ಕರ್ನಾಟಕ

ಶಿವಮೊಗ್ಗದ ಸರಕಾರಿ ಮೆಗ್ಗಾನ್ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಚಿಕಿತ್ಸೆಗಳು ಲಭ್ಯ

Pinterest LinkedIn Tumblr


ಶಿವಮೊಗ್ಗ(ಮೇ. 18): ಜಿಲ್ಲೆಯ ಜನರಿಗೆ ಆರೋಗ್ಯದ ವಿಚಾರಕ್ಕೆ ಸಂಬಂಧಿಸಿದಂತೆ ಶುಭ ಸುದ್ಧಿಯೊಂದು ಬಂದಿದೆ. ಇಷ್ಟು ದಿನ ಹೃದಯ ಸಂಬಂಧಿ ಕಾಯಿಲೆಗಳಿಗೆ ಶಿವಮೊಗ್ಗ ಜಿಲ್ಲೆಯ ಜನರು ಬೆಂಗಳೂರು, ಮಂಗಳೂರು, ಉಡುಪಿ ಜಿಲ್ಲೆಗಳಿಗೆ ಚಿಕಿತ್ಸೆಗೆ ತೆರಳುತ್ತಿದ್ದರು. ಆದರೆ ಇನ್ನು ಮುಂದೆ ಈ ಸಮಸ್ಯೆ ಕಡಿಮೆಯಾಗಲಿದೆ. ಕಾರಣ ಶಿವಮೊಗ್ಗದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಚಿಕಿತ್ಸೆಗಳು ಜನರಿಗೆ ಸಿಗಲಿದೆ.

ಶಿವಮೊಗ್ಗ ಮೆಡಿಕಲ್ ಕಾಲೇಜಿನ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೇ 27 ರಿಂದ ಹೃದ್ರೋಗ ವಿಭಾಗದ ಹೊರ ರೋಗಿ ವಿಭಾಗವನ್ನು ಆರಂಭಿಸಲಾಗುತ್ತಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಒಪಿಡಿಯಲ್ಲಿ ಪ್ರತಿ ದಿನ 80 ರಿಂದ 100 ಮಂದಿ ಹೃದಯ ಸಂಬಂಧಿ ಖಾಯಿಲೆ ಇರುವ ರೋಗಿಗಳಿಗೆ ಸೂಕ್ತ ತಪಾಸಣೆ, ಸಲಹೆ ಮತ್ತು ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ.

ಹೃದ್ರೋಗ ತಜ್ಞರಾದ ಡಾ. ಪರಮೇಶ್ವರ ಎಸ್ ಮತ್ತು ಡಾ. ಮಹೇಶಮೂರ್ತಿ ಅವರು ಇಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಈಗಾಗಲೇ ಕಾರ್ಡಿಯಾಕ್ ಕ್ಯಾಥ್ಲ್ಯಾಬ್ ಆರಂಭಿಸಲು ಟೆಂಡರ್ ಕೂಡ ಕರೆಯಲಾಗದ್ದು, ಅಂತಿಮಗೊಳಿಸಲಾಗಿದೆ. ತಕ್ಷಣ ಸದರಿ ಕಂಪನಿಗೆ ಕಾರ್ಯಾದೇಶ ನೀಡಿ ಕ್ಯಾಥ್ಲ್ಯಾಬ್ ಪೂರ್ಣಗೊಳಿಸಲು ರಾಜ್ಯ ಸರ್ಕಾರದಿಂದ ಸೂಚನೆ ಕೊಡಿಸಲು ನಿರ್ಧರಿಸಲಾಗಿದೆ. ಆ ಬಳಿಕ ಹೃದಯಕ್ಕೆ ಸಂಬಂಧಿಸಿದ ಹೆಚ್ಚಿನ ಚಿಕಿತ್ಸೆಗಳಾದ ಆಂಜಿಯೋಗ್ರಾಮ್, ಆಂಜಿಯೋಪ್ಲಾಸ್ಟಿ, ಹೃದಯನಾಳಕ್ಕೆ ಸ್ಟಂಟ್ ಅಳವಡಿಕೆ, ಹೃದಯ ಕವಾಟಗಳ ಚಿಕಿತ್ಸೆ ಮತ್ತು ಹುಟ್ಟಿದಾಗಿನಿಂದ ಬಂದಂತಹ ಹೃದಯ ಖಾಯಿಲೆಗಳಿಗೆ ಚಿಕಿತ್ಸೆ ದೊರೆಯಲಿದೆ. ಇದರಿಂದಾಗಿ ಮಲೆನಾಡು ಭಾಗದ ಜನರಿಗೆ, ಅದರಲ್ಲೂ ಹೃದಯ ಸಂಬಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ಹೆಚ್ಚಿನ ಅನುಕೂಲವಾಗಿದೆ.

ಬಡ ಕುಟುಂಬದವರು ಹೃದಯ ಸಂಬಂಧಿ ಕಾಯಿಲೆಗೆ ತುತ್ತಾದರೆ, ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಆದರೆ, ಈಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಇಂತಹ ಚಿಕಿತ್ಸೆ ಸಿಕ್ಕರೆ, ಬಡವರಿಗೆ ಪ್ರಯೋಜನವಾಗಲಿದೆ. ಇದೇ ರೀತಿ ನರರೋಗ ವಿಭಾಗದಲ್ಲಿ ನರರೋಗ ತಜ್ಞರಾದ ಡಾ.ಕುಮಾರ್ ಸ್ಟ್ರೋಕ್, ಎಪಿಲೆಪ್ಸಿ, ನ್ಯೂರೋಪಥಿಗೆ ಸೂಕ್ತ ತಪಾಸಣೆ, ಸಲಹೆ ಮತ್ತು ಚಿಕಿತ್ಸೆ ನೀಡಲಿದ್ದಾರೆ.

ನರರೋಗಿಗಳಿಗೆ ಬೇಕಾದ ಇಎನ್ಎಂಜಿ, ಸಿಟಿ ಸ್ಕ್ಯಾನ್, ಎಂಆರ್​ಐ ಸ್ಕ್ಯಾನ್ ಮತ್ತು ರಕ್ತ ಪರೀಕ್ಷೆಗಳು ಇಲ್ಲಿಯೇ ದೊರೆಯಲಿವೆ. ಹೀಗಾಗಿ ಇನ್ನು ಹೆಚ್ಚಿನ ವೈದ್ಯಕೀಯ ಸೇವೆಗಳು ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಜನರಿಗೆ ಸಿಗಲಿದೆ.

Comments are closed.