ರಾಷ್ಟ್ರೀಯ

ಯಾವುದೇ ಕಾರಣಕ್ಕೂ ಗಲ್ವಾನ್ ಕಣಿವೆಯನ್ನು ಚೀನಾಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಮಹಮದ್ ಅಮೀನ್ ಗಲ್ವಾನ್

Pinterest LinkedIn Tumblr

ಶ್ರೀನಗರ: ಯಾವುದೇ ಕಾರಣಕ್ಕೂ ಗಲ್ವಾನ್ ಕಣಿವೆಯನ್ನು ಚೀನಾಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಮಹಮದ್ ಅಮೀನ್ ಗಲ್ವಾನ್ ಹೇಳಿದ್ದಾರೆ.

ಈ ಗಲ್ವಾನ್ ಕಣಿವೆಯನ್ನು ಕಂಡುಹಿಡಿದಿದ್ದ ಗುಲಾಮ್ ರಸೂಲ್ ಗಲ್ವಾನ್ ಅವರ ಮರಿ ಮೊಮ್ಮಗ ಮಹಮದ್ ಅಮೀನ್ ಗಲ್ವಾನ್ ಅವರು ಭಾರತ-ಚೀನಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದು, ‘ಗಲ್ವಾನ್ ಕಣಿವೆ ನನ್ನ ಮುತ್ತಜ್ಜನಿಗೆ ಸೇರಿದ್ದು. ಮುತ್ತಜ್ಜ ಗುಲಾಮ್ ರಸೂಲ್ ಗಲ್ವಾನ್ ಅವರು 1890 ರ ದಶಕದಲ್ಲಿ ಗಲ್ವಾನ್ ಕಣಿವೆಯನ್ನು ಕಂಡುಹಿಡಿದ ವ್ಯಕ್ತಿ. ಇದೇ ಕಾರಣಕ್ಕೆ ಈ ಕಣಿವೆಗೆ ಆ ಹೆಸರು ಬಂದಿದೆ. ಚೀನಾ ಗಲ್ವಾನ್ ವಿಚಾರವಾಗಿ ಸುಳ್ಳು ಹೇಳುತ್ತಿದ್ದು, ಭಾರತ ಸರ್ಕಾರ ಯಾವುದೇ ಕಾರಣಕ್ಕೂ ಕಣಿವೆಯನ್ನು ಚೀನಾಗೆ ಒಪ್ಪಿಸಬಾರದು. ಗಲ್ವಾನ್ ಕಣಿವೆಯಲ್ಲಿ ಮುಸ್ಲಿಮರು ಬೌದ್ಧರು ಸೇರಿದಂತೆ ಹಲವು ಸಮುದಾಯದ ಜನರಿದ್ದೇವೆ. ನಾವೆಲ್ಲರೂ ಭಾರತದ ಸೇನೆಯ ಹಿಂದೆ ಇದ್ದೇವೆ. ಸರ್ಕಾರ ಚೀನಾಗೆ ಬಗ್ಗುವ ಪ್ರಶ್ನೆಯೇ ಇಲ್ಲ. ಗಲ್ವಾನ್ ಕಣಿವೆ ಭಾರತದ ಅವಿಭಾಜ್ಯ ಅಂಗ. ಅದನ್ನು ಚೀನಾಗೆ ಒಪ್ಪಿಸುವ ಮಾತೇ ಇಲ್ಲ ಎಂದು ಹೇಳಿದ್ದಾರೆ.

ಮಹಮದ್ ಅಮೀನ್ ಗಲ್ವಾನ್ ಅವರು ನಿವೃತ್ತ ಸರ್ಕಾರಿ ಅಧಿಕಾರಿಯಾಗಿದ್ದು, ತಾಂತ್ರಿಕವಾಗಿ ಮತ್ತು ವ್ಯೂಹಾತ್ಮಕವಾಗಿ ಭಾರತಕ್ಕೆ ಅತ್ಯಂತ ಮಹತ್ವದ ಪ್ರದೇಶವಾಗಿದ್ದು, ಯಾವುದೇ ಕಾರಣಕ್ಕೂ ಭಾರತೀಯ ಸೇನೆ ಈ ಭೂ ಪ್ರದೇಶದಲ್ಲಿ ಚೀನಾ ಅತಿಕ್ರಮಣಕ್ಕೆ ಆಸ್ಪದ ನೀಡಬಾರದು. 1962ರ ಯುದ್ಧದ ಬಳಿಕವೂ ಗಲ್ವಾನ್ ಕಣಿವೆ ಭಾರತದಲ್ಲಿಯೇ ಇದೆ. ಭಾರತದಲ್ಲೇ ಉಳಿಯಲಿದೆ ಎಂದು ಹೇಳಿದರು.

ಗಾಲ್ವಾನ್ ಕಣಿವೆಯೊಂದಿಗಿನ ಅವರ ಕುಟುಂಬದ ಸಂಪರ್ಕ ಮತ್ತು ಕಣಿವೆಯ ಹೆಸರನ್ನು ಹೇಗೆ ಪಡೆದರು ಎಂಬುದರ ಕುರಿತು ಮಾತನಾಡಿದ ಮೊಹಮ್ಮದ್ ಅಮೀನ್ ಗಲ್ವಾನ್, ಈ ಕಣಿವೆಗೆ ಅವರ ಮುತ್ತಜ್ಜ ಗುಲಾಮ್ ರಸೂಲ್ ಗಾಲ್ವಾನ್ ಅವರ ಹೆಸರನ್ನು ಇಡಲಾಗಿದೆ. ಬ್ರಿಟೀಷರು ಈ ಪ್ರದೇಶದಲ್ಲಿ ದಾರಿ ತಪ್ಪಿದಾಗ ಗುಲಾಮ್ ರಸೂಲ್ ಗಲ್ವಾನ್ ಅವರು ಸಹಾಯ ಮಾಡಿದ್ದ ಹಿನ್ನೆಲೆಯಲ್ಲಿ ಬ್ರಿಟೀಷ್ ಅಧಿಕಾರಿಗಳು ಈ ಪ್ರದೇಶಕ್ಕೆ ಅವರ ಹೆಸರನ್ನೇ ಇಟ್ಟಿದ್ದಾರೆ ಎಂದು ಹೇಳಿದ್ದಾರೆ.

“ನನ್ನ ಮುತ್ತಜ್ಜ ಗುಲಾಮ್ ರಸೂಲ್ ಗಲ್ವಾನ್ 1892-93ರಲ್ಲಿ ಬ್ರಿಟಿಷರೊಂದಿಗೆ ಗಲ್ವಾನ್ ಕಣಿವೆಯಲ್ಲಿ ಚಾರಣ ಮಾಡಿದರು. ಅವರು ಕಣಿವೆಯನ್ನು ಅನ್ವೇಷಿಸಿದರು. ಈ ಸ್ಥಳದಲ್ಲಿ ಬ್ರಿಟೀಷರು ದಾರಿ ತಪ್ಪಿದಾಗ ಅವರಿಗೆ ಸುರಕ್ಷಿತವಾಗಿ ತಲುಪಲು ಸಹಾಯ ಮಾಡಿದರು. ಈ ಆವಿಷ್ಕಾರದ ನಂತರವೇ ಬ್ರಿಟೀಷರು ಈ ಕಣಿವೆಗೆ ನನ್ನ ಅಜ್ಜನ ಹೆಸರಿಟ್ಟರು” ಎಂದು ಅಮೀನ್ ಹೇಳಿದ್ದಾರೆ.

ಗಾಲ್ವಾನ್ ಹಿಂದಿನಿಂದಲೇ ಭಾರತದ ಭಾಗವಾಗಿತ್ತು, ಇನ್ನು ಮುಂದೆಯೂ ಭಾರತದ ಭಾಗವಾಗಿಯೇ ಉಳಿಯುತ್ತದೆ. ಭಾರತೀಯ ಸೈನಿಕರು ಚೀನಾ ಸೈನಿಕರನ್ನು ಗಡಿಯಿಂದ ಹಿಮ್ಮೆಟ್ಟುವಂತೆ ಮಾಡಬೇಕೆಂದು ಅಮೀನ್ ಆಗ್ರಹಿಸಿದ್ದಾರೆ.

Comments are closed.