ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಡ್ ಗಳು ಖಾಲಿ ಇಲ್ಲ ಎಂಬ ಕಾರಣಕ್ಕೇ ಕೊರೋನಾ ಸೋಂಕಿತರು ಚಿಕಿತ್ಸೆ ಇಲ್ಲದೆ ಪರದಾಡಿದ ಪ್ರಕರಣಗಳು ವರದಿಯಾಗುತ್ತಲೇ ಎಚ್ಚೆತ್ತ ಕರ್ನಾಟಕ ಸರ್ಕಾರ ಇದೀಗ ನಗರದಲ್ಲಿರುವ 20 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡಲು ಅವಕಾಶ ನೀಡಿದೆ.
ನಗರದಲ್ಲಿರುವ ಪ್ರತೀಯೊಂದು ಪ್ರಮುಖ ಖಾಸಗಿ ಆಸ್ಪತ್ರೆಗಳ ಒಂದು ಬ್ರಾಂಚ್ ಆಸ್ಪತ್ರೆ (ಪ್ರಾಂತೀಯ ಆಸ್ಪತ್ರೆ)ಯನ್ನು ಕೊರೋನಾ ಚಿಕಿತ್ಸೆಗೆ ಮೀಸಲಿಡಲು ಸರ್ಕಾರ ಸೂಚನೆ ನೀಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಗರದಲ್ಲಿರುವ 20 ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿದ್ದು, ಇಲ್ಲಿ ಕೊರೋನಾ ಸೋಂಕಿತರಿಗೆ ಮಾತ್ರ ಚಿಕಿತ್ಸೆ ನೀಡುವ ಕುರಿತು ಸೂಚನೆ ನೀಡಲಾಗಿದೆ.
ಅಂತೆಯೇ ಆಸ್ಪತ್ರೆಗಳಲ್ಲಿರುವ ಬೆಡ್ಗಳು, ಆಕ್ಸಿಜನ್ ಸಾಮರ್ಥ್ಯ, ICU ಬೆಡ್ಗಳು, ವೆಂಟಿಲೇಟರ್ ಗಳ ಕುರಿತು ಸಂಪೂರ್ಣ ಮಾಹಿತಿಯನ್ನು 48 ಗಂಟೆಯೊಳಗೆ ನೀಡುವಂತೆ ಇಲಾಖೆ ಕೇಳಿದೆ. ಅಲ್ಲದೆ ಎಷ್ಟು ಬೇಗ ಸಾಧ್ಯವಾಗುತ್ತದೆಯೋ ಅಷ್ಟು ಬೇಗ ಈ ಆಸ್ಪತ್ರೆಗಳಲ್ಲಿರುವ ಕೊರೋನಾರಹಿತ ರೋಗಿಗಳನ್ನು ಇತರೆ ಆಸ್ಪತ್ರೆಗಳಿಗೆ ರವಾನೆ ಮಾಡುವಂತೆಯೂ ಸೂಚನೆ ನೀಡಲಾಗಿದೆ.
ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಲೇ ಇದೆ. ಕಳೆದ ನಾಲ್ಕೈದು ದಿನಗಳಿಂದ ನಿತ್ಯ ನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಇದರ ಪರಿಣಾಮ ವಿಕ್ಟೋರಿಯಾ, ಬೌರಿಂಗ್, ರಾಜೀವ್ ಗಾಂಧಿ ಆಸ್ಪತ್ರೆಗಳ ಬೆಡ್ ಫುಲ್ ಆಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಪರ್ಯಾಯ ವ್ಯವಸ್ಥೆಗೆ ಸಿದ್ಧತೆ ನಡೆಸಿದೆ. ಅದರಂತೆ ಇದೀಗ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್-19 ಚಿಕಿತ್ಸೆ ನೀಡಲು ಅವಕಾಶ ನೀಡಲಾಗಿದೆ.
Comments are closed.