ಉಡುಪಿ: ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಒಬ್ಬನೇ ಮತದಾರ ಎರಡೂ ಕಡೆಗಳಲ್ಲಿ ನೊಂದಾಯಿತನಾಗಿದ್ದರೆ, ಆತ ವಾಸವಿಲ್ಲದ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರನ್ನು ರದ್ದುಪಡಿಸುವಂತೆ ಆಯುಕ್ತರು ಭೂಮಾಪನ ಮತ್ತು ಪದನಿಮಿತ್ತ ನಿರ್ದೇಶಕರು ಭೂಮಿ ಹಾಗೂ ಯುಪಿಓಆರ್ ಮತ್ತು ಜಿಲ್ಲಾ ಮತದಾರರ ಪಟ್ಟಿ ವೀಕ್ಷಕ ಮುನೀಷ್ ಮೌದ್ಗಿಲ್ ಸೂಚಿಸಿದ್ದಾರೆ. ಅವರು ಮಂಗಳವಾರ, ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ, ಜಿಲ್ಲೆಯ ಮತದಾರರ ಪಟ್ಟಿಯ ಸೇರ್ಪಡೆ, ತಿದ್ದುಪಡಿ, ರದ್ದುಗೊಳಿಸುವಿಕೆ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಒಬ್ಬನೇ ಮತದಾರ ಮತದಾರರ ಪಟ್ಟಿಯಲ್ಲಿ ಎರಡು ಕ್ಷೇತ್ರಗಳಲ್ಲಿ ನೊಂದಾಯಿತವಾಗಿರುವ ಬಗ್ಗೆ ಚುನಾವಣಾ ಆಯೋಗದ ತಂತ್ರಾಂಶದ ಮೂಲಕ ಹುಡುಕಲು ಸಾಧ್ಯವಿದ್ದು, ಒಬ್ಬನೇ ವ್ಯಕ್ತಿಯ ಭಾವಚಿತ್ರಗಳನ್ನು ತಂತ್ರಾಂಶ ನಿಖರವಾಗಿ ಪತ್ತೆ ಹಚ್ಚಲಿದ್ದು, ಅಂತಹ ಮತದಾರರ ಪಟ್ಟಿಯನ್ನು ಸಿದ್ದಪಡಿಸಿ, ಬಿ.ಎಲ್.ಓ ಗಳ ಮೂಲಕ ವಿಳಾಸವನ್ನು ಪರಿಶೀಲಿಸಿ, ಮತದಾರರು ಪ್ರಸ್ತುತ ವಾಸ್ತವ್ಯವಿರುವ ಕ್ಷೇತ್ರದಲ್ಲಿ ಹೆಸರು ಉಳಿಸಿ, ಬೇರೆಡೆ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ರದ್ದುಗೊಳಿಸಲು ಕ್ರಮ ಕೈಗೊಳ್ಳಿ, ಎರಡು ಕಡೆ ನೊಂದಾವಣೆಯಾಗಿರುವ ಕುರಿತಂತೆ ಸಾರ್ವಜನಿಕರು ಮತ್ತು ರಾಜಕೀಯ ಪಕ್ಷಗಳು ನೀಡುವ ಆಕ್ಷೇಪಣೆಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮುನೀಷ್ ಮೌದ್ಗಿಲ್ ಸೂಚಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಚುನಾವಣಾ ಅಯೋಗ ಸೂಚನೆಯಂತೆ ಒಟ್ಟು ಜನಸಂಖ್ಯೆಯ ಪ್ರಮಾಣಕ್ಕೆ ನಿಗಧಿಪಡಿಸಿದ ಪ್ರಮಾಣದಲ್ಲಿ ಮತದಾರರ ಸಂಖ್ಯೆ ಇರುವ ಬಗ್ಗೆ ಪರಿಶೀಲಿಸಿ, ವ್ಯತ್ಯಾಸ ಕಂಡುಬಂದಲ್ಲಿ ಮತ್ತೊಮ್ಮೆ ಕ್ಷೇತ್ರಮಟ್ಟದಲ್ಲಿ ಪರಿಶೀಲಿಸಿ, ಮತದಾರರ ಪಟ್ಟಿಯಲ್ಲಿರುವ ಜಿಲ್ಲೆಯಲ್ಲಿನ ರಾಜಕೀಯ ಮುಖಂಡರು ಮತ್ತು ಗಣ್ಯ ವ್ಯಕ್ತಿಗಳ ಪಟ್ಟಿಯನ್ನು ಸಿದ್ದಪಡಿಸಿಟ್ಟುಕೊಳ್ಳಿ, ಚುನಾವಣಾ ಸಂದರ್ಭದಲ್ಲಿ ಅವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ ಎಂದು ಸೂಚಿಸಿದರು.
ಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಪ್ರತಿನಿಧಿಗಳು, ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿಲ್ಲಾ ಚುನಾವಣಾ ತಹಸೀಲ್ದಾರ್ ಆನಂದಪ್ಪ ನಾಯಕ್ ಹಾಗೂ ಜಿಲ್ಲೆಯ ಎಲ್ಲಾ ತಹಸೀಲ್ದಾರ್ಗಳು ಉಪಸ್ಥಿತರಿದ್ದರು.
Comments are closed.