ಕರ್ನಾಟಕ

ವೈದ್ಯ ದಂಪತಿಗೆ ಕೊರೋನಾ ಪಾಸಿಟಿವ್: ಡಿ.ಕೆ.ಶಿಯ ಕನಕಪುರ ಕ್ಷೇತ್ರ ಜುಲೈ 1ರವರೆಗೆ ಲಾಕ್​ಡೌನ್

Pinterest LinkedIn Tumblr


ರಾಮನಗರ (ಕನಕಪುರ): ಕನಕಪುರ ಕ್ಷೇತ್ರದಲ್ಲಿ ವೈದ್ಯ ದಂಪತಿಗಳಲ್ಲಿ ಕಾಣಿಸಿದ್ದ ಕೊರೋನಾ ಪಾಸಿಟಿವ್ ಕೇಸ್ ಪ್ರಕರಣ ಇಡೀ ಕನಕಪುರವನ್ನೇ ಬೆಚ್ಚಿಬೀಳಿಸಿತ್ತು. ಕಳೆದ ಒಂದು ವಾರದಲ್ಲಿ ಕ್ಷೇತ್ರದಲ್ಲಿ 36 ಪ್ರಕರಣಗಳು ಪತ್ತೆಯಾಗಿದ್ದು, ಇನ್ನು ಹತ್ತುಹಲವು ಕೇಸ್‌ಗಳ ವರದಿ ಬರಬೇಕಿದೆ. ಈ ಕಾರಣಕ್ಕಾಗಿ ಕ್ಷೇತ್ರದ ಶಾಸಕ ಡಿ.ಕೆ.ಶಿವಕುಮಾರ್ ಮಾಸ್ಟರ್ ಪ್ಲ್ಯಾನ್ ಮಾಡಿ ಜುಲೈ 1ರವರೆಗೆ ಕನಕಪುರವನ್ನು ಲಾಕ್‌ಡೌನ್ ಮಾಡಲು ಸೂಚನೆ ನೀಡಿದ್ದಾರೆ.

ಹೌದು, ರಾಮನಗರ ಜಿಲ್ಲೆ ಕನಕಪುರ ಕ್ಷೇತ್ರವನ್ನು ಇಂದಿನಿಂದ ಮುಂದಿನ ಜುಲೈ 1 ರವರೆಗೆ ಲಾಕ್‌ಡೌನ್ ಮಾಡಲು ಕ್ಷೇತ್ರದ ಶಾಸಕ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾನುವಾರದಂದು ಕನಕಪುರದ ನಗರಸಭೆ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ನಿರ್ಧಾರ ಕೈಗೊಂಡಿದ್ದಾರೆ. ಇನ್ನು ಡಿ.ಕೆ.ಶಿವಕುಮಾರ್ ಆದೇಶಕ್ಕೆ ಕನಕಪುರದ ಜನರು ಸಹ ಉತ್ತಮವಾಗಿ ಸ್ಪಂದಿಸಿದ್ದಾರೆ. ಜನಸಾಮಾನ್ಯರಿಗೆ ಅಗತ್ಯವಿರುವ ದಿನಸಿ, ಮೆಡಿಕಲ್, ಮಟನ್-ಚಿಕನ್ ಸ್ಟಾಲ್ಸ್, ಬಾರ್, ವೈನ್ ಶಾಪ್ಸ್ ಹೊರತಾಗಿ ಉಳಿದೆಲ್ಲಾ ಅಂಗಡಿ-ಮುಂಗಟ್ಟುಗಳನ್ನ ಸಂಪೂರ್ಣ ಬಂದ್ ಮಾಡಲಾಗಿದೆ. ತೆರೆಯುವ ಅಂಗಡಿಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಬೇಕೆಂದು ಸಭೆಯಲ್ಲಿ ಡಿಕೆಶಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಇನ್ನು ಇವತ್ತು ಕನಕಪುರ ಸಂಪೂರ್ಣ ಲಾಕ್‌ಡೌನ್ ಆಗುವ ಮೂಲಕ ಕೊರೋನಾ ವಿರುದ್ಧ ಹೋರಾಟ ಮಾಡಲು ಉತ್ತಮವಾಗಿ ಸ್ಪಂದಿಸಿದೆ.

ಇನ್ನು ಬೆಳಗ್ಗೆ 7ರಿಂದ 11 ಗಂಟೆಯವರೆಗೆ ಅಗತ್ಯ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಬಾರ್ ಮತ್ತು ವೈನ್ ಶಾಪ್‌ಗಳಿಗೆ ಮಾತ್ರ ಸಮಯ ನಿಗಧಿ ಮಾಡಿಲ್ಲ. ಹಾಗಾಗಿ ಕನಕಪುರದಲ್ಲಿ ಕೊರೋನಾ ಅಬ್ಬರ ಕಡಿಮೆಯಾಗುವವರೆಗೆ ಕ್ಷೇತ್ರದ ಬಾರ್ ಅಂಡ್ ವೈನ್ ಶಾಪ್‌ಗಳಿಗೂ ಸಹ ಸಮಯ ನಿಗಧಿ ಮಾಡಬೇಕೆಂಬ ಒತ್ತಾಯವನ್ನು ಕ್ಷೇತ್ರದ ಕೆಲವರು ನ್ಯೂಸ್ 18 ಮೂಲಕ ಮಾಡಿದ್ದಾರೆ.

ಒಟ್ಟಾರೆ ಕನಕಪುರ ಕ್ಷೇತ್ರದ ಹಿತದೃಷ್ಟಿಯಿಂದಾಗಿ ಶಾಸಕ ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೈಗೊಂಡ ನಿರ್ಧಾರಕ್ಕೆ ಕ್ಷೇತ್ರದ ಜನರು ಸಹ ಉತ್ತಮವಾಗಿ ಸ್ಪಂದಿಸಿದ್ದಾರೆ. ಆದರೆ ಬಾರ್ ಮತ್ತು ವೈನ್ ಶಾಪ್​‌ಗಳಿಗೂ ಸಹ ಸಮಯ ನಿಗಧಿ ಮಾಡಿದರೆ ಮತ್ತಷ್ಟು ಅನುಕೂಲವಾಗಲಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ.

Comments are closed.