ಕರ್ನಾಟಕ

ಹೇಳಿಕೆಗೆ ಬದ್ದನಿದ್ದೇನೆ: ಕ್ಷಮೆ ಕೇಳುವುದಿಲ್ಲ- ಅನಂತಕುಮಾರ್‌ ಹೆಗಡೆ

Pinterest LinkedIn Tumblr


ಹೊಸದಿಲ್ಲಿ: ಮಹಾತ್ಮಾ ಗಾಂಧಿ ಬಗ್ಗೆ ನೀಡಿದ್ದ ಹೇಳಿಕೆ ಸಂಬಂಧ ಎಎನ್‌ಐ ಸುದ್ದಿ ಸಂಸ್ಥೆಗೆ ಸ್ಪಷ್ಟನೆ ನೀಡಿರುವ ಉತ್ತರ ಕನ್ನಡ ಸಂಸದ ಅನಂತಕುಮಾರ್‌ ಹೆಗಡೆ, “ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ,” ಎಂದಿದ್ದಾರೆ. ಈ ಮೂಲಕ ಕ್ಷಮೆ ಕೇಳಲು ಅವರು ನಿರಾಕರಿಸಿದ್ದಾರೆ.

“ಫೆಬ್ರವರಿ 1, 2020 ರಂದು ನೀಡಿದ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ಯಾವುದೇ ರಾಜಕೀಯ ಪಕ್ಷದ ಬಗ್ಗೆಯಾಗಲಿ, ಮಹಾತ್ಮಾ ಗಾಂಧಿ ಅಥವಾ ಯಾರ ಬಗ್ಗೆಯೂ ನಾನು ಯಾವುದೇ ಉಲ್ಲೇಖಗಳನ್ನು ಮಾಡಿಲ್ಲ. ನಾನು ಕೇವಲ ಸ್ವಾತಂತ್ರ್ಯ ಹೋರಾಟವನ್ನು ವರ್ಗೀಕರಿಸಲು ಪ್ರಯತ್ನಿಸುತ್ತಿದ್ದೆ,” ಎಂದು ಸ್ಪಷ್ಟಪಡಿಸಿದ್ದಾರೆ.

“ಈ ಭಾಷಣ ಸಾರ್ವಜನಿಕವಾಗಿ ಲಭ್ಯವಿದೆ. ಯಾರಾದರೂ ನೋಡಬೇಕೆಂದು ಬಯಸಿದಲ್ಲಿ ಆನ್‌ಲೈನ್‌ ಮತ್ತು ನನ್ನ ವೆಬ್‌ಸೈಟ್‌ನಲ್ಲಿ ಇದೆ. ಮಹಾತ್ಮಾ ಗಾಂಧಿ ಮತ್ತು ಪಂಡಿತ್‌ ನೆಹರೂ ಬಗ್ಗೆ ನಾನು ಒಂದೇ ಒಂದು ಪದವನ್ನೂ ಹೇಳಿಲ್ಲ. ನಾನು ನಮ್ಮ ಸ್ವಾತಂತ್ರ್ಯ ಹೋರಾಟದ ಬಗ್ಗೆ ಚರ್ಚಿಸುತ್ತಿದ್ದೆ ಅಷ್ಟೇ,” ಎಂದು ಮಾಜಿ ಕೇಂದ್ರ ಸಚಿವರೂ ಆಗಿರುವ ಅನಂತಕುಮಾರ್‌ ಹೆಗಡೆ ವಿವರಿಸಿದ್ದಾರೆ.

“ಎಲ್ಲಾ ಸಂಬಂಧಿತ ಮಾಧ್ಯಮಗಳ ವರದಿಗಳು ಸುಳ್ಳು. ಚರ್ಚೆ ನಡೆಯುತ್ತಿರುವ ವಿಷಯದ ಬಗ್ಗೆ ನಾನು ಏನೂ ಹೇಳಿಲ್ಲ. ಇದು ಅನಗತ್ಯ ವಿವಾದ,” ಎಂದು ಮಾಧ್ಯಮಗಳ ಮೇಲೆ ಅವರು ಆರೋಪ ಹೊರಿಸಿದ್ದಾರೆ.

Comments are closed.