ಕರ್ನಾಟಕ

ವಿದೇಶಿ ಕೆಲಸದ ಆಸೆಗೆ 25 ಲಕ್ಷ ಕಳೆದುಕೊಂಡ ಟೆಕ್ಕಿ- ಮನೆಬಿಟ್ಟು ಹೋದ ಹೆಂಡತಿ

Pinterest LinkedIn Tumblr


ಬೆಂಗಳೂರು: ಟೆಕ್ಕಿಯೊಬ್ಬ ವಿದೇಶಿ ಕೆಲಸದ ಮೋಹಕ್ಕೆ ಬರೋಬ್ಬರಿ 25 ಲಕ್ಷ ರೂ. ಕಳೆದುಕೊಂಡಿದ್ದು, ಪತಿಯ ಹುಚ್ಚಾಟ ಕೇಳಿ ಪತ್ನಿ ಮನೆಬಿಟ್ಟು ಹೋಗಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ವೈಟ್‌ಫೀಲ್ಡ್‌ನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ ಟೆಕ್ಕಿಯೊಬ್ಬ ಪ್ರೀತಿಸಿ ಮದುವೆ ಆಗಿದ್ದನು. ಬ್ಯಾಂಕಿನಲ್ಲಿ ಸಾಲ ಮಾಡಿ ಗ್ರ್ಯಾಂಡ್ ಆಗಿ ಮದುವೆ ಮಾಡ್ಕೊಂಡು ಪ್ರತಿಷ್ಠಿತ ಏರಿಯಾದಲ್ಲೇ ಟೆಕ್ಕಿ ಪ್ಲಾಟ್ ಖರೀದಿ ಮಾಡಿದ್ದನು. ನಂತರ ಕಡಿಮೆ ಸಂಬಳಕ್ಕೆ ಕೆಲಸ ಮಾಡಿದರೆ ಸಾಲ ತೀರಿಸೋದು ಯಾವಾಗ ಎಂದು ಪ್ಲಾನ್ ಮಾಡಿದ ಟೆಕ್ಕಿ, ಕೆಲಸಕ್ಕೆ ರಾಜೀನಾಮೆ ನೀಡಿ ಆನ್‍ಲೈನ್‍ನಲ್ಲಿ ವಿದೇಶದಲ್ಲಿ ಕೆಲಸ ಹುಡುಕಾಟ ಶುರುಮಾಡಿದ್ದನು.

ಕೊನೆಗೆ ಆ ಟೆಕ್ಕಿಗೆ ದುಬೈನಲ್ಲಿ ಕೆಲಸದ ಆಫರ್ ಬಂದಿತ್ತು. ತಿಂಗಳಿಗೆ ಲಕ್ಷ ಲಕ್ಷ ಸಂಬಳ ಉಳಿದುಕೊಳ್ಳಲು ಐಷಾರಾಮಿ ಬಂಗಲೆ, ಕಾರು ಅಂತೆಲ್ಲಾ ಆನ್‍ಲೈನ್‍ನಲ್ಲೇ ಮಾತುಕತೆ ನಡೆದಿತ್ತು. ಆದ್ರೆ ಈ ಕೆಲಸ ಪಡೆಯೋಕೆ ನೀವು 25 ಲಕ್ಷ ಹಣ ಠೇವಣಿ ಇಡಬೇಕು ನಂತರ ಅದನ್ನು ವಾಪಸ್ಸು ನೀಡಲಾಗುವುದು ಎಂದು ಆಫರ್ ಕೊಟ್ಟವರು ಹೇಳಿದ್ದರು.

ಅವರ ಮಾತನ್ನ ನಂಬಿದ ಟೆಕ್ಕಿ ಮತ್ತೆ ವಿವಿಧ ಬ್ಯಾಂಕುಗಳಲ್ಲಿ ಸಾಲ ಮಾಡಿ 25 ಲಕ್ಷ ರೂ. ಹಣ ನೀಡಿದ್ದನು. ಹಣ ತೆಗೆದುಕೊಂಡ ಆಸಾಮಿಗಳು ಈಗ ಫೋನ್ ನಾಟ್ ರಿಚಬಲ್ ಆಗಿದ್ದು, ತಾನು ಮೋಸ ಹೋಗಿರೋದು ಗೊತ್ತಾದ ಟೆಕ್ಕಿ ಆ ಹಣದ ಮೂಲವನ್ನು ಪತ್ತೆ ಮಾಡಲು ಡಾರ್ಕ್ ವೇಬ್‍ಗೆ ಹೋಗಿ ಇಬ್ಬರು ಹ್ಯಾಕರ್ಸ್‍ಗಳನ್ನು ಸಂಪರ್ಕ ಮಾಡಿದ್ದನು. ಅವರು ಹಣ ವಾಪಸ್ ಮಾಡುವಂತೆ ಮಾಡುತ್ತೇವೆ ಅದಕ್ಕೆ 2 ಲಕ್ಷ ರೂ. ಖರ್ಚಾಗುತ್ತೆ ಅಂದಿದ್ದರು. ಕೊನೆಗೆ ಆ ಹಣವನ್ನು ಹ್ಯಾಕರ್ಸ್‍ಗಳಿಗೆ ನೀಡಿದ್ದನು.

ಗ್ರ್ಯಾಂಡ್ ಆಗಿ ಮದುವೆ ಆಗಿ, ಐಷಾರಾಮಿ ಬಂಗಲೆ, ವಿದೇಶ ಕೆಲಸ ಅಂತ ಟೆಕ್ಕಿ ಸಾಲಮಾಡಿಕೊಂಡಿದ್ದನು. ಆದರೆ ಟೆಕ್ಕಿಯ ವಿದೇಶದ ಕೆಲಸದ ಮೋಹಕ್ಕೆ ಆತನ ಪತ್ನಿ ಬೇಸತ್ತು ಹೋಗಿದ್ದಳು. ಪತಿಯ ಆನ್‍ಲೈನ್ ಹುಚ್ಚಾಟ, ಲಕ್ಷಾಂತರ ಸಾಲದ ಬಗ್ಗೆ ತಿಳಿದ ಪತ್ನಿ ಪತಿಯನ್ನು ಬಿಟ್ಟು ಹೋಗಿದ್ದಾಳೆ.

Comments are closed.