ಕರ್ನಾಟಕ

46 ವರ್ಷ ಕನ್ನಡ ಚಿತ್ರಗಳನ್ನಷ್ಟೇ ಪ್ರದರ್ಶಿಸಿದ್ದ ಮೈಸೂರಿನ ಶಾಂತಲ ಚಿತ್ರಮಂದಿರ ಬಂದ್‌!

Pinterest LinkedIn Tumblr


ಮೈಸೂರು: ಅದು ಮೈಸೂರಿನ ಪ್ರತಿಷ್ಠಿತ ಹಾಗೂ ಹಳೆಯ ಚಿತ್ರಮಂದಿರ. ಅಣ್ಣಾವ್ರು, ವಿಷ್ಣುವರ್ಧನ್, ಅಂಬರೀಶ್ ಚಿತ್ರಗಳು ರಿಲೀಸ್ ಆದ್ರೆ ಇದೇ ಚಿತ್ರಮಂದಿರದಲ್ಲಿ ರಿಲೀಸ್ ಆಗಿ ಶತದಿನೋತ್ಸವ ಆಚರಿಸುತ್ತಿದ್ದವು. ಯಾವುದೇ ಸ್ಟಾರ್ ನಟರ‌ ಚಿತ್ರ ಬಿಡುಗಡೆಯ ದಿನ ಈ ಚಿತ್ರಮಂದಿರದ ಮುಂದೆ ಹಬ್ಬ ಆಚರಿಸುತ್ತಿದ್ದರು. ಆದರೆ ಈಗ ಆ ಚಿತ್ರಮಂದಿರ ಇತಿಹಾಸದ ಪುಟ ಸೇರಿದೆ. 4 ದಶಕಗಳ ಕಾಲ ಕನ್ನಡ ಚಿತ್ರಗಳನ್ನಷ್ಟೇ ಪ್ರದರ್ಶಿಸಿದ್ದ ಶಾಂತಲ ಚಿತ್ರಮಂದಿರ ಈಗ ತನ್ನ ಆಟ ಮುಗಿಸಿದೆ.

46 ವರ್ಷಗಳ ಸುದೀರ್ಘ ಕಾಲ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸಿ, ಹಿಟ್‌ಗಳ ಸಂಭ್ರಮಾಚರಣೆಗೆ ಸಾಕ್ಷಿಯಾಗಿದ್ದ ಈ ಶಾಂತಲ ಇನ್ನು ನೆನಪು ಮಾತ್ರ. ಲಾಕ್​ಡೌನ್​‌ ಅವಧಿಯಲ್ಲಿಯೇ ಚಿತ್ರ ಮಂದಿರ ಮುಚ್ಚಲು ನಿರ್ಧಾರ ಮಾಡಿರುವ ಮಾಲೀಕರು ಚಿತ್ರಮಂದಿರದೊಂದಿಗಿನ ಅವಿನಾಭಾವ ಸಂಬಂಧ ಬಿಚ್ಚಿಟ್ಟಿದ್ದಾರೆ.

ಮೈಸೂರಿನ ಶಾಂತಲ ಚಿತ್ರಮಂದಿರ ಅಂದರೆ ಥಟ್ ನೆನಪಾಗೋದು ಏಯ್… ಅಲ್ಲಿ ಬ್ಲ್ಯಾಕ್ ಟಿಕೆಟ್ ಮಾರಲ್ಲ. ಕ್ಯೂ ನಲ್ಲಿ ನಿಂತ ಎಲ್ಲರಿಗೂ ಟಿಕೆಟ್ ಸಿಗುತ್ತಲ್ಲ… ಅದೇ ಚಿತ್ರಮಂದಿರ ಅಲ್ವಾ? ಎಂದೆಲ್ಲ ಮಾತು ಕೇಳಿ ಬರೋ ಮೈಸೂರಿನ ಏಕೈಕ ಚಿತ್ರಮಂದಿರ ಅಂದ್ರೆ ಅದು ಶಾಂತಲ ಚಿತ್ರಮಂದಿರ. ಆದರೆ ಈ ಹೆಸರಾಂತ ಚಿತ್ರಮಂದಿರ ಇತಿಹಾಸದ ಪುಟ ಸೇರುತ್ತಿದೆ. ಅಂದಹಾಗೆ ಇದು ಯಾವುದೇ ನಷ್ಟ ಅಥವಾ ತಾಂತ್ರಿಕ ಕಾರಣದಿಂದ ಥಿಯೇಟರ್ ಮುಚ್ಚುತ್ತಿಲ್ಲ. ಬದಲಿಗೆ, ಥಿಯೇಟರ್ ಇದ್ದ ಜಾಗದ ಲೀಸ್ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಮೈಸೂರಿನ ಹೃದಯ ಭಾಗದಲ್ಲಿರುವ ಶಾಂತಲ ಚಿತ್ರಮಂದಿರ ಮುಚ್ಚಲು ಮಾಲೀಕರು ನಿರ್ಧರಿಸಿದ್ದಾರೆ.

ಈ ಚಿತ್ರಮಂದಿರದ ಆಸ್ತಿ ಮೈಸೂರಿನ ಆಶ್ರಮವೊಂದಕ್ಕೆ ಸೇರುವ ಹಿನ್ನೆಲೆಯಲ್ಲಿ ಮುಂದೆ ಇಲ್ಲಿ ಏನು ಮಾಡಬೇಕೆಂದು ಆಶ್ರಮದ ಆಡಳಿತ ಮಂಡಳಿ ನಿರ್ಧಿರಿಸಲಿದೆ. ಆದರೆ ಸತತ 46 ವರ್ಷ ಇಲ್ಲಿ ಸಾವಿರಾರು ಚಿತ್ರಗಳನ್ನು ಪ್ರದರ್ಶನ ಮಾಡಿದ್ದ ಚಿತ್ರಮಂದಿರ ಇನ್ನು ನೆನಪು ಮಾತ್ರ..

ಇನ್ನು ಈ ಚಿತ್ರಮಂದಿರ ಮ್ಯಾನೇಜರ್ ದೇವರಾಜ್ ಎಷ್ಟರ ಮಟ್ಟಿಗೆ ಕಟ್ಟು ನಿಟ್ಟು ಅಂದ್ರೆ 80ರ ದಶಕದಲ್ಲಿ 176 ರೂಪಾಯಿ ಸಂಬಳ ಬರುತ್ತಿದ್ದ ವೇಳೆ 500 ರೂ. ನೀಡಿ ಬ್ಲ್ಯಾಕ್ ಟಿಕೆಟ್ ಮಾರಲು ಅವಕಾಶ ಕೊಡಿ ಎಂದವರಿಗೆ ಚಳಿ ಬಿಡಿಸಿದ್ದರು. ಇಲ್ಲಿನ ಮ್ಯಾನೇಜರ್ ದೇವರಾಜ್ ಅವರು ಮಾಡಿದ ಕೆಲಸಕ್ಕೆ ಇವತ್ತಿಗೂ ಶಾಂತಲದಲ್ಲಿ ಬ್ಲ್ಯಾಕ್ ಟಿಕೆಟ್​ಗೆ ಅವಕಾಶ ಇರಲಿಲ್ಲ. ಹಾಗಾಗಿಯೇ ಇವತ್ತು ಮೈಸೂರಿನ ನಾಗರಿಕರು ಮ್ಯಾನೇಜರ್ ಹಾಗೂ ಮಾಲೀಕರಿಗೆ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಸನ್ಮಾನ ಸಹ ಮಾಡಿ ಗೌರವ ಸಲ್ಲಿಸಿದ್ದಾರೆ. ಇದೇ ಚಿತ್ರಮಂದಿರಕ್ಕೆ ಅದೇಷ್ಟೋ ನಟ ನಟಿಯರು ತಮ್ಮ ಚಿತ್ರದ ಯಶಸ್ಸಿನ ಸಂಭ್ರಮವನ್ನು ಹಂಚಿಕೊಂಡಿದ್ದು ಕನ್ನಡದ ಖ್ಯಾತನಾಮ ನಟರು ಚಿತ್ರಮಂದಿರಕ್ಕೆ ವಿಸಿಟ್ ಮಾಡಿದ್ದಾರೆ. ಇವೆಲ್ಲವು ಇನ್ನು ನೆನಪು ಅಂತ ಬೇಸರ ವ್ಯಕ್ತಪಡಿಸುತ್ತಾರೆ ಥಿಯೇಟರ್ ಮಾಲೀಕ ಪದ್ಮನಾಭ್‌ ಪದಕಿ.

ಒಟ್ಟಿನಲ್ಲಿ ಮೈಸೂರಿಗರಿಗೆ ಮನರಂಜನೆ ನೀಡಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದ ಶಾಂತಲ ಆಟ ನಿಲ್ಲಿಸಿ ಶಾಂತವಾಗಿದ್ದಾಳೆ. ಮುಂದೆ ಚಿತ್ರಮಂದಿರದ ಸ್ಥಳದಲ್ಲಿ ಯಾವ ಉದ್ಯಮ ಶುರುವಾಗಲಿದೆ ಎಂಬುದು ಗೊತ್ತಿಲ್ಲ. ಆದರೆ ಚಿತ್ರಪ್ರೇಮಿಗಳ ಮನದಲ್ಲಿ ನಾಟ್ಯವಾಡುತ್ತಿದ್ದ ಶಾಂತಲ ಇನ್ನು ಮುಂದೆ ನೆನಪು ಮಾತ್ರ.

Comments are closed.