ ಉಂಟಾಗುವ ಮರಣ ತಡೆಗಟ್ಟಲು ಹಾಗೂ ರೋಗ ಲಕ್ಷಣ ಇರುವ ಸೋಂಕಿತರಿಗೆ ಸೂಕ್ತ ಚಿಕಿತ್ಸಾ ಸೌಲಭ್ಯ ಒದಗಿಸಲು ಆದ್ಯತೆ ನೀಡಬೇಕಾಗಿದೆ. ಜೊತೆಗೆ ಕಂಟೇನ್ ಮೆಂಟ್ ವಲಯಗಳಲ್ಲಿ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆಯಾಗಬೇಕಾಗಿದೆ ಎಂದು ಕೇಂದ್ರ ತಂಡದ ಅಧಿಕಾರಿಗಳು ಸಲಹೆ ನೀಡಿದರು.

ರಾಜ್ಯದಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು, ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳು ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಹೈ ಫ್ಲೋ ಆಕ್ಷಿಜನ್ ವ್ಯವಸ್ಥೆ ಅಳವಡಿಸಲಾಗುತ್ತಿದ್ದು, ಆಗಸ್ಟ್ 15 ರೊಳಗಾಗಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿವೆ ಎಂದು ವಿವರಿಸಿದರು.

ಸಭೆಯಲ್ಲಿ ಆರೋಗ್ಯ ಸಚಿವ ಬಿ. ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.