ಕರ್ನಾಟಕ

ನೇಕಾರರ ಬಾಕಿ ಸಾಲವನ್ನು ಮನ್ನಾ ಮಾಡಿ, ಪ್ರತಿ ಕುಟುಂಬಕ್ಕೆ ಕನಿಷ್ಠ ರೂ.10,000 ತುರ್ತಾಗಿ ನೀಡಿ: ಸಿದ್ದರಾಮಯ್ಯ ಆಗ್ರಹ

Pinterest LinkedIn Tumblr

ಬೆಂಗಳೂರು: “ನೇಕಾರರ ಬಾಕಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು, ಸಂಕಷ್ಟದಲ್ಲಿರುವ ನೇಕಾರರು ಸೇರಿದಂತೆ ಪ್ರತಿ ಕುಟುಂಬಕ್ಕೆ ಕನಿಷ್ಠ ರೂ.10,000 ತುರ್ತಾಗಿ ನೀಡಬೇಕು ಮತ್ತು ಕೊರೊನಾ ಬಿಕ್ಕಟ್ಟು ಬಗೆಹರಿಯುವವರೆಗೆ ಉಚಿತವಾಗಿ ಆಹಾರ ಧಾನ್ಯಗಳ ಕಿಟ್‍ಗಳನ್ನು ನೀಡಬೇಕು.” ಎಂದು ಮಾಜಿ ಮುಖ್ಯಮಂತ್ರಿ,ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ನೇಕಾರರ ಸಮಸ್ಯೆ ಕುರಿತು ಎಚ್ಚರಿಸಿರುವ ಸಿದ್ದರಾಮಯ್ಯ ಈ ಸಂಬಂಧ ಸರಣಿ ಟ್ವೀಟ್ ಮಾಡಿ ರಾಜ್ಯ ಸರ್ಕಾರಕ್ಕೆ ನೇಕಾರರ ಕಷ್ಟಕ್ಕೆ ಸ್ಪಂದಿಸಲು ಒತ್ತಾಯಿಸಿದ್ದಾರೆ.

“ನೇಕಾರರ ಬದುಕು ಸಂಕಷ್ಟದಲ್ಲಿದೆ. ರಾಜ್ಯ ಸರ್ಕಾರ ಘೋಷಿಸಿರುವ ಪರಿಹಾರದ ಪ್ಯಾಕೇಜ್ ಇನ್ನೂ ಬಿಡುಗಡೆಯಾಗಿಲ್ಲ. ಆ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಮುಖ್ಯಮಂತಿಗಳು ಕೂಡಲೇ ಸ್ಪಂದಿಸಬೇಕು.

“ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಸುಮಾರು 2 ಲಕ್ಷ ಕೈಮಗ್ಗ ಮತ್ತು ವಿದ್ಯುತ್ ಮಗ್ಗಗಳಿವೆ. ವಾಸ್ತವದಲ್ಲಿ ಸುಮಾರು 7-8 ಲಕ್ಷ ಕುಟುಂಬಗಳು ಈ ವೃತ್ತಿಯನ್ನು ಅವಲಂಬಿಸಿವೆ. ರಾಜ್ಯ ಸರ್ಕಾರ 20 ಎಚ್.ಪಿ ಗಿಂತ ಕಡಿಮೆ ವಿದ್ಯುತ್ ಬಳಸುವ ಮಗ್ಗಗಳನ್ನು ಮಾತ್ರ ಲೆಕ್ಕ ಹಾಕಿ ಕಡಿಮೆ ಸಂಖ್ಯೆಯನ್ನು ತೋರಿಸುತ್ತಿರುವುದು ಸರಿ ಅಲ್ಲ

“ಕಳೆದ 7-8 ತಿಂಗಳುಗಳಿಂದ ತಯಾರಿಸಿದ ಸೀರೆ, ಬಟ್ಟೆ ಮತ್ತಿತರ ಉತ್ಪನ್ನಗಳು ಮಾರಾಟವಾಗದೆ ಉಳಿದಿವೆ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಬೆಳಗಾವಿ, ದೊಡ್ಡಬಳ್ಳಾಪುರ, ಧಾರವಾಡ ಮೊದಲಾದ ಜಿಲ್ಲೆಗಳ 6 ಜನ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿಗಳೇ ಹೊಣೆ.

“ಕಳೆದ ಐದಾರು ತಿಂಗಳುಗಳಿಂದ ನೇಕಾರರು ಸುಮಾರು ರೂ.1000 ಕೋಟಿ ಮೊತ್ತದ ಉತ್ಪನ್ನವನ್ನು ಸಿದ್ಧಪಡಿಸಿದ್ದಾರೆ. ಇದರಲ್ಲಿ ಕೈ ಮಗ್ಗದಲ್ಲಿ ಉತ್ಪಾದಿಸಿದ ಬಟ್ಟೆಗಳ ಮೌಲ್ಯ ಸುಮಾರು ರೂ.15 ಕೋಟಿಯಾದರೆ ಉಳಿದದ್ದು ವಿದ್ಯುತ್ ಮಗ್ಗಗಳಲ್ಲಿ ತಯಾರಿಸಿದ್ದು.

“ಅಂಗನವಾಡಿ ಕಾರ್ಯಕರ್ತೆಯರು, ಸರ್ಕಾರಿ ನೌಕರರು, ಆಶಾ ಕಾರ್ಯಕರ್ತೆಯರು ಮತ್ತು ಪಡಿತರ ವಿತರಣೆ ವ್ಯವಸ್ಥೆಗಳ ಮೂಲಕ ಬಟ್ಟೆಗಳನ್ನು ವಿತರಿಸಿ ನೇಕಾರರ ಸಮಸ್ಯೆಯನ್ನು ಬಗೆಹರಿಸಬಹುದು. ಈ ಇಚ್ಛಾಶಕ್ತಿ ಸರ್ಕಾರಕ್ಕೆ ಇದೆಯೇ?

“ಕೃಷಿ ಕ್ಷೇತ್ರದಲ್ಲಿ ಅನುಸರಿಸಲಾಗುತ್ತಿರುವ ಆವರ್ತ ನಿಧಿ ಪದ್ಧತಿಯನ್ನು ನೇಕಾರಿಕೆಗೂ ಅಳವಡಿಸಿದರೆ ಅವರ ಕಷ್ಟಕಾಲದಲ್ಲಿ ನೆರವಾಗುತ್ತದೆ. ಹಾಗಾಗಿ ಸರ್ಕಾರ ತಕ್ಷಣ ಆವರ್ತ ನಿಧಿಯನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸುತ್ತೇನೆ” ಎಂದಿದ್ದಾರೆ.

“ನೇಕಾರರ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದರು. ಆದರೆ ಆಗಸ್ಟ್-2019 ರಿಂದ ಮಾರ್ಚ್-2020 ರವರೆಗೆ 4,500 ಜನರ ರೂ.18.05 ಕೋಟಿ ಮತ್ತು ಏಪ್ರಿಲ್ 01 ರಿಂದ ಈವರೆಗೆ ಕೇವಲ 6,000 ಜನರ ರೂ.26 ಕೋಟಿಗಳನ್ನು ಮಾತ್ರ ಮನ್ನಾ ಮಾಡಲಾಗಿದೆ. ಉಳಿದ ಸಾಲ ಮನ್ನಾ ಯಾವಾಗ? ” ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Comments are closed.