ಕರ್ನಾಟಕ

ಬೆಂಗಳೂರಲ್ಲಿ ಟೆಕ್ಕಿಯಿಂದ ಪತ್ನಿ ಹತ್ಯೆ, ಕೊಲ್ಕತ್ತಾದಲ್ಲಿ ಅತ್ತೆ ಶೂಟ್ ಮಾಡಿ ತಾನೂ ಆತ್ಮಹತ್ಯೆ

Pinterest LinkedIn Tumblr


ಬೆಂಗಳೂರು(ಜೂ.23): ಕೌಟುಂಬಿಕ ಕಲಹದಿಂದ ಬೇಸತ್ತ ಸಾಫ್ಟ್​​ವೇರ್ ಇಂಜಿನಿಯರ್ ತನ್ನ ಹೆಂಡತಿ ಹಾಗೂ ಅತ್ತೆಯನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಕೊಲ್ಕತ್ತಾ ಮೂಲದ ಟೆಕ್ಕಿ ಅಮಿತ್ ಅಗರವಾಲ್ ನಗರದ ವೈಟ್ ಫೀಲ್ಡ್ ಬಳಿಯ ಅಪಾರ್ಟ್​​​ಮೆಂಟ್ ನಲ್ಲಿ ತನ್ನ ಹೆಂಡತಿ ಶಿಲ್ಪ ಅಗರವಾಲ್ (40) ರನ್ನು ಹತ್ಯೆ ಮಾಡಿದ್ದಾನೆ. ಈ ಘಟನೆ ಜೂನ್​ 20ರ ಶನಿವಾರ ನಡೆದಿದೆ.

ತನ್ನ ಹೆಂಡತಿಯನ್ನು ಮನೆಯ ಅಡುಗೆ ಕೋಣೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿದ ಅಮಿತ್ ಅಗರವಾಲ್, ಬಳಿಕ ಕೊಲ್ಕತ್ತಾಗೆ ತೆರಳಿ ತನ್ನ ಅತ್ತೆ ಲಲಿತಾ ದಂದಾನಿಯಾ (70) ಅವರನ್ನು ಗುಂಡಿಟ್ಟು ಕೊಲೆ ಮಾಡಿದ್ದಾನೆ. ಬಳಿಕ ತಾನೂ ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕೊಲ್ಕತ್ತಾ ಮೂಲದ ಅಮಿತ್ ಅಗರವಾಲ್ 10 ವರ್ಷಗಳ ಹಿಂದೆ ಶಿಲ್ಪಿ ಅಗರವಾಲ್ ರೊಂದಿಗೆ ವಿವಾಹವಾಗಿದ್ದ. ಬಳಿಕ ಬೆಂಗಳೂರಿನಲ್ಲಿ ಸಾಫ್ಟ್​​​ವೇರ್ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಮಹದೇವಪುರದ ಅಪಾರ್ಟ್​​​ಮೆಂಟ್​​ನಲ್ಲಿ ದಂಪತಿಗಳಿಬ್ಬರು ನೆಲೆಸಿದ್ದರು.

ಈ ನಡುವೆ ಗಂಡ-ಹೆಂಡತಿ ಕೌಟುಂಬಿಕ ವಿಚಾರಕ್ಕೆ ಪದೇ ಪದೇ ಜಗಳವಾಡುತ್ತಿದ್ದರು ಎನ್ನಲಾಗಿದೆ. ಕಳೆದ ಶನಿವಾರ ಸಹ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ಅಮಿತ್ ತನ್ನ ಹೆಂಡತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಹೆಂಡತಿಯ ಕೊಲೆ ಬಳಿಕ ಅಮಿತ್​​ ಕೊಲ್ಕತ್ತಾಗೆ ತೆರಳಿ ಅಲ್ಲಿ ತನ್ನ ಅತ್ತೆ ಮಾವನ ಜೊತೆ ಜಗಳವಾಡಿದ್ದಾನೆ. ಈ ವೇಳೆ ಅತ್ತೆ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಬಳಿಕ ತಾನೂ ಸಹ ಗುಂಡಿಟ್ಟುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.ಈ ಬಗ್ಗೆ ಕೊಲ್ಕತ್ತಾ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಪೊಲೀಸರ ತನಿಖೆ ವೇಳೆ ಅಮಿತ್ ಅಗರವಾಲ್ ಬಳಿ ಡೆತ್ ನೋಟ್ ಪತ್ತೆಯಾಗಿದೆ. ಡೆತ್ ನೋಟ್ ನಲ್ಲಿ ಬೆಂಗಳೂರಿನಲ್ಲಿ ಹೆಂಡತಿಯನ್ನು ಕೊಲೆ ಮಾಡಿರುವ ಬಗ್ಗೆ ಉಲ್ಲೇಖಿಸಿದ್ದಾನೆ. ಅದನ್ನ ಗಮನಿಸಿದ ಕೊಲ್ಕತ್ತಾ ಪೊಲೀಸರು ಕೂಡಲೇ ಬೆಂಗಳೂರು ಪೊಲೀಸರನ್ನ ಸಂಪರ್ಕಿಸಿ ಮಾಹಿತಿ ರವಾನಿಸಿದ್ದಾರೆ.

ಟೆಕ್ಕಿ ಕುಟುಂಬ ವಾಸವಿದ್ದ ಅಪಾರ್ಟ್​​​ಮೆಂಟ್​​ಗೆ ಮಹದೇವಪುರ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಡುಗೆ ಕೋಣೆಯಲ್ಲಿ ಶಿಲ್ಪಳ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಮಹದೇವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Comments are closed.