ಕರ್ನಾಟಕ

ರಾಜ್ಯಕ್ಕೆ ವಾರದೊಳಗೆ ಮುಂಗಾರಿನ ಆಗಮನ: ಹವಾಮಾನ ಇಲಾಖೆ

Pinterest LinkedIn Tumblr

ಬೆಂಗಳೂರು: ಮುಂಗಾರು ಪೂರ್ವದಲ್ಲಿಯೇ ಕರ್ನಾಟಕಕ್ಕೆ ಉತ್ತಮ ಮಳೆಯಾಗುತ್ತಿದೆ. ಇದೀಗ ಮುಂಗಾರು ಮಳೆ ಕೂಡ 5 ದಿನ ಮೊದಲೇ ಕೇರಳ ತೀರ ಪ್ರವೇಶಿಸಲಿದ್ದು, ಒಂದು ವಾರದೊಳಗೆ ಕರ್ನಾಟಕ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.

ವಾಡಿಕೆಯಂತೆ ಮಾನ್ಸೂನ್‌ ಮಾರುತಗಳು ಕೇರಳಕ್ಕೆ ಪ್ರವೇಶಿಸಿದ ನಾಲ್ಕೈದು ದಿನದಲ್ಲಿಯೇ ಕರ್ನಾಟಕವನ್ನು ತಲುಪುತ್ತವೆ. ಹವಾಮಾನ ಇಲಾಖೆ ವರದಿಯಂತೆ ಮುಂಗಾರು ಮಳೆ ಇನ್ನೊಂದು ವಾರದೊಳಗೆ ರಾಜ್ಯವನ್ನು ಪ್ರವೇಶಿಸಲಿದೆ.

ಮೇ 31ರಿಂದ ಜೂನ್‌ 4ರವರೆಗೆ ನೈರುತ್ಯ ಭಾಗದಲ್ಲಿ ಕಡಿಮೆ ಒತ್ತಡ ಉಂಟಾಗಲಿದೆ. ಇದರಿಂದ ಮುಂಗಾರು ಮಳೆ ತರುವ ಮಾನ್ಸೂನ್‌ ಮಾರುತಗಳ ಚಲನೆ ತಡೆರಹಿತವಾಗಲಿದೆ ಎಂದು ಹವಾಮಾನ ಇಲಾಖೆ ಗುರುವಾರ ಪ್ರಕಟಣೆಯಲ್ಲಿ ತಿಳಿಸಿತ್ತು.

ಅರಬ್ಬಿ ಸಮುದ್ರದಲ್ಲಿ ಇನ್ನೊಂದು ವಾರಗಳ ಕಾಲ ಅಧಿಕ ಉಷ್ಣತೆ ಉಂಟಾಗುವ ಕಾರಣ, ಕಡಿಮೆ ಒತ್ತಡ ಏರ್ಪಡಲಿದೆ. ಇದರಿಂದ ವಾಯುಭಾರ ಕುಸಿತವಾಗುವ ಸಾಧ್ಯತೆ ಇದ್ದು, ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶುಕ್ರವಾರ ಕರ್ನಾಟಕದ ದಕ್ಷಿಣ ಒಳನಾಡು ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಲಿದೆ. ಕೇರಳ ಮತ್ತು ಲಕ್ಷದ್ವೀಪಗಳಲ್ಲಿ ಶನಿವಾರ ಮತ್ತು ಭಾನುವಾರ ಭಾರೀ ಮಳೆಯಾಗಲಿದೆ. ಕರ್ನಾಟಕದ ಕರಾವಳಿ ಭಾಗಕ್ಕೆ ಸೋಮವಾರ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

Comments are closed.