ಕರಾವಳಿ

ಕುಂದಾಪುರದಲ್ಲಿ ಭಜರಂಗಿಗಳಿಂದ ತಡರಾತ್ರಿ ನಡೆಯಿತು ‘ಆಪರೇಷನ್ ಗೂಳಿ’!

Pinterest LinkedIn Tumblr

ಕುಂದಾಪುರ: ಎರಡು ಕಾಲಿನಲ್ಲಿ ದುರ್ಮಾಂಸ ಬೆಳೆದು ರಕ್ತಸ್ರಾವದಿಂದ ಕಷ್ಟ ಪಡುತ್ತಿದ್ದ ಗೂಳಿಯೊಂದನ್ನು ಭಜರಂಗದಳ ಕಾರ್ಯಕರ್ತರು ಹಿಡಿದು ಪಶುವೈದ್ಯರ ಮೂಲಕ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

ಮಂಗಳವಾರ ಸಂಜೆಯಿಂದ ತಡರಾತ್ರಿಯವರೆಗೂ ಕುಂದಾಪುರ ಮೀನು ಮಾರ್ಕೇಟ್ ರಸ್ತೆಯ ಬಳಿ ಈ ಕಾರ್ಯಾಚರಣೆ ನಡೆದಿತ್ತು.

ಗೂಳಿಗೆ ಮತ್ತೆ ಚಿಕಿತ್ಸೆ….
ಕಳೆದ ವರ್ಷ ಕೊಡಿಗೆ ಹಗ್ಗ ಬಿಗಿಯಾಗಿ ತಲೆಯಲ್ಲಿ ಗಾಯಗೊಂಡಿದ್ದ ಸಂದರ್ಭವೂ ಈ ಗೂಳಿಯನ್ನು ಹಿಡಿದು ಚಿಕಿತ್ಸೆ ನೀಡುವುದರಲ್ಲಿ ಭಜರಂಗದಳ ಕಾರ್ಯಕರ್ತರು ಯಶಸ್ವಿಯಾಗಿದ್ದರು. ಸದ್ಯ ಅದೇ ಬಿಳಿ ಬಣ್ಣದ ಗೂಳಿ ಕಾಲು ಬಾಯಿ ರೋಗದಿಂದ ಬಳಲಿ ಎರಡು ಕಾಲಿನಲ್ಲಿ ದುರ್ಮಾಂಸ ಬೆಳೆದು ಒದ್ದಾಡುತ್ತಿತ್ತು. ಈ ಬಗ್ಗೆ ಸ್ಥಳಿಯರು ಹಿಂದೂ ಸಂಘಟನೆಯವರ ಗಮನಕ್ಕೆ ತಂದಿದ್ದರು. ಕೋಟೇಶ್ವರ, ಕುಂದಾಪುರ, ಬಸ್ರೂರು ಮೂರುಕೈ ಭಾಗದಿಂದ ತಂಡ ರಚಿಸಿಕೊಂಡು ಗೂಳಿಗೆ ಚಿಕಿತ್ಸೆ ನೀಡುವ ಸಲುವಾಗಿ ತೆರಳಿದ ಭಜರಂಗದಳ ಕಾರ್ಯಕರ್ತರು ಬೀಡಾಡಿ ಗೂಳಿಯನ್ನು ಪತ್ತೆಹಚ್ಚಿ ಹಿಡಿದು ಪಶುವೈದ್ಯರ ಮೂಲಕ ಚಿಕಿತ್ಸೆ ಕೊಡಿಸಿದ್ದಾರೆ. ಸ್ಥಳೀಯರ ಸಹಕಾರ ಹಾಗೂ ವೈದ್ಯರ ಸಲಹೆ ಸಹಕಾರದೊಂದಿಗೆ ಮರವೊಂದಕ್ಕೆ ಕಟ್ಟಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನೊಂದು ಕಪ್ಪು ಗೂಳಿ ಕೂಡ ನಡೆಯಲಾಗದೇ ಕಷ್ಟಪಡುತ್ತಿರುವ ಬಗ್ಗೆ ತಿಂಗಳ ಹಿಂದೆ ‘ಕನ್ನಡಿಗ ವರ್ಲ್ಡ್’ ವರದಿ ಮಾಡಿತ್ತು. ಈ ಗೂಳಿಯನ್ನು ಪತ್ತೆಹಚ್ಚಿ ಚಿಕಿತ್ಸೆ ಕೊಡಿಸುತ್ತೇವೆ ಎಂದು ಭಜರಂಗದಳ ಮುಖಂಡ ಸುರೇಂದ್ರ ಮಾರ್ಕೋಡು ತಿಳಿಸಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.