ಕರ್ನಾಟಕ

ಲಾಕ್​ಡೌನ್: ವಾಟ್ಸಾಪ್​ನಲ್ಲೇ ಮಗನ ಮದುವೆ ವೀಕ್ಷಣೆ ಮಾಡಿದ ತಾಯಿ

Pinterest LinkedIn Tumblr


ಶಿವಮೊಗ್ಗ(ಮೇ 14): ಈ ಲಾಕ್​ಡೌನ್ ಅದ ನಂತರ ಯಾವ ರೀತಿ ಪರಿಸ್ಥಿತಿ ಬದಲಾವಣೆಯಾಗಿದೆ ಅಂದ್ರೆ ಯಾರು ಯಾರದೇ ಸಹಾಯಕ್ಕೂ ಹೋಗುವ ಹಾಗಿಲ್ಲ. ಯಾವುದೇ ಕಾರ್ಯಕ್ರಮಗಳಿಗೂ ತೆರಳುವ ಹಾಗಿಲ್ಲ ಅಂತಹ ಸ್ಥಿತಿ ಬಂದಿದೆ. ಇಂತಹದ್ದೇ ಒಂದು ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ಸಹ ನಡೆದಿದೆ. ಸ್ವಂತ ಮಗನ ಮದುವೆಗೆ ಹೋಗಲು ಸಾಧ್ಯವಾಗದೇ ಪಾಲಕರು ಮೊಬೈಲ್​ನಲ್ಲಿ ವೀಕ್ಷಣೆ ಮಾಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರಿನ ಲಕ್ಷ್ಮಿ ನಾರಾಯಣ ಜೋಯಿಸ್ ಹಾಗೂ ಅಲ್ಲಿನ ಗ್ರಾಮ ಪಂಚಾಯತ್ ಸದಸ್ಯೆ ಜಯಲಕ್ಷ್ಮೀ ಅವರ ಮಗ ಶಿವಶ್ಚಂದ್ರ ಜೋಯಿಸ್ ರವರ ವಿವಾಹ ಬುಧವಾರ (13 ರಂದು) ನಡೆದಿದೆ. ಬೆಳಗ್ಗೆ 7-30 ಕ್ಕೆ ಬೆಂಗಳೂರಿನ ಶೈಲಜಾ ಮತ್ತು ಚಂದ್ರಶೇಖರ್ ಅವರ ಪುತ್ರಿ ಕಾವ್ಯರೊಂದಿಗೆ ಮದುವೆಯಾಗಿದೆ. ಪುರೋಹಿತರು ಮತ್ತು ಆಯ್ದ ಬಂಧು ಮಿತ್ರರ ಸಮ್ಮುಖದಲ್ಲಷ್ಟೇ ನಡೆದ ಈ ಮದುವೆಗೆ ಯಾವುದೇ, ಗಟ್ಟಿ ಮೇಳಗಳಾಗಲಿ, ಶಾಮಿಯಾನ ಸಂಭ್ರಮವಾಗಲೀ ಇರಲಿಲ್ಲ. ಬೆಂಗಳೂರಿನ ಅಪಾರ್ಟ್​ಮೆಂಟ್​ನ ಕೆಳ ಅಂತಸ್ತಿನಲ್ಲಿ ನಡೆದಿರುವ ಈ ಮದುವೆ ವೈರಸ್ ಲಾಕ್ ಪರಿಣಾಮಕ್ಕೆ ಮತ್ತೊಂದು ಸಾಕ್ಷಿಯಾಗಿದೆ.

ಬೆಂಗಳೂರಿನಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಶಿವಶ್ಚಂದ್ರ ಜೋಯಿಸ್, ಭರತನಾಟ್ಯ ಕಲಾವಿದೆ ಹಾಗೂ ಶಿಕ್ಷಕಿ ಕಾವ್ಯಾಳ ಕೈಹಿಡಿದು, ಪುರೋಹಿತರು ‘ಮಾಂಗಲ್ಯಂ ತಂತು ನಾನೇನ’ ಎಂದು ಪಾಣಿಗ್ರಹಣ ಮಾಡಿಸಿದಾಗ 300 ಕಿಲೋ ಮೀಟರ್ ದೂರದಲ್ಲಿರುವ ಹೊಸನಗರದಲ್ಲಿ ಮನೆಯಲ್ಲೇ ಕುಳಿತು ವಾಟ್ಸಾಪ್​​ನಲ್ಲಿ ಬಂದ ವಿಡಿಯೋ ನೋಡಿ ಖುಷಿ ಪಟ್ಟಿದ್ದಾರೆ. ಅಷ್ಟೇ ಅಲ್ಲ, ಸಂಭ್ರಮದ ಕ್ಷಣಗಳನ್ನು ಕುಳಿತಲ್ಲೇ ಕಣ್ತುಂಬಿಕೊಂಡು ಅಕ್ಷತೆ ಹಾಕಿ ಆಶೀರ್ವದಿಸಿದ್ದಾರೆ.

ಒಟ್ಟಾರೆ ಜಗತ್ತಿನೆಲ್ಲೆಡೆ ಆವರಿಸಿ ಆತಂಕ ಉಂಟುಮಾಡಿರುವ ಕೊರೋನಾ ಮಹಾಮಾರಿ, ಗ್ರಾಮೀಣ ಭಾಗದ ಸಂಸ್ಕೃತಿ ಮತ್ತು ಸಂಪ್ರದಾಯದ ಮೇಲೂ ಪರಿಣಾಮ ಬೀರಿದ್ದು, ನೂರಾರು ಜನರನ್ನು ಸೇರಿಸಿ ಸಂಭ್ರಮದಿಂದ ನಡೆಸುತ್ತಿದ್ದ ಮದುವೆ ಈಗ ಕೇವಲ ನಿರ್ದಿಷ್ಟ ಬಂಧು ಮಿತ್ರರ ಸಮ್ಮುಖದಲ್ಲಿ ನಡೆಸಬೇಕಾಗಿದೆ.

Comments are closed.