ಕರ್ನಾಟಕ

ಈಗ ಮತ್ತೆ ಬೆಂಗಳೂರಿನತ್ತ ಮುಖ ಮಾಡುತ್ತಿರುವ ವಲಸೆ ಕಾರ್ಮಿಕರು

Pinterest LinkedIn Tumblr


ಬೆಂಗಳೂರು(ಮೇ 29): ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ಬೆಂಗಳೂರಿಗೆ ಹೋಗುವ ಬಸ್​ ಹೊರತುಪಡಿಸಿ ಉಳಿದ ಸ್ಥಳೀಯ ಮಾರ್ಗಗಳಲ್ಲಿ ಬಸ್ ಹತ್ತುವವರಿಲ್ಲ. ಇದು ವಲಸಿಗ ಕಾರ್ಮಿಕರೆಲ್ಲರೂ ಅವರವರ ಊರಿಗೆ ವಾಪಸ್ ಹೋದ ಬಳಿಕ ಆಗಿರುವ ಬೆಳವಣಿಗೆ. ಇದು ವಲಸಿಗ ಕಾರ್ಮಿಕರ ಸ್ಥಿಗೆ ದ್ಯೋತಕವೂ ಹೌದು. ಕಾರ್ಮಿಕರೆಲ್ಲರೂ ಇದೀಗ ಮತ್ತೆ ಬೆಂಗಳೂರಿನತ್ತ ಮುಖ ಮಾಡುತ್ತಿದ್ದಾರೆ. ಅದಕ್ಕೆ ಕಾರಣವೂ ಇಲ್ಲದಿಲ್ಲ.

ಲಾಕ್​ಡೌನ್​ನಿಂದಾಗಿ ತಿಂಗಳುಗಟ್ಟಲೆ ಕೆಲಸ ಇಲ್ಲದೆ ಹಣವೂ ಇಲ್ಲದೆ ಸಿಕ್ಕಿಕೊಂಡು ಪರದಾಡುತ್ತಿದ್ದ ಕಾರ್ಮಿಕರಿಗೆ ತಮ್ಮ ಊರಿನ ಮುಖ ನೋಡಲು ಸರ್ಕಾರ ಅನುವು ಮಾಡಿಕೊಟ್ಟಿತು. ಆದರೆ, ಊರಿಗೆ ಹೋದ ಜನರಿಗೆ ಅಲ್ಲಿ ಮಾಡಲು ಕೆಲಸ ಇಲ್ಲದೆ ಅತ್ತ ಧರಿ ಇತ್ತ ಪುಲಿ ಎಂಬಂಥ ಸಂದರ್ಭ ಬಂದೊದಗಿತ್ತು. ಎಲ್ಲಾ ಕಾರ್ಮಿಕರಿಗೂ ಅವರವರ ಊರಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೊಡುವುದಾಗಿ ಸರ್ಕಾರ ಕೊಟ್ಟ ಭರವಸೆ ಬಹುತೇಕ ಕಡೆ ನೆನೆಗುದಿಯಲ್ಲೇ ಉಳಿಯಿತು.

ಇತ್ತ, ಬೆಂಗಳೂರಿನಲ್ಲಿ ಲಾಕ್ ಡೌನ್ ನಿಯಮ ಸಡಿಲಿಕೆಯಿಂದಾಗಿ ಮತ್ತೆ ಉದ್ಯಮ ವಲಯ ತೆರೆದುಕೊಂಡಿತು. ಕಾರ್ಖಾನೆಗಳು, ಕಟ್ಟಡ ನಿರ್ಮಾಣ ಚಟುವಟಿಕೆ ಗರಿಗೆದರಿದೆ. ಕಾರ್ಮಿಕರಿಗೆ ಕೈತುಂಬ ಕೆಲಸ ಸಿಗುತ್ತಿದೆ. ಜೂನ್ 1ರಿಂದ ಹೋಟೆಲ್ ಉದ್ಯಮವೂ ತೆರೆದುಕೊಳ್ಳುತ್ತಿದೆ. ದುಡಿಮೆ ನಂಬಿ ಬದುಕುವ ಜನರು ಬೆಂಗಳೂರಿನತ್ತ ಬರದೇ ಬೇರೆ ವಿಧಿ ಇಲ್ಲವಾಗಿದೆ.

ಲಾಕ್ ಡೌನ್ ಘೋಷಣೆಯಾದ ಬಳಿಕ ಬೆಂಗಳೂರಿನಿಂದ ಉತ್ತರ ಭಾರತೀಯರೂ ಸೇರಿ ಲಕ್ಷಾಂತರ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಹೊರಟುಹೋಗಿದ್ದರು. ಈಗ ಕರ್ನಾಟಕದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಬೆಂಗಳೂರಿಗೆ ಬಸ್ ಹತ್ತುತ್ತಿದ್ದಾರೆ.

Comments are closed.