ಹೈದರಾಬಾದ್: ವಯಸ್ಸಾದ ವ್ಯಕ್ತಿಯನ್ನು ಮದುವೆಯಾಗಲು ಇಷ್ಟವಿಲ್ಲದೆ ಮದುವೆಗೆ ಇನ್ನೂ ಮೂರು ದಿನ ಇರುವಾಗಲೇ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಲಾಲಾಪೇಟ್‍ನಲ್ಲಿ ನಡೆದಿದೆ.
ಲಾಲಪೇಟೆ ಮೂಲದ 22 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಯವರು ಮದುವೆ ಕೆಲಸದ ಬ್ಯುಸಿಯಲ್ಲಿದ್ದಾಗ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಏನಿದು ಪ್ರಕರಣ?
ಯುವತಿಗೆ ಮನೆಯವರು ವಯಸ್ಸಾದ ವ್ಯಕ್ತಿಯ ಜೊತೆ ಮದುವೆಯನ್ನು ನಿಗದಿ ಮಾಡಿದ್ದರು. ಯುವತಿ ತನಗೆ ಇಷ್ಟವಿಲ್ಲ ಎಂದು ಹೇಳಿದರು ಕೇಳದೆ ಆತನೊಂದಿಗೆ ನಿಶ್ಚಿತಾರ್ಥ ಕೂಡ ಮಾಡಿದ್ದರು. ಫೆಬ್ರವರಿ 13 ರಂದು ಮದುವೆ ಕೂಡ ಫಿಕ್ಸ್ ಆಗಿತ್ತು. ಯುವತಿ ಮನೆಯವರು ಮದುವೆಗೆ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದರು.
ಮನೆಯವರು ಮದುವೆಗೆ ಬೇಕಾದ ಸಮಾನುಗಳನ್ನು ಖರೀದಿಸಲು ಮನೆಯಿಂದ ಹೊರ ಹೋಗಿದ್ದಾರೆ. ಈ ವೇಳೆ ಯುವತಿ ಮನೆಯಲ್ಲಿ ಒಬ್ಬಳೇ ಇದ್ದಳು. ಆಗ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಾತ್ರಿ 9 ಗಂಟೆ ಸುಮಾರಿಗೆ ಮನೆಯವರು ಶಾಪಿಂಗ್ ಮುಗಿಸಿ ಮನೆಗೆ ಹಿಂದಿರುಗಿ ಬಂದಿದ್ದಾರೆ. ಬಾಗಿಲನ್ನು ಎಷ್ಟು ಬಾರಿ ಬಡಿದರು ಯುವತಿ ಬಾಗಿಲು ತೆಗೆಯಲಿಲ್ಲ. ಕೊನೆಗೆ ಯುವತಿಯ ತಾಯಿ ಪಕ್ಕದ ಮನೆಯವರನ್ನು ಕರೆದುಕೊಂಡು ಬಂದು ಬಾಗಿಲು ಒಡೆದು ಮನೆಯೊಳಗೆ ಹೋಗಿದ್ದಾರೆ.
ಅಲ್ಲಿ ಮಗಳನ್ನು ನೇಣು ಬಿಗಿದ ಸ್ಥಿತಿಯಲ್ಲಿ ನೋಡಿ ಮನೆಯವರು ಶಾಕ್ ಆಗಿದ್ದಾರೆ. ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಮೃತಳ ತಾಯಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.