ರಾಷ್ಟ್ರೀಯ

ಜೂ.30ರ ವರೆಗೆ ಪ್ರಯಾಣಿಕ ಭಾರತೀಯ ರೈಲು ಸೇವೆ ಸ್ಥಗಿತ

Pinterest LinkedIn Tumblr


ಹೊಸದಿಲ್ಲಿ: ಜೂನ್ 30ರ ವರೆಗೆ ಪ್ರಯಾಣಿಕ ರೈಲು ಸೇವೆಯನ್ನು ಭಾರತೀಯ ರೈಲ್ವೆ ಸ್ಥಗಿತಗೊಳಿಸಿದೆ. ಇದರಂತೆ ಮುಂಗಡವಾಗಿ ಕಾಯ್ದರಿಸಿದ ಎಲ್ಲ ಪ್ರಯಾಣಿಕ ರೈಲು ಟಿಕೆಟ್‌ಗಳನ್ನು ರದ್ದುಗೊಳಿಸಲಾಗಿದೆ.

ಮುಂಗಡ ಟಿಕೆಟ್ ರದ್ದುಗೊಂಡಿರುವ ಎಲ್ಲ ಪ್ರಯಾಣಿಕರಿಗೆ ರಿಫಂಡ್ ಮಾಡಲಾಗುವುದು ಎಂದು ರೈಲ್ವೆ ಗುರುವಾರ ಹೊಸದಾಗಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಹಾಗಿದ್ದರೂ ಲಾಕ್‌ಡೌನ್‌ನಿಂದಾಗಿ ವಿವಿಧ ಭಾಗಗಳಲ್ಲಿ ಸಿಲುಕಿರುವ ಲಕ್ಷಾಂತರ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ರಾಜ್ಯಗಳಿಗೆ ಕರೆದೊಯ್ಯುವ ಶ್ರಮಿಕ ರೈಲುಗಳು ಔಡಾಟವನ್ನು ನಡೆಸಲಿದೆ ಎಂದು ಸ್ಪಷ್ಟಪಡಿಸಿದೆ.

ಕೊರೊನಾ ವೈರಸ್ ವ್ಯಾಪಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜೂನ್ 30ರ ವರೆಗೆ ಪ್ರಯಾಣಿಕ ಸೇರಿದಂತೆ ಎಲ್ಲ ರೈಲು ಸೇವೆಗಳು ರದ್ದುಗೊಳಿಸಲಾಗಿದೆ. ಲೋಕಲ್, ಸಬರ್ಬನ್, ಮೇಲ್, ಎಕ್ಸ್‌ಪ್ರೆಸ್ ಸೇರಿದಂತೆ ಎಲ್ಲ ಪ್ರಯಾಣಿಕ ರೈಲು ಟಿಕೆಟ್‌ಗಳ ಬುಕ್ಕಿಂಗ್ ರದ್ದುಗೊಳಿಸಲಾಗಿದೆ.

ಪಿಟಿಐ ವರದಿ ಪ್ರಕಾರ ಕಳೆದ ತಿಂಗಳು ಲಾಕ್‌ಡೌನ್‌ ಜಾರಿಗೂ ಮೊದಲು ಬುಕ್ಕಿಂಗ್ ಮಾಡಿದ 94 ಲಕ್ಷ ಟಿಕೆಟ್‌ಗಳನ್ನು ರದ್ದುಗೊಳಿಸಿದ ಬಳಿಕ ರೈಲ್ವೆ ಸುಮಾರು 1,490 ಕೋಟಿ ರೂ.ಗಳನ್ನು ಮರು ಪಾವತಿ ಮಾಡಿತ್ತು. ಹಾಗೆಯೇ ಮಾರ್ಚ್ 22ರಿಂದ ಏಪ್ರಿಲ್ 14ರ ನಡುವೆ ಯೋಜಿಸಲಾದ ಪ್ರಯಾಣಕ್ಕಾಗಿ 830 ಕೋಟಿ ರೂ.ಗಳನ್ನು ರಿಫಂಡ್ ಮಾಡಿದೆ.

ಕೊರೊನಾ ವೈರಸ್ ಸರಪಳಿ ಮುರಿಯಲು ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಗೆ ಬರುವ ಮೂರು ದಿನಗಳ ಮೊದಲು (ಮಾರ್ಚ್ 22) ಎಲ್ಲ ಪ್ರಮಾಣಿಕ ರೈಲು ಸೇವೆಗಳನ್ನು ರದ್ದುಗೊಳಿಸಿತ್ತು.

ಆದರೆ ಭಾನುವಾರ ಪ್ರಯಾಣಿಕ ರೈಲುಗಳನ್ನು ಹಂತ ಹಂತವಾಗಿ ಪುನರಾರಂಭಿಸುವ ಯೋಜನೆಯನ್ನು ಘೋಷಿಸಿತ್ತು. ಲಾಕ್‌ಡೌನ್ ಮೂರನೇ ಹಂತ ಮುಗಿಯುವ ಮೊದಲೇ ನಿರ್ದಿಷ್ಟ ತಾಣಗಳಿಗೆ ಪ್ರಯಾಣಿಕ ರೈಲು ಸೇವೆಯನ್ನು ಪ್ರಾರಂಭಿಸಿತ್ತು. ಈ ಮೂಲಕ ದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಸರಕಾರ ಪ್ರಯತ್ನಿಸಿತ್ತು.

ಈ ವಿಶೇಷ ರೈಲುಗಳು ಮಂಗಳವಾರ ದೇಶದ15 ಪ್ರಮುಖ ನಗರಗಳಿಗೆ ಹೊರಟಿದ್ದವು. ರಾಷ್ಟ್ರ ರಾಜಧಾನಿ ದಿಲ್ಲಿಯಿಂದ ಕರ್ನಾಟಕ, ಮಹಾರಾಷ್ಟ್ರ, ಕೇರಳ, ಜಮ್ಮು, ಜಾರ್ಖಂಡ್, ಅಸ್ಸಾಂ, ಬಿಹಾರ, ಒಡಿಶಾ ಮುಂತಾದ ಪ್ರಮುಖ ರಾಜ್ಯಗಳನ್ನು ಸಂಪರ್ಕಿಸಿತ್ತು.

Comments are closed.