ರಾಷ್ಟ್ರೀಯ

ಶತಕ ಬಾರಿಸಿ, ಪಂದ್ಯಶ್ರೇಷ್ಠ ಗೌರವ ಪಡೆದರೂ ತಂಡದಿಂದ ಕೈಬಿಟ್ಟಿದ್ದೇಕೆಂದು ಧೋನಿಯನ್ನು ಪ್ರಶ್ನಿಸಬೇಕು: ಮನೋಜ್‌ ತಿವಾರಿ

Pinterest LinkedIn Tumblr


ಕೋಲ್ಕತಾ: ಬಂಗಾಳದಲ್ಲಿ ಛೋಟಾ ದಾದಾ ಎಂದೇ ಖ್ಯಾತಿ ಪಡೆದಿರುವ ಟೀಮ್‌ ಇಂಡಿಯಾದ ಅವಕಾಶ ವಂಚಿತ ಬ್ಯಾಟ್ಸ್‌ಮನ್‌ ಮನೋಜ್‌ ತಿವಾರಿ, ಭಾರತ ತಂಡದಿಂದ ತಮ್ಮನ್ನು ಹೊರಗಿಟ್ಟ ಬಗ್ಗೆ ಇತ್ತೀಚಿನ ವಿಡಿಯೋ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

“ಶತಕ ಬಾರಿಸಿ, ಪಂದ್ಯಶ್ರೇಷ್ಠ ಗೌರವ ಪಡೆದರೂ ಮುಂದಿನ 14 ಪಂದ್ಯಗಳವರೆಗೆ ನನಗೆ ಆಡಲು ಅವಕಾಶ ಸಿಗುವುದಿಲ್ಲ ಎಂದು ಕನಸಿನಲ್ಲೂ ನಾನು ಆಲೋಚಿಸಿರಲಿಲ್ಲ. ಆದರೆ, ಕ್ಯಾಪ್ಟನ್‌, ಕೋಚ್‌ ಮತ್ತು ಟೀಮ್‌ ಮ್ಯಾನೇಜ್ಮೆಂಟ್‌ನ ಆಲೋಚನೆ ಬೇರೆಯದ್ದೇ ಆಗಿತ್ತು ಎಂಬುದನ್ನು ನಾನು ಗೌರವಿಸುತ್ತೇನೆ. ಪ್ರತಿಯೊಬ್ಬ ಆಟಗಾರನೂ ಅದನ್ನು ಗೌರವಿಸಬೇಕು,” ಎಂದು ತಿವಾರಿ ಹೇಳಿದ್ದಾರೆ.

“ನನಗೆ ಮತ್ತೆ ಅವಕಾಶ ಸಿಗಲೇ ಇಲ್ಲ. ಆ ಸಂದರ್ಭದಲ್ಲಿ ಮಾಹಿಯನ್ನು ಈ ಬಗ್ಗೆ ಕೇಳುವಷ್ಟು ಧೈರ್ಯ ಇರಲಿಲ್ಲ. ಏಕೆಂದರೆ ಹಿರಿಯ ಆಟಗಾರರ ಮೇಲೆ ನಮಗೆ ಅಷ್ಟು ಗೌರವವಿತ್ತು. ಹೀಗಾಗಿ ಪ್ರಶ್ನಿಸಲು ಹಿಂಜರಿಯುತ್ತಿದ್ದೆವು. ಆದ್ದರಿಂದಲೇ ಧೋನಿಯನ್ನು ನನ್ನನ್ನು ತಂಡದಿಂದ ಕೈಬಿಟ್ಟಿದ್ದೇಕೆಂದು ಈವರೆಗೆ ಪ್ರಶ್ನೆ ಮಾಡಿಲ್ಲ,” ಎಂದು ವಿಡಿಯೋ ಸಂದರ್ಶನದ ವೇಳೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಅಷ್ಟೇ ಅಲ್ಲದೆ ಧೋನಿ ಐಪಿಎಲ್‌ ಟೂರ್ನಿಯಲ್ಲಿ ರೈಸಿಂಗ್‌ ಪುಣೆ ಸೂಪರ್‌ ಜಯಂಟ್ಸ್‌ ತಂಡದ ಭಾಗವಾಗಿದ್ದಾಗಲೂ ತಮ್ಮನ್ನು ತಂಡದಿಂದ ಹೊರಗಿಟ್ಟಿದ್ದೇಕೆ ಎಂದು ಪ್ರಶ್ನೆ ಮಾಡುವುದು ಬಾಕಿ ಇದೆ ಎಂದಿದ್ದಾರೆ. ಅಂದು ಐಪಿಎಲ್‌ ಟೂರ್ನಿಯಲ್ಲಿರುವ ಒತ್ತಡವನ್ನು ಅರಿತು ಸುಮ್ಮನಾಗಿದ್ದಾಗಿ ತಿವಾರಿ ಹೇಳಿಕೊಂಡಿದ್ದಾರೆ.

ವೆಸ್ಟ್‌ ಇಂಡೀಸ್‌ ವಿರುದ್ಧ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಶತಕ ಬಾರಿಸಿದ್ದ ಮನೋಜ್‌ ತಿವಾರಿ ಅವರನ್ನು ನಂತರದ ಸರಣಿಯಿಂದ ಕೈಬಿಡಲಾಗಿತ್ತು. ಕೇವಲ ಬೆರಳೆಣಿಕೆಯ ಅವಕಾಶಗಳನ್ನಷ್ಟೇ ಪಡೆದು ತಮ್ಮ ಸಾಮರ್ಥ್ಯ ಅನಾವರಣ ಪಡಿಸುವ ಅವಕಾಶದಿಂದ ವಂಚಿತರಾಗಿದ್ದರು.

“ಭವಿಷ್ಯದಲ್ಲಿ ಖಂಡಿತಾ ಈ ಬಗ್ಗೆ ಧೋನಿಯನ್ನು ಪ್ರಶ್ನಿಸುತ್ತೇನೆ,” ಎಂದು ‘ಲಾಕ್‌ ಡೌನ್‌ ಬಟ್‌ ನಾಟ್‌ ಔಟ್‌’ ಯ್ಯೂಟ್ಯೂಬ್‌ ವಿಡಿಯೋದಲ್ಲಿ ತಿವಾರಿ ಹೇಳಿಕೊಂಡಿದ್ದಾರೆ. ಇದೇ ವೇಳೆ ಶ್ರೇಯಸ್‌ ಅಯ್ಯರ್‌ ಮತ್ತು ಪೃಥ್ವಿ ಶಾ ಟೀಮ್‌ ಇಂಡಿಯಾದ ಭವಿಷ್ಯದ ತಾರೆಗಳು ಎಂದು ಕರೆದಿದ್ದಾರೆ.

“ಶ್ರೇಯಸ್‌ ಕೆಲ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದರೂ ಅವರನ್ನು ತಂಡದಲ್ಲಿ ಮುಂದುವರಿಸಬೇಕು. ಅವರೊಟ್ಟಿಗೆ ಪೃಥ್ವಿ ಶಾ ಕೂಡ ತಂಡದಲ್ಲಿ ಆಡಬೇಕು. ಅವರು ತಮ್ಮೊಳಗಿನ ಕೋಪ ನಿಯಂತ್ರಣದಲ್ಲಿ ಇಟ್ಟು, ಶಿಸ್ತನ್ನು ಮೈಗೂಡಿಸಿಕೊಂಡರೆ ಭಾರತ ತಂಡದಲ್ಲಿ ದೀರ್ಘಕಾಲದವರೆಗೆ ಆಡುವುದು ನಿಶ್ಚಿತ,” ಎಂದು ಹೇಳಿದ್ದಾರೆ.

34 ವರ್ಷದ ಅನುಭವಿ ಬಲಗೈ ಬ್ಯಾಟ್ಸ್‌, ಈ ಬಾರಿಯ ರಣಜಿ ಟ್ರೋಫಿ ಟೂರ್ನಿಯಲ್ಲಿ ಬಂಗಾಳ ತಂಡವನ್ನು ತಮ್ಮ ನಾಯಕತ್ವದಲ್ಲಿ ಫೈನಲ್‌ಗೆ ಕರೆದೊಯ್ದಿದ್ದರು. ಅಷ್ಟೇ ಅಲ್ಲದೆ ವೃತ್ತಿ ಬದುಕಿನ ಚೊಚ್ಚಲ ಪ್ರಥಮದರ್ಜೆ ತ್ರಿಶತಕವನ್ನೂ ಬಾರಿಸಿದ್ದರು. ತಿವಾರಿ ಭಾರತ ತಂಡದ ಪರ 12 ಒಡಿಐಗಳನ್ನು ಆಡಿದ್ದು, ಒಂದು ಶತಕ ಸೇರಿದಂತೆ 287 ರನ್‌ಗಳನ್ನು ಗಳಿಸಿದ್ದಾರೆ. ಜೊತೆಗೆ 3 ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನೂ ಆಡಿದ್ದಾರೆ. ಆದರೆ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ 125 ಪಂದ್ಯಗಳಲ್ಲಿ 50.36ರ ಸರಾಸರಿಯಲ್ಲಿ 8,965 ರನ್‌ಗಳನ್ನು ಬಾರಿಸಿದ್ದಾರೆ. 303* ಅವರ ವೈಯಕ್ತಿಕ ಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶನವಾಗಿದೆ.

Comments are closed.