ಕರ್ನಾಟಕ

ಅಡಿಕೆಗೆ ಹಿಂಗಾರ ತಿನ್ನುವ ಹುಳು ರೋಗ

Pinterest LinkedIn Tumblr


ಶಿವಮೊಗ್ಗ: ತೀರಾ ಇತ್ತೀಚಿನವರೆಗೂ ಕೊಳೆ ರೋಗ, ಹಿಡಿಮುಂಡಿಗೆ ರೋಗ, ನುಸಿ ರೋಗ ಮುಂತಾದ ರೋಗಗಳಿಂದ ತಮ್ಮ ಅಡಕೆ ಬೆಳೆಯನ್ನು ಸಂರಕ್ಷಣೆ ಮಾಡಿಕೊಳ್ಳುತ್ತಿದ್ದ ಮಲೆನಾಡಿನ ರೈತರಿಗೆ ಇದೀಗ ಹೊಸ ಸಮಸ್ಯೆಯೊಂದು ತಲೆದೋರಿದೆ. ಕಾಣದಂತೆಯೇ ತಮ್ಮ ವರ್ಷದ ಕೂಳು ಕಣ್ಮರೆಯಾಗುತ್ತಿದ್ದು, ಇದರಿಂದಾಗಿ ಮಲೆನಾಡಿನ ರೈತರು ಇದೀಗ ತೀರ್ಥಹಳ್ಳಿಯ ಸೀಬಿನಕೆರೆಯಲ್ಲಿರುವ ಅಡಿಕೆ ಸಂಶೋಧನಾ ಕೇಂದ್ರದ ಕದ ತಟ್ಟಿದ್ದಾರೆ.

ಶಿವಮೊಗ್ಗ ಸೇರಿದಂತೆ ಮಲೆನಾಡು ಭಾಗದ ಅಡಿಕೆ ಬೆಳೆಗಾರರನ್ನು ಹೊಸ ಸಮಸ್ಯೆ ಕಾಡಲಾರಂಭಿಸಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಅಡಿಕೆ ಹಿಂಗಾರ ತಿನ್ನುವ ಹುಳು ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಎಲ್ಲ ಪ್ರದೇಶಕ್ಕೂ ವೇಗವಾಗಿ ಆಕ್ರಮಿಸುವ ಲಕ್ಷಣ ಹೊಂದಿದೆ. ಅಡಿಕೆ ಹಿಂಗಾರದ ಎಳಸು ಗೊಂಚಲುಗಳ ಮೇಲೆ ದಾಳಿ ನಡೆಸುವ ಜಾತಿಯ ಹುಳು ಇದಾಗಿದ್ದು, ಆಕ್ರಮಣಶೀಲ ಸ್ವಭಾವ ಹೊಂದಿದೆ. ಗೂಡು ಕಟ್ಟಿ ಹಿಂಗಾರದ ರಸ ಹೀರುವ ಹುಳು ಬಹಳ ಅಪಾಯಕಾರಿಯಾಗಿದ್ದು, ಹಿಂಗಾರದ ಎಸಳುಗಳನ್ನು ಹುಳು ಕೆರೆದು ತಿನ್ನುವುದರಿಂದ ಹಿಂಗಾರ ಕಂದುಬಣ್ಣಕ್ಕೆ ತಿರುಗಿ ಮೊಗ್ಗುಗಳು ಉದುರುತ್ತವೆ. ನಿಯಂತ್ರಣಕ್ಕೆ ಔಷಧ ಸಿಂಪಡಣೆ ಮಾಡದಿದ್ದರೆ ಹಿಂಗಾರ ತುಂಬೆಲ್ಲಾ ಹುಳು ಗೂಡು ಕಟ್ಟುವುದರಿಂದ ಹಿಂಗಾರ ಒಣಗಿ ಸಾಯುತ್ತಿದೆ. ಹುಳು ಬಾಧೆಯಿಂದ ಹಿಂಗಾರ ಒಣಗಿದೆ ಎಂಬುದು ಗೊತ್ತಾಗದೆ ಫಸಲು ಹಾಳಾಗುತ್ತಿದ್ದು, ರೈತರು ಇದೀಗ ಹಾನಿಯಾದ ಹಿಂಗಾರದ ಮಾದರಿ ತೆಗೆದುಕೊಂಡು ಅಡಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ಬಳಿ ಬಂದು ಪರಿಹಾರ ಸೂಚಿಸುವಂತೆ ಕೇಳುತ್ತಿದ್ದಾರೆ.

ಹಿಂಗಾರ ಒಣಗುವ ರೋಗವು ಪ್ರಮುಖವಾಗಿ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಸವಾನಿ, ದೇವಂಗಿ, ತೂದೂರು, ಗಬಡಿ, ಹೆಗ್ಗೋಡು, ಮೇಗರವಳ್ಳಿ ಭಾಗದಲ್ಲಿ ಹೆಚ್ಚಾಗಿ ಕಂಡು ಬಂದಿದ್ದು, ನಿಯಂತ್ರಣಕ್ಕೆ ಔಷಧ ಬಳಸದಿದ್ದರೆ ಅಡಿಕೆ ಫಸಲು ಸಿಗುವುದು ತುಂಬಾ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶಾವರಿ ಅಡಿಕೆಗೆ ಕಂಡು ಬಂದಿರುವ ಹಿಂಗಾರ ಒಣಗುವ ರೋಗ ಸಾಮೂಹಿಕವಾಗಿ ವ್ಯಾಪಿಸುವ ಸಾಧ್ಯತೆ ಹೆಚ್ಚಿದೆ. ಅಡಿಕೆ ಹಿಂಗಾರಿಗೆ ಹೊಸ ಜಾತಿಯ ಹುಳ ತಗುಲಿಕೊಂಡಿದ್ದು ಮಾಹಿತಿ ಲಭ್ಯವಾಗುತ್ತಿದ್ದಂತೆ ತೀರ್ಥಹಳ್ಳಿ ಅಡಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಹೆಚ್ಚಿನ ಸಂಶೋಧನೆಗೆ ಮುಂದಾಗಿದ್ದಾರೆ. ಜೊತೆಗೆ ಕೀಟ ನಿಯಂತ್ರಣಕ್ಕಾಗಿ ಸಂಶೋಧನಾ ವಿಜ್ಞಾನಿಗಳು ತಾತ್ಕಾಲಿಕ ಔಷಧ ಕ್ರಮವನ್ನು ಸಹ ಸೂಚಿಸಿದ್ದು, ಈಗಾಗಲೇ ಬೆಂಗಳೂರಿನಲ್ಲಿರುವ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಒದಗಿಸಲಾಗಿದೆ ಎಂದು ಕೃಷಿ ವಿವಿಯ ಪ್ರಾಧ್ಯಾಪಕರಾದ ಡಾ.ರವಿಕುಮಾರ್ ಹೇಳುತ್ತಾರೆ.

ಶಾಸಕ ಹಾಗೂ ಅಡಿಕೆ ಬೆಳೆಗಾರರ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ ಆರಗ ಜ್ಞಾನೇಂದ್ರ ಅವರು, ಹುಳಗಳ ನಾಶಕ್ಕಾಗಿ ಅಡಿಕೆ ಮರಗಳಿಗೆ ಔಷಧ ಸಿಂಪಡಣೆಗೆ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಮತ್ತು ಅಡಿಕೆ ಬೆಳೆಗಾರರ ರಕ್ಷಣೆಗೆ ನಿಲ್ಲುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಹಿಂಗಾರ ಕತ್ತರಿಸುವ ಸಂದರ್ಭದಲ್ಲಿ ಮತ್ತು ಹಿಂಗಾರ ಒಣಗುವ ಸಂದರ್ಭದಲ್ಲಿ ಈ ರೋಗಕ್ಕೆ ಕಾರಣವಾಗುವ ಹುಳುಗಳ ಬಗ್ಗೆ ಗಮನಿಸಿ ತಜ್ಞರ ಗಮನಕ್ಕೆ ಕೂಡ ತರಲು ಅಡಿಕೆ ಬೆಳೆಗಾರರು ಕೂಡ ಈಗಾಗಲೇ ನಿರ್ಧರಿಸಿದ್ದಾರೆ.

ಒಟ್ಟಾರೆ ಮಳೆಗಾಲದಲ್ಲಿ ಕೊಳೆರೋಗ ಬಾಧೆಯಿಂದ ಅಡಿಕೆ ಫಸಲು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದ ರೈತರಿಗೆ ಬೇಸಿಗೆಯಲ್ಲಿ ಹಿಂಗಾರ ಉಳಿಸಿಕೊಳ್ಳುವ ಸಂಕಷ್ಟ ಎದುರಾಗಿದೆ. ಶಿಲೀಂದ್ರದಿಂದ ಬರುವ ಹಿಂಗಾರ ಒಣಗುವ ರೋಗದ ಜೊತೆಗೆ ಹಿಂಗಾರ ತಿನ್ನುವ ಹುಳು ಕಂಡುಬಂದಿರುವುದು ಅಡಿಕೆ ಬೆಳೆಗೆ ಹೊಸ ಸವಾಲಿನಂತಿದ್ದು ಅಡಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಇದಕ್ಕೆ ಶೀಘ್ರವೇ ಶಾಶ್ವತ ಪರಿಹಾರ ಸೂಚಿಸಬೇಕಿದೆ.

Comments are closed.