ಬೆಂಗಳೂರು: ಕೊರೋನಾ ಸೋಂಕು ಪೀಡಿತ ಪಾದರಾಯನಪುರ ಜೆಡಿಎಸ್ ಕಾರ್ಪೋರೇಟರ್ ಇಮ್ರಾನ್ ಪಾಷಾ ಅವರ ಸಂಪರ್ಕಕ್ಕೆ ಬಂದಿದ್ದ ಬಿಬಿಎಂಪಿ ಅಧಿಕಾರಿಗೂ ಕೊರೋನಾ ಸೋಂಕು ತಗುಲಿದ್ದು ಪರಿಣಾಮ ಬಿಬಿಎಂಪಿ ಕೇಂದ್ರ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.
ಮೇ 29ರಂದು ಜೆಡಿಎಸ್ ಕಾರ್ಪೋರೇಟರ್ ಇಮ್ರಾನ್ ಪಾಷಾ ಅವರಿಗೆ ಸೋಂಕು ದೃಢಪಟ್ಟಿದ್ದು, ಇದೀಗ ಅವರ ಸಂಪರ್ಕಕ್ಕೆ ಬಂದಿದ್ದ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೇಂದ್ರ ಕಚೇರಿಯ ವಾರ್ ರೂಂನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರಿಗೂ ಕೋವಿಡ್ -19 ದೃಢಪಟ್ಟಿದೆ.
ಶಿಕ್ಷಣ ಇಲಾಖೆಯ ಉಪಾಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆಎಎಸ್ ಅಧಿಕಾರಿ ಕಾರ್ಯ ನಿರ್ವಹಿಸುತ್ತಿದ್ದ ಹಡ್ಸನ್ ವೃತ್ತದಲ್ಲಿರುವ ಬಿಬಿಎಂಪಿ ಪ್ರಧಾನ ಕಚೇರಿಯನ್ನು ಸೀಲ್ ಡೌನ್ ಮಾಡಿ, ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಿ ಸ್ವಚ್ಛಗೊಳಿಸಲಾಗುತ್ತಿದೆ. ಈ ಸಂಬಂಧ ಕಚೇರಿ ಸುತ್ತ ಮುತ್ತ ಸಾರ್ವಜನಿಕರ ಭೇಟಿಯನ್ನು ತಾತ್ಕಾಲಿಕವಾಗಿ ನಿರ್ಭಂದಿಸಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.
ಸಹಾಯಕ ಆಯುಕ್ತ ದರ್ಜೆಯ ಈ ಅಧಿಕಾರಿ ಶುಕ್ರವಾರದ ಬಳಿಕ ಕಚೇರಿಗೆ ಬಂದಿರಲಿಲ್ಲ. ‘ಆ ಅಧಿಕಾರಿಯ ಸಂಪರ್ಕಕ್ಕೆ ಬಂದಿರುವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಿದ್ದೇವೆ. ಬಿಬಿಎಂಪಿಯ ಇಡೀ ಕೇಂದ್ರ ಕಚೇರಿಯನ್ನು ಸೀಲ್ ಡೌನ್ ಮಾಡುವ ಅಗತ್ಯವಿಲ್ಲ. ಆದರೆ ಇಡೀ ಕಚೇರಿ ಪ್ರಾಂಗಣವನ್ನು ಸೋಂಕು ನಿವಾರಕ ಸಿಂಪಡಿಸಿ ಸ್ವಚ್ಛ ಮಾಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ತಿಳಿಸಿದರು.
ಇನ್ನು ಅಧಿಕಾರಿಗೇ ಸೋಂಕು ತಗುಲಿರುವುದು ಅಲ್ಲಿನ ಸಿಬ್ಬಂದಿಗಳಿಗೆ ಆತಂಕ ತಂದೊಡ್ಡಿದ್ದು, ಅಧಿಕಾರಿಯ ಪ್ರಥಾಮಿಕ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ.
ಸೋಂಕು ತಗಲಿದ್ದು ಹೇಗೆ?
ಆರೋಗ್ಯ ವಿಭಾಗದವರಲ್ಲದ ಅನೇಕ ಅಧಿಕಾರಿಗಳನ್ನು ಕೊರೊನಾ ನಿಯಂತ್ರಣ ತಂಡದ ನೋಡೆಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿತ್ತು. ಇವರು ಕೋವಿಡ್-19 ಕಾಣಿಸಿಕೊಂಡ ಪ್ರದೇಶದಲ್ಲಿ ಓಡಾಡಿದಾಗ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು. ಸೋಂಕಿತ ವ್ಯಕ್ತಿ ಶಿಕ್ಷಣ ಇಲಾಖೆಯ ಅಧಿಕಾರಿಯಾಗಿದ್ದರಿಂದ ಬಿಬಿಎಂಪಿ ಶಾಲಾ ಕಾಲೇಜುಗಳ ಶಿಕ್ಷಕರು ಉಪನ್ಯಾಸಕರು ಅವರನ್ನು ಭೇಟಿಯಾಗಿರುವ ಸಾಧ್ಯತೆಗಳಿವೆ. ಇತ್ತೀಚಿನ ದಿನಗಳಲ್ಲಿ ಅವರ ಸಂಪರ್ಕಕ್ಕೆ ಬಂದವರು ಬಿಬಿಎಂಪಿ ಯನ್ನು ಸಂಪರ್ಕಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಒಳಿತು ಎಂದರು.
ಬಿಬಿಎಂಪಿಗೂ ಅಂಟಿದ ಪಾದರಾಯನಪುರದ ನಂಟು
ಇನ್ನು ಕಾರ್ಪೋರೇಟರ್ ಇಮ್ರಾನ್ ಪಾಷಾ ಕೊರೋನಾ ವೈರಸ್ ಗೆ ತುತ್ತಾಗುತ್ತಿದ್ದಂತೆಯೇ ಅತ್ತ ಇಡೀ ಪಾದಾರಯನಪುರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪ್ರಸ್ತುತ ಈ ಪ್ರದೇಶವನ್ನು ಕಂಟೈನ್ ಮೆಂಟ್ ಝೋನ್ ಆಗಿ ಘೋಷಣೆ ಮಾಡಲಾಗಿದ್ದು, ಇಲ್ಲಿ ಈ ವರೆಗೂ 67 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ 25 ಸಕ್ರಿಯ ಪ್ರಕರಗಳು ಮಾತ್ರ ಇದ್ದು, ಉಳಿದ ಸೋಂಕಿತರು ಗುಣಮುಖರಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಿಬಿಎಂಪಿ ಅಧಿಕಾರಿಗಳು, ಆಶಾ ಕಾರ್ಯಕರ್ತರು ವೈದ್ಯಕೀಯ ಸಿಬ್ಬಂದಿಗಳು ಸೇರಿದಂತೆ ಸುಮಾರು 50ರಿಂದ 60 ಸಿಬ್ಬಂದಿಗಳ ಸ್ವಾಬ್ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.
Comments are closed.