ಕರ್ನಾಟಕ

ನಮ್ಮಲ್ಲಿ ಭಿನ್ನಮತವಿಲ್ಲ, ಯಡಿಯೂರಪ್ಪನವರೇ 3 ವರ್ಷ ಮುಖ್ಯಮಂತ್ರಿ – ಶ್ರೀರಾಮುಲು

Pinterest LinkedIn Tumblr


ಬೆಂಗಳೂರು(ಜೂನ್​​​.01): ಪಕ್ಷದಲ್ಲಿ ಬಂಡಾಯ ಏಳುತ್ತಿದ್ದಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬೆನ್ನಿಗೆ ತನ್ನ ಸಂಪುಟ ಸಹೋದ್ಯೋಗಿಗಳು ನಿಂತಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ, ರಮೇಶ ಜಾರಕಿಹೊಳಿ, ಸುಧಾಕರ್​ಆಯ್ತು, ಈಗ ಆರೋಗ್ಯ ಸಚಿವ ಬಿ ಶ್ರೀರಾಮುಲು ಸರದಿ. ಸಚಿವ ಬಿ ಶ್ರೀರಾಮುಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರ ಬೆನ್ನಿಗೆ ನಿಂತಿದ್ದಾರೆ.

ಈ ಸಂಬಂಧ ನಗರದ ತಮ್ಮ ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಸಚಿವ ಶ್ರೀರಾಮುಲು, ಯಡಿಯೂರಪ್ಪ ಸಮರ್ಥ ನಾಯಕ.‌ ರಾಜ್ಯದಲ್ಲಿ ಪ್ರವಾಹ ಉಂಟಾದ ಸಮಯದಲ್ಲಿ ಯಡಿಯೂರಪ್ಪ ಒಬ್ಬರೇ ಕಾಲಿಗೆ ಚಕ್ರ ಕಟ್ಟಿಕೊಂಡು ಇಡೀ ರಾಜ್ಯ ಸುತ್ತಿ ಪರಿಸ್ಥಿತಿ ಪರಿಶೀಲಿಸಿದರು. ಈಗ ಕೊರೋನಾ ನಿಯಂತ್ರಿಸುವಲ್ಲಿ ದಿಟ್ಟ ಕ್ರಮಗಳನ್ನ ಕೈಗೊಂಡ ಸಮರ್ಥ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಕೊಂಡಾಡಿದ್ದಾರೆ.

ದೇಶದಲ್ಲಿ ಲಾಕ್​​ಡೌನ್ ಜಾರಿಯಾಗುವ ಮೊದಲೇ ರಾಜ್ಯದಲ್ಲಿ ಲಾಕ್​ಡೌನ್​ ಜಾರಿಗೊಳಿಸಿದ್ದ ದಿಟ್ಟ ನಾಯಕ ಬಿಎಸ್​ವೈ. ಪಕ್ಷದಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆಗಳು ಕೇವಲ ಆಯಾ ನಾಯಕರು ನೀಡಿದ ಅಭಿಪ್ರಾಯಗಳಷ್ಟೇ. ಆದರೆ, ಅವು ಯಾವುವು ವ್ಯತ್ಯಾಸಗಳಲ್ಲ ಎಂದು ಶ್ರೀರಾಮುಲು ಹೇಳಿದರು.

ಉಮೇಶ್​ ಕತ್ತಿ, ಬಸನಗೌಡ ಪಾಟೀಲ ಯತ್ನಾಳ ಹಾಗೂ ಮುರುಗೇಶ ನಿರಾಣಿ ನಮ್ಮ ಪಕ್ಷದ ಹಿರಿಯ ನಾಯಕರು. ಅವರ ಹೇಳಿಕೆಗಳ ಬಗ್ಗೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಒಂದಿಷ್ಟು ಶಾಸಕರು ಒಂದೆಡೆ ಸೇರಿ ಚರ್ಚೆ ಮಾಡಿರಬಹುದು. ಅದಕ್ಕೆ ನಾವ್ಯಾರು ಗಾಬರಿಯಾಗಬೇಕಿಲ್ಲ ಮತ್ತು ಗಾಬರಿಯಾಗೋ ಮಾತೇ ಬರಲ್ಲ ಎಂದರು.

ಹೀಗೆ ಮುಂದುವರಿದ ಶ್ರೀರಾಮುಲು, ನಮ್ಮ ಪಕ್ಷದಲ್ಲಿ ಯಾವುದೇ ಬಣ ರಾಜಕೀಯ ಇಲ್ಲ.‌ ಬೇರೆ ರಾಜಕೀಯ ಪಕ್ಷಗಳಲ್ಲಿರುವಂತೆ ನಮ್ಮ ಪಕ್ಷದಲ್ಲೂ ಸಣ್ಣಪುಟ್ಟ ವ್ಯತ್ಯಾಸಗಳಿವೆ ಅಷ್ಟೇ. ಯಡಿಯೂರಪ್ಪ ನಮ್ಮ ನಾಯಕರು ಮೂರು ವರ್ಷ ಅವರೇ ಮುಖ್ಯಮಂತ್ರಿ ಆಗಿರ್ತಾರೆ ಎಂದು ತಿಳಿಸಿದರು.

ಇದೇ ವೇಳೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಆಸ್ಪತ್ರೆ ಭೇಟಿಗೆ ಸ್ಪೀಕರ್ ತಡೆವೊಡ್ಡಿದ ವಿಚಾರದ ಬಗ್ಗೆ ಮಾತನಾಡಿದ ರಾಮುಲು, ಸ್ಪೀಕರ್ ಯಾವುದೇ ತೀರ್ಮಾನ ತೆಗೆದುಕೊಳ್ಳಬಹುದು. ಒಳ್ಳೆಯ ದೃಷ್ಟಿಯಿಂದ ಸಮಿತಿ ಒರಿಶೀಲನೆಗೆ ತಡೆ ನೀಡಿರಬಹುದು. ಆದರೆ ಭ್ರಷ್ಟರನ್ನ ರಕ್ಷಿಸಲು ಅಲ್ಲ ಹಾಗೂ ಭ್ರಷ್ಟರನ್ನ ರಕ್ಷಿಸುವ ಪ್ರಯತ್ನವೂ ನಮ್ಮದಲ್ಲ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.ಲಾಕ್​​ಡೌನ್ ಹಿನ್ನಲೆಯಲ್ಲೊ ಸ್ಪೀಕರ್ ಅಂತಹ ತೀರ್ಮಾನ ಕೈಗೊಂಡಿರಬಹುದು.‌ ಅದನ್ನ ಪ್ರಶ್ನಿಸೋ ಅಧಿಕಾರ ನಮಗಿಲ್ಲ. ಅಷ್ಟಕ್ಕೂ ಪಿಪಿಎ ಕಿಟ್, ವೆಂಟಿಲೇಟರ್ ಖರೀದಿ ಬಗ್ಗೆ ದಾಖಲೆಗಳು ಸಿಗುತ್ತವೆ. ಆರ್​​ಟಿಐ ಅಡಿಯಲ್ಲಿ ದಾಖಲೆ ಪಡೆಯಬಹುದು ಮತ್ತು ದಾಖಲೆಗಳನ್ನ ಹೆಚ್ ಕೆ ಪಾಟೀಲರಿಗೆ ನಾವೇ ನೀಡುತ್ತೇವೆ ಎಂದು ರಾಮುಲು ತಿಳಿಸಿದರು.

Comments are closed.