ಕರ್ನಾಟಕ

ಕೊರೊನ ವೈರಸ್: ಕೇರಳದ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ

Pinterest LinkedIn Tumblr


ಬೆಂಗಳೂರು: ಕೇರಳದಲ್ಲಿ ಕೊರೊನವೈರಸ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಾದ ಮಂಗಳೂರು, ಕೊಡಗು, ಚಾಮರಾಜನಗರ, ಮೈಸೂರಿನಲ್ಲಿ ರಾಜ್ಯ ಸರ್ಕಾರ ಕಟ್ಟೆಚ್ಚರ ಘೋಷಿಸಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಜಿಲ್ಲೆಗಳಲ್ಲಿ ಕಣ್ಗಾವಲು ಚುರುಕುಗೊಳಿದ್ದು, ಜನರು ವೈರಸ್‍ನ ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣ ರಾಜ್ಯ ಕಣ್ಗಾವಲು ಘಟಕಕ್ಕೆ ತಿಳಿಸುವಂತೆ ಸೂಚಿಸಿದೆ.

‘ವೈರಸ್ ನಿಭಾಯಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ. ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ(ಎನ್‍ಐವಿ)ಗೆ ಕಳುಹಿಸಲಾದ 44 ಮಾದರಿಗಳ ಪೈಕಿ 29 ಮಾದರಿಗಳು ಪರೀಕ್ಷೆಯಲ್ಲಿ ಧೃಡಪಟ್ಟಿಲ್ಲ. ಉಳಿದ 15 ಮಾದರಿಗಳ ಪರೀಕ್ಷಾ ವರದಿಯನ್ನು ಕಾಯಲಾಗುತ್ತಿದೆ’ ಎಂದು ರಾಜ್ಯ ಸಾಂಕ್ರಾಮಿಕ ರೋಗಗಳ ವಿಭಾಗದ ಜಂಟಿ ನಿರ್ದೇಶಕ ಬಿ.ಜಿ.ಪ್ರಕಾಶ್ ತಿಳಿಸಿದ್ದಾರೆ.

ರಾಜ್ಯ ಆರೋಗ್ಯ ಇಲಾಖೆ ಕಣ್ಗಾವಲು ಮತ್ತು ನಿಯಂತ್ರಣ ಕ್ರಮಗಳನ್ನು ಬಲಪಡಿಸಿದೆ ಎಂದು ತಿಳಿಸಿದ ಅವರು, ಇಲ್ಲಿಯವರೆಗೆ, ಕರೋನವೈರಸ್ ಪೀಡಿತ ದೇಶಗಳಿಂದ ಆಗಮಿಸಿರುವ 51 ಪ್ರಯಾಣಿಕರನ್ನು ತಪಾಸಣೆ ಮಾಡಲಾಗಿದೆ. 46 ಮಂದಿ ಮನೆಗಳಲ್ಲಿ ಪ್ರತ್ಯೇಕವಾಗಿದ್ದಾರೆ. ನಾಲ್ವರು ಮತ್ತೆ ವಿದೇಶಗಳಿಗೆ ತೆರಳಿದ್ದಾರೆ. ಒಬ್ಬ ವ್ಯಕ್ತಿಯನ್ನು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್ಸ್)ಯ ಪ್ರತ್ಯೇಕ ವಾರ್ಡ್ ನಲ್ಲಿ ದಾಖಲಿಸಲಾಗಿದೆ.

ಈ ಮಧ್ಯೆ, ಬೆಂಗಳೂರಿನ ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆ(ಆರ್ ಜಿಐಸಿಡಿ)ಗೆ ಆತಂಕದಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ‘ಆಸ್ಪತ್ರೆಗೆ ಭೇಟಿ ನೀಡಿದವರನ್ನು ತಪಾಸಣೆ ನಡೆಸಿ, ರಕ್ತ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಸೋಮವಾರ ಕೇವಲ ಮೂರು ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇವರನ್ನು 28 ದಿನಗಳ ಕಾಲ ಮನೆಗಳಲ್ಲಿ ಪ್ರತ್ಯೇಕವಾಗಿರಲು ಸೂಚಿಸಲಾಗಿದೆ’ ಎಂದು ಆರ್ ಜಿಐಸಿಡಿ ನಿರ್ದೇಶಕ ಸಿ ನಾಗರಾಜ ತಿಳಿಸಿದ್ದಾರೆ.

ರೋಗ ಲಕ್ಷಣ ಕಂಡುಬಂದವರು 104 ಆರೋಗ್ಯ ಸಹಾಯವಾಣಿ (ಕಾಲ್ ಸೆಂಟರ್) ಗೆ ಕರೆ ಮಾಡಬಹುದಾಗಿದೆ. ಅಲ್ಲಿ ಕರೆಗಳನ್ನು ಸ್ವೀಕರಿಸಲು ಮತ್ತು ಜನರಿಗೆ ಮಾರ್ಗದರ್ಶನ ನೀಡಲು ಎರಡು ಆಸನಗಳನ್ನು ಕಾಯ್ದಿರಿಸಲಾಗಿದೆ.

ಸೋಮವಾರದವರೆಗೆ 312 ಕರೆಗಳನ್ನು ಸ್ವೀಕರಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜನರು ಸೋಪ್ ಮತ್ತು ನೀರಿನಿಂದ ಆಗಾಗ್ಗೆ ಕೈ ತೊಳೆಯುವುದರ ಜೊತೆಗೆ ಸೀನುವಾಗ ಇಲ್ಲವೇ ಕೆಮ್ಮುವಾಗ ಕರವಸ್ತ್ರ ಇಲ್ಲವೇ ಟವಲ್ ನಿಂದ ಮೂಗು ಮತ್ತು ಬಾಯಿ ಮುಚ್ಚಿಕೊಳ್ಳಬೇಕು ಎಂದು ಡಾ.ಪ್ರಕಾಶ್ ಹೇಳಿದ್ದಾರೆ.

ಕರೊನವೈರಸ್ ಪೀಡಿತ ದೇಶಗಳಿಂದ ಆಗಮಿಸುವವರು ರೋಗಲಕ್ಷಣ ಇದ್ದರೂ, ಇರದಿದ್ದರೂ ಬಂದ ದಿನದಿಂದ 28 ದಿನಗಳವರೆಗೆ ಕಟ್ಟುನಿಟ್ಟಾಗಿ ಮನೆಯಲ್ಲಿ ಪ್ರತ್ಯೇಕವಾಗಿರಬೇಕು ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ, ಕೇರಳದ ಕಾಸರಗೋಡಿನಲ್ಲಿ ಮೂರನೇ ಕರೋನವೈರಸ್ ಪ್ರಕರಣ ದೃಢಪಟ್ಟ ನಂತರ ರಾಜ್ಯ ಸರ್ಕಾರ ಮಂಗಳೂರಿನಲ್ಲಿ ಕಟ್ಟೆಚ್ಚರ ಘೋಷಿಸಿದೆ.

ಮಂಗಳೂರಿನಿಂದ ಚೀನಾಕ್ಕೆ ನೇರ ವಿಮಾನವಿಲ್ಲದಿದ್ದರೂ, ವಿದೇಶಗಳಿಂದ ಅನೇಕ ಪ್ರಯಾಣಿಕರು ನಗರಕ್ಕೆ ಆಗಮಿಸುತ್ತಾರೆ. ಮುನ್ನೆಚ್ಚರಿಕೆಯಾಗಿ ಕಣ್ಗಾವಲು ತಂಡ ಜಿಲ್ಲೆಯಲ್ಲಿ ಹೆಚ್ಚು ನಿಗಾ ವಹಿಸುತ್ತಿದೆ. ಈವರೆಗೆ ಯಾವುದೇ ಪ್ರಕರಣಗಳು ವರದಿಯಾಗಿಲ್ಲವಾದರೂ, ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚಿನ ಎಚ್ಚರಿಕೆ ವಹಿಸಿದೆ.

ವಿಮಾನ ನಿಲ್ದಾಣದಲ್ಲಿ ಕೊರೊನಾವೈರಸ್ ರೋಗಲಕ್ಷಣಗಳನ್ನು ಹೊಂದಿರುವವರು ಕಂಡು ಬಂದರೆ ವರದಿ ಮಾಡುವಂತೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ತಿಳಿಸಿದ್ದಾರೆ.

ಕೊರೊನಾವೈರಸ್ ರೋಗಲಕ್ಷಣ ಇರುವವರು ಆರೋಗ್ಯ ಇಲಾಖೆಯನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಮನವಿ ಮಾಡಿದ್ದಾರೆ. ‘ಕಾಸರಗೋಡಿನಿಂದ ಮಂಗಳೂರಿಗೆ ದಿನಕ್ಕೆ ಕನಿಷ್ಠ 240 ಟ್ರಿಪ್ ಗಳನ್ನು ಕೆಎಸ್ ಆರ್ ಟಿಸಿಯ 40 ಬಸ್ ಗಳು ನಿರ್ವಹಿಸುತ್ತಿವೆ. ಅಷ್ಟೇ ಸಂಖ್ಯೆಯ ಬಸ್ ಗಳನ್ನು ಕೇರಳ ನಿರ್ವಹಿಸುತ್ತಿದೆ, ಪ್ರತಿದಿನ ಸುಮಾರು 12,000 ರಿಂದ 14,000 ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ.’ ಎಂದು ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಕ ಅರುಣ್ ತಿಳಿಸಿದ್ದಾರೆ.

‘ಜಿಲ್ಲೆಯ ಎಲ್ಲಾ ವೈದ್ಯಕೀಯ ಕಾಲೇಜುಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ತುರ್ತು ಸಂದರ್ಭಗಳಲ್ಲಿ ಪ್ರತ್ಯೇಕ ವಾರ್ಡ್‍ಗಳನ್ನು ಸಿದ್ಧವಾಗಿರಿಸಲು ಸಹ ಸೂಚಿಸಲಾಗಿದೆ.’ “ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Comments are closed.